Kannada NewsKarnataka NewsLatest

ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಪ್ರಗತಿ – ಸಚಿವ ಭೈರತಿ ಬಸವರಾಜ್

 ಪೌರಕಾರ್ಮಿಕರಿಗೆ ಉಚಿತ ಮನೆ ಭರವಸೆ

ಪ್ರಗತಿವಾಹಿನಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – :ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಬಿ.ಎ.ಬಸವರಾಜ್ ಅವರು ಗುರುವಾರ (ಜ.೭) ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಮಹಾನಗರ ಪಾಲಿಕೆಯ ವಾಣಿಜ್ಯ ಕಟ್ಟಡಗಳ ಕಾಮಗಾರಿ ಪರಿಶೀಲನೆ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇನ್ನೂ ಎರಡು ತಿಂಗಳುಗಳಲ್ಲಿ ವಾಣಿಜ್ಯ ಮಳಿಗೆಗಳ ಕಾಮಗಾರಿಗಳು ಸಂಪೂರ್ಣಗೊಳ್ಳುತ್ತಿದ್ದು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಮಳೆಗೆಗಳನ್ನು ನೀಡಲಾಗುವುದು ಎಂದರು.
ನಗರದಲ್ಲಿರುವ ಪೌರಕಾರ್ಮಿಕರಿಗೆ ಉಚಿತವಾಗಿ ಮನೆಗಳು ನೀಡುವುದಾಗಿ ಹೇಳಿದರು. ಮೊದಲನೇ ಹಂತದಲ್ಲಿ ೪೮ ಮನೆಗಳ ನಿರ್ಮಾಣ ಮಾಡುತಿದ್ದು, ೨ನೇ ಹಂತದಲ್ಲಿ ಸುಮಾರು ೧೫೮ ಮನೆಗಳ ನಿರ್ಮಾಣ ಮಾಡಲಾಗುವುದು. ಅದಕ್ಕೆ ಟೆಂಡರ್ ಕೂಡ ಕರೆಯಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಆ ಕಾಮಗಾರಿಗಳನ್ನು ಆರಂಭ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೂಡ ವೀಕ್ಷಿಸಿ ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಎಲ್ಲೆಲ್ಲಿ ಸಮಸ್ಯೆಗಳಾಗಿವೆ. ಎಲ್ಲವನ್ನೂ ವೀಕ್ಷಿಸಿ ಸಮಾಲೋಚನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗುವುದು.
ಈಗಾಗಲೇ ಆರಂಭಿಸಲಾಗಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಬಸವರಾಜ್ ಅವರು ಸೂಚನೆ ನೀಡಿದರು.
ಮುಖ್ಯಮಂತ್ರಿಗಳು ೧೨೫ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದಾರೆ ಅದರನ್ವಯ ಎಲ್ಲಾ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಶುಕ್ರವಾರ(ಜ.೮) ನಡೆಯಲಿರುವ ಸಭೆಯಲ್ಲಿ ಸ್ಮಾರ್ಟ ಸಿಟಿ ಯೋಜನೆ ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿ ಬಂದಾಗ ನಡೆದಿದ್ದ ಕೆಲಸಗಳಿಗೆ ಹೋಲಿಸಿದರ ಪ್ರಗತಿ ಕಂಡುಬಂದಿದೆ. ಕಳೆದ ೩ ದಿನಗಳಿಂದ ಹುಬ್ಬಳ್ಳಿ-ಧಾರವಾಡ , ತುಮಕೂರು, ದಾವಣಗೆರೆ ಹಾಗೂ ಬೆಳಗಾವಿಯಲ್ಲಿ ಪರಿಶೀಲನೆ ನಡೆಸುತ್ತಿದ್ದು ಮಹಾನಗರ ವ್ಯಾಪ್ತಿಯಲ್ಲಿ ನಡೆದಿರುವ ಸ್ಮಾರ್ಟ ಸಿಟಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬಸವರಾಜ್ ತಿಳಿಸಿದರು.

ಬೆಳಗಾವಿಗೆ ೨೪x೭ ಕುಡಿಯುವ ನೀರಿನ ಯೋಜನೆ:

ಇನ್ನು ಕೆಲವೇ ದಿನಗಳಲ್ಲಿ ವಿಶ್ವ ಬ್ಯಾಂಕ್ ನೆರವಿನಿಂದ ೮೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ಹುಬ್ಬಳ್ಳಿ ಧಾರವಾಡ ಹಾಗೂ ಗುಲ್ಬರ್ಗಾ ಜಿಲ್ಲೆಯಲ್ಲಿ ೨೪x೭ ಕುಡಿಯುವ ನೀರಿನ ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಒಟ್ಟಾರೆಯಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದರು.
ನಂತರ ಪೌರಕಾರ್ಮಿಕರ ವಸತಿ ಸಂಕೀರ್ಣ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಬಹುಪಯೋಗಿ ಕಟ್ಟಡ ಮತ್ತಿತರ ಕಾಮಗಾರಿಗಳನ್ನು ನಗರಾಭಿವೃದ್ಧಿ ಸಚಿವ ಬಸವರಾಜ್ ಅವರು ಪರಿಶೀಲಿಸಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ ಹೊಸಮನಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್ ಮತ್ತಿತರರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button