ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆರ್ ಎಸ್ಎಸ್ ಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಕಿದ್ದು ಮುಸ್ಲಿಂ ಟೋಪಿಯೇ ಹೊರತು ಆರ್ ಎಸ್ ಎಸ್ ಟೋಪಿಯಲ್ಲ ಎಂದು ತಿರುಗೇಟು ಹಾಕಿದ್ದಾರೆ.
ನಮ್ಮ ಕುಟುಂಬ ಜನಸಂಘದಿಂದ ಬಂದಿದೆ. ನಾವು ಆರ್ ಎಸ್ಎಸ್ ಟೋಪಿ ಹಾಕುತ್ತಿದ್ದೆವು ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸತೀಶ್ ಜಾರಕಿಹೊಳಿ, ನಮ್ಮ ಕುಟುಂಬಕ್ಕೂ ಆರ್ ಎಸ್ ಎಸ್ ಗೂ ಯಾವುದೇ ಸಂಬಂಧವಿಲ್ಲ. ಅವರು ಏಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ನಾವೆಂದೂ ಆರ್ ಎಸ್ ಎಸ್ ಟೋಪಿ ಹಾಕಿಲ್ಲ ಎಂದರು.
ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿದ್ದು ಅಧಿಕಾರ ಎಂಜಾಯ್ ಮಾಡಲಿ, ಆದರೆ ಸಿದ್ಧಾಂತ ಬಿಡುವುದು ಬೇಡ. ಸುಳ್ಳು ಹೇಳುವುದು ಬೇಡ ಎಂದೂ ಅವರು ಹೇಳಿದರು.
ಕಾಂಗ್ರೆಸ್ ಸೇರಿದಾಗ ಮುಸ್ಲಿಂ ಟೋಪಿ ಹಾಕಿದ್ದಾರೆ. ನಮ್ಮ ಕುಟುಂಬ ಬಡವರು, ದೀನ, ದಲಿತರು, ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಒಳ್ಳಯ ಕೆಲಸ ಮಾಡಿದೆ. ಅದನ್ನೆಲ್ಲ ಮರೆಯುವುದು ಬೇಡ ಎಂದೂ ಎಚ್ಚರಿಸಿದರು.
ರಮೇಶ್ ಆರ್ ಎಸ್ ಎಸ್ ಚಡ್ಡಿ ಅಥವಾ ಟೋಪಿ ಹಾಕಿದ್ದನ್ನು ನಾನೆಂದೂ ನೋಡಿಲ್ಲ. ಮುಸ್ಲಿಂ ಟೋಪಿ ಹಾಕಿದ್ದನ್ನು ನೋಡಿದ್ದೇನೆ ಎಂದು ಅವರು ಫೋಟೋವನ್ನೂ ಪ್ರದರ್ಶಿಸಿದರು.
ಜಾರಕಿಹೊಳಿ ಕುಟುಂಬ ಜನಸಂಘದಿಂದ ಬಂದಿದ್ದು -ರಮೇಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ