೧೧ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.೨೧ ರಿಂದ ೨೮ ರವರೆಗೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಏಳು ದಿನಗಳ ಪ್ರತಿಷ್ಠಿತ ೧೧ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.೨೧ ರಿಂದ ಆರಂಭವಾಗಲಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ೨೧ ರಂದು ಸಂಜೆ ೬ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಿತ್ರೋತ್ಸವ ಉದ್ಘಾಟಿಸಲಿದ್ದು, ಸಪ್ತಭಾಷಾ ನಟ ಅನಂತನಾಗ, ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಹುಲ್ ರಾವೈಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.೨೨ ರಿಂದ ರಾಜಾಜಿ ನಗರದ ಒರಾಯನ್ ಮಾಲ್ನ ಹನ್ನೊಂದು ಪಿವಿಆರ್ ಚಿತ್ರಮಂದಿರಗಳಲ್ಲಿ ೬೦ ರಾಷ್ಟ್ರಗಳ ೨೨೫ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವ ಆರಂಭದ ಚಲನಚಿತ್ರವಾಗಿ ಇರಾನ್ ನಿರ್ದೇಶಕ ಪೇಮನ್ ಮಾದಿ ನಿರ್ದೇಶಿಸಿರುವ “ಬಾಂಬ್, ಎ ಲವ್ ಸ್ಟೋರಿ” ಪ್ರದರ್ಶನವಾಗಲಿದೆ. ಮುಕ್ತಾಯದ ಸಿನಿಮಾ ಆಗಿ ಮತ್ತೊಂದು ಇರಾನ್ ಸಿನಿಮಾ “ಟೇಲ್ ಆಫ್ ದಿ ಸಿ” ಪ್ರದರ್ಶನಗೊಳ್ಳಲಿದೆ.
ಪೋಲೆಂಡ್ನ ಖ್ಯಾತ ಚಲನಚಿತ್ರ ನಿರ್ದೇಶಕ ಕ್ರಯ್ಜೋಫ್ ಜನ್ನುಸಿ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಾರ್ಯಕಾರಿ ನಿರ್ಮಾಪಕ ಮಾರ್ಕ್ ವುಡ್, ಆಸ್ಟ್ರೇಲಿಯಾದ ಸ್ಕ್ರಿಪ್ಟ್ ಸಲಹಾಗಾರ್ತಿ ಕ್ಲೈರ್ ಡಬ್ಬಿನ್, ಮಾರ್ಕ್ ಶಿಲ್ಲಿಂಗ್, ಕಜ್ವನ್ ಝೂಲೆನ್, ನಾಕೂಮ್ ಮಾಚೆಚ್, ಜಪಾನಿನ ವಿಮರ್ಶಕಿ ಕುನ್ನೆಟ್ ಸೆಬೋನಿಯನ್, ನೆದರ್ಲೆಂಡ್, ಇಸ್ರೇಲ್, ಟರ್ಕಿಗಳಿಂದ ವಿದೇಶಿ ಪ್ರತಿನಿಧಿಗಳು, ಜ್ಯೂರಿಗಳು ಆಗಮಿಸಲಿದ್ದಾರೆ. ಇರಾನ್ನ ಹೆಸರಾಂತ ನಿರ್ದೇಶಕ ಅಲಿ ಇಬ್ರಾಹಿಮಿ, ಕಜಕಿಸ್ತಾನದ ನಿರ್ಮಾಪಕಿ ಎಲಿನಾ ಲೆರಿನೊವಾ ಆಗಮಿಸಲಿದ್ದಾರೆ. ಚೀನಾ, ಶ್ರೀಲಂಕಾ, ಫಿಲಿಪಿನ್ಸ್, ಹಾಂಕಾಂಗ್, ಮಲೇಶಿಯಾ, ಸಿಂಗಾಪುರ, ಇಂಡೋನೇಶಿಯಾ, ಕೊರಿಯಾ ಮೊದಲಾದ ದೇಶಗಳ ಚಲನಚಿತ್ರಗಳು ಪ್ರದರ್ಶಿತವಾಗಲಿದ್ದು, ಅವುಗಳ ನಿರ್ದೇಶಕರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ, ಬರ್ಲಿನ್, ಕಾನ್ಸ್, ವೆನ್ನಿಸ್, ಟೊರೊಂಟೊ, ಗೋವಾ, ಮುಂಬೈ, ಕೇರಳ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಹಲವಾರು ಶ್ರೇಷ್ಠ ಚಿತ್ರಗಳನ್ನು ನೋಡುವ ಅವಕಾಶ ಈ ಚಿತ್ರೋತ್ಸವದಲ್ಲಿ ಸಿಗಲಿದೆ.
ಕಳೆದ ವರ್ಷ ನಮ್ಮನ್ನಗಲಿದ ಚಿತ್ರರಂಗದ ಗಣ್ಯರಾದ ಅಂಬರೀಷ, ಸಿ.ಎಚ್. ಲೋಕನಾಥ, ಎಂ.ಎನ್. ವ್ಯಾಸರಾವ್ ಹಾಗೂ ಬಂಗಾಳಿ ಚಿತ್ರ ಜಗತ್ತಿನ ಮೃಣಾಲ್ ಸೇನ್ ಅವರಿಗೆ ನೆನಪಿನಾಂಜಲಿ ಸಲ್ಲಿಸುವ ಸಲುವಾಗಿ ಅವರ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನವಾಗಲಿದೆ.
“ಪ್ರಕೃತಿ ವಿಕೋಪ” ವಿಷಯವನ್ನು ಕೇಂದ್ರೀಕರಿಸಿದ ಸಾಕ್ಷ್ಯಚಿತ್ರಗಳ ವಿಭಾಗದಲ್ಲಿ ಹಲವಾರು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಲ್ಲದೆ, ಜೀವನ ಚರಿತ್ರೆ ಆಧರಿಸಿದ ಬಯೋಪಿಕ್ ವಿಭಾಗದಲ್ಲಿ ನಟ ರೋಮಿ ಶಿಂಡ್ಲರ್, ರಿತುಪರ್ಣೊ ಘೋಷ್, ಕವಿ ದೊಡ್ಡರಂಗೇಗೌಡ, ಸಾವಯವ ಕೃಷಿಕ ನಾರಾಯಣರೆಡ್ಡಿ ಹಾಗೂ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಗಳು ಅವರನ್ನು ಕುರಿತ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಗಾಂಧೀಜಿ-೧೫೦ ಎಂಬ ಶೀರ್ಷಿಕೆಯಲ್ಲಿ ಗಾಂಧೀಜಿಯವರನ್ನು ಸ್ಮರಿಸುವ, ಅವರ ಕುರಿತಾಗಿ ನಿರ್ಮಾಣಗೊಂಡಿರುವ ನಾಲ್ಕು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. “ಅನ್ಸಂಗ್ ಇನ್ಕ್ರೆಡಿಬಲ್ ಇಂಡಿಯಾ” ಶೀರ್ಷಿಕೆಯಲ್ಲಿ ಅಪರೂಪದ ಭಾಷಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಚಿತ್ರೋತ್ಸವದ ಏಳೂ ದಿನ ಚಿತ್ರಕಥಾ ಕಮ್ಮಟವಿರುತ್ತದೆ. ಮಾಸ್ಟರ್ ಕ್ಲಾಸ್ ವಿಭಾಗದಲ್ಲಿ ಜಗತ್ತಿನ ಖ್ಯಾತ ನಿರ್ದೇಶಕರ ಉಪನ್ಯಾಸ ಹಾಗೂ ಅವರೊಂದಿಗೆ ಸಂವಾದ ಕಾರ್ಯಕ್ರಮವಿರುತ್ತದೆ. ಬೆಂಗಳೂರಿನ ಹಿತೈಷಿಣಿ ಸಂಸ್ಥೆ ನಡೆಸಿಕೊಡುವ ಮಹಿಳಾ ವಿಷಯ ಕುರಿತಂತೆ ಸಂವಾದವಿರುತ್ತದೆ.
ವಿಧಾನ ಸಭೆಯ ಬ್ಯಾಂಕ್ವೆಟ್ ಹಾಲ್ನಲ್ಲಿಯೇ ಫೆ.೨೮ ರಂದು ಸಂಜೆ ೬ಕ್ಕೆ ಚಿತ್ರೋತ್ಸವದ ಮುಕ್ತಾಯ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪುರಸ್ಕೃತವಾದ ಚಲನಚಿತ್ರಗಳಿಗೆ ಬಹುಮಾನ ವಿತರಿಸಲಿದ್ದಾರೆ.
ಪ್ರತಿನಿಧಿ ನೋಂದಣಿ :
ಪ್ರತಿನಿಧಿ ಶುಲ್ಕ
ಸಾರ್ವಜನಿಕರಿಗೆ ರೂ.೮೦೦/-,
ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಚಿತ್ರಸಮಾಜಗಳ ಸದಸ್ಯರಿಗೆ ರೂ.೪೦೦/
ಈ ಕೆಳಗಿನ ಜಾಗಗಳಲ್ಲಿ ನೋಂದಾಯಿಸಿಕೊಳ್ಳಬಹುದು
೧. ಚಲನಚಿತ್ರ ಅಕಾಡೆಮಿ ಕಾರ್ಯಾಲಯ,
ಕನ್ನಡ ಚಲನಚಿತ್ರ ಅಮೃತೋತ್ಸವ ಭವನ,
ವರ್ತುಲ ರಸ್ತೆ, ನಂದಿನಿ ಬಡಾವಣೆ, ಬೆಂಗಳೂರು -೫೬೦೦೯೬,
೨. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ,
ಕ್ರೆಸೆಂಟ್ ರಸ್ತೆ, ಹೈಗ್ರೌಂಡ್ಸ್, ಬೆಂಗಳೂರು – ೫೬೦ ೦೦೧
೩. ಸುಚಿತ್ರಾ ಫಿಲಂ ಸೊಸೈಟಿ,
೯ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ
ಬೆಂಗಳೂರು -೫೬೦೦೭೦
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ