Latest

ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ ಜೊತೆ ಚಾಟ್ ಮಾಡುತ್ತಿದ್ದೀರಾ? – ಈ ಸುದ್ದಿ ಓದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಜೊತೆ ನೀವು ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿದ್ದೀರಾ? ಎಷ್ಟು ದಿನದಿಂದ ಚಾಟ್ ಮಾಡುತ್ತಿದ್ದೀರಿ?  ಏನೇನು ಸಮಸ್ಯೆ ಹೇಳಿಕೊಂಡಿದ್ದೀರಿ? ಏನಾದರೂ ಫೋಟೋ ಕಳಿಸಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ.

ಡಾ. ಪದ್ಮಿನಿ ಪ್ರಸಾದ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆಯೊಂದು ಕೆಲಸ ಮಾಡುತ್ತಿದೆ. ಯಾರೋ ಪದ್ಮಿನಿ ಪ್ರಸಾದ್ ಹೆಸರಲ್ಲಿ ಖಾತೆ ತೆರೆದು, ಅವರ ಫೋಟೋವನ್ನೂ ಹಾಕಿದ್ದಾರೆ. ಹಲವಾರು ಮಹಿಳೆಯರೊಂದಿಗೆ ನಿತ್ಯ ಚಾಟ್ ನಡೆಸುತ್ತಿದ್ದಾರೆ. ಅವರು ನಿಜವಾಗಿಯೂ ಪದ್ಮಿನಿ ಪ್ರಸಾದ್ ಎಂದು ತಿಳಿದ ಅದೆಷ್ಟೋ ಮಹಿಳೆಯರು ತಮ್ಮ ವಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಪರಿಹಾರ ನೀಡುವಂತೆ ಕೋರುತ್ತಿದ್ದಾರೆ. ಕೆಲವರು ತಮ್ಮ ಖಾಸಗಿ ಭಾಗಗಳ ಫೋಟೋವನ್ನೂ ತೆಗೆದು ಕಳುಹಿಸಿದ್ದಾರೆ.

ಪದ್ಮಿನಿ ಪ್ರಸಾದ್ ಹೆಸರಲ್ಲಿ ನಕಲಿ ಖಾತೆ ಇರುವುದು ಪರಿಚಯಸ್ತರೊಬ್ಬರು ತಿಳಿಸಿದಾಗ ಪದ್ಮಿನಿ ಪ್ರಸಾದ ಅವರಿಗೆ ಗೊತ್ತಾಗಿದೆ. ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರತಿ ನಿತ್ಯ ರಾತ್ರಿ 10 ರಿಂದ 11.30ರ ವರೆಗೆ ತಮ್ಮೊಂದಿಗೆ ಸಮಸ್ಯೆಗಳ ಕುರಿತು ಚಾಟ್ ಮಾಡುವಂತೆ ತಿಳಿಸಿರುವ ನಕಲಿ ಖಾತೆ ನಡೆಸುವವರು, ಸಮಸ್ಯೆಗಳನ್ನು ಕೇಳಿ ಖಾಸಗಿ ಭಾಗಗಳ ಫೋಟೋ ಕಳಿಸುವಂತೆ ಕೋರುತ್ತಾರೆ. ವಯಕ್ತಿಕ ಮಾಹಿತಿಗಳನ್ನೆಲ್ಲ ಕಲೆ ಹಾಕುತ್ತಾರೆ. ಎಷ್ಟೋ ಮಹಿಳೆಯರು, ನಿಜವಾಗಿಯೂ ಪದ್ಮಿನಿ ಪ್ರಸಾದ್ ಜೊತೆಗೇ ಚಾಟ್ ಮಾಡುತ್ತಿದ್ದೇವೆ ಎಂದು ತಿಳಿದು ಹಲವಾರು ಮಾಹಿತಿಗಳನ್ನು, ಫೋಟೋಗಳನ್ನು ಶೇರ್ ಮಾಡಿದ್ದಾರೆ.

ತಾವು ಯಾರೊಂದಿಗೂ ಆನ್ ಲೈನ್ ನಲ್ಲಿ ಸಮಸ್ಯೆಗಳ ಕುರಿತು ಚರ್ಚಿಸುವುದಿಲ್ಲ. ಯಾರಿಗೇ ಸಮಸ್ಯೆ ಇದ್ದರೂ ನೇರವಾಗಿ ಭೇಟಿಯಾಗಿ ಮಾತ್ರ ಚರ್ಚಿಸಬೇಕು. ಈ ರೀತಿ ಯಾರಾದರೂ ಚಾಟ್ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ ಎಂದು ಪದ್ಮಿನಿ ಪ್ರಸಾದ್ ಕೋರಿದ್ದಾರೆ.

ಪೊಲೀಸರು ಈ ಕುರಿತು ಕ್ರಮದ ಭರವಸೆ ನೀಡಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button