ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬ್ರಹ್ಮ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಬಿಳಿ ಗಡ್ಡ, ಮೀಸೆ, ಚರ್ತುಮುಖಿ, ಚರ್ತುಭುಜಧಾರಿ, ಶ್ವೇತ ವಸ್ತ್ರಧಾರಿ, ಕಮಲಾಸನಧಾರಿ, ವೃದ್ಧ ದೇವತೆ. ಸಾಮಾನ್ಯವಾಗಿ ಬ್ರಹ್ಮನ ಉಲ್ಲೇಖ ಎಲ್ಲಾ ಧರ್ಮಗ್ರಂಥಗಳಲ್ಲಿ ಇದೆ. ಆದಿದೇವ, ಸೃಷ್ಟಿಕರ್ತ, ಆದಮ್, ಆಡಮ್, ಬ್ರಹ್ಮ, ಭಾಗ್ಯವಿಧಾತ, ತ್ರಿರ್ಮೂತಿಗಳಲ್ಲಿ ಒಬ್ಬ ಮುಂತಾದ ಅನೇಕ ನಾಮಗಳು ಅವನಿಗೆ ಇವೆ. ವಿಷ್ಣುವಿನ ನಾಭಿಯಿಂದ ಬ್ರಹ್ಮ ಹುಟ್ಟಿದ ಎಂದು ಪುರಾಣಗಳಲ್ಲಿ ಬರೆಯಲಾಗಿದೆ. ಅವನ ವಾಹನ ಹಂಸ, ಆಸನ ಕಮಲದ ಹೂವು, ನಾಲ್ಕು ಕೈಗಳಲ್ಲಿ ವೇದ, ಕಮಲದ ಹೂವು, ಲೇಖನಿ, ಶಾಸ್ತ್ರಗಳನ್ನು ತೋರಿಸಲಾಗಿದೆ.
ಪುರಾಣಗಳಲ್ಲಿ ಅನೇಕ ದಂತಕಥೆಗಳು ಇವೆ. ಬ್ರಹ್ಮನಿಗೆ ಪೂಜೆ ಏಕಿಲ್ಲ? ಒಮ್ಮೆ ತ್ರಿಮೂರ್ತಿಗಳಲ್ಲಿ ಸರ್ವಶ್ರೇಷ್ಠ ಯಾರು? ಎಂಬ ವಿಷಯ ಬಂದಾಗ ಶಿವನು ತಾನೇ ಸರ್ವಶ್ರೇಷ್ಠನೆಂದು ಆಕಾಶದಿಂದ ಕೆಳಗೆ ಇಳಿದು ಬೃಹತ್ ಪ್ರಕಾಶಮಯ ಜ್ಯೋತಿರ್ಲಿಂಗದ ಆಕಾರ ತಾಳುತ್ತಾನೆ. ಜ್ಯೋತಿಯು ಎಷ್ಟು ದೊಡ್ಡದಾಗಿದೆ ಎಂಬುದನ್ನು ಕಂಡುಕೊಳ್ಳಲು ಶಿವನು ಬ್ರಹ್ಮ ಮತ್ತು ವಿಷ್ಣುವಿಗೆ ಹೇಳುತ್ತಾನೆ. ಬ್ರಹ್ಮ ಆಕಾಶದಲ್ಲಿ ಮತ್ತು ವಿಷ್ಣು ಪಾತಾಳದಲ್ಲಿ ಹುಡುಕಲು ಹೋಗುತ್ತಾರೆ. ವಿಷ್ಣುವು ತನಗೆ ಅಂತ್ಯ ಹುಡುಕಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ ಬ್ರಹ್ಮ ಶಿವನನ್ನು ವಂಚಿಸಲು ಪ್ರಯತ್ನಿಸುತ್ತಾನೆ. ತಾನು ಜ್ಯೋತಿಯ ಮೇಲ್ಭಾಗದ ಅಂತ್ಯ ಕಂಡಿದ್ದೇನೆ, ಎಂದು ಶಿವನ ಮುಂದೆ ಸುಳ್ಳು ಹೇಳಲು ಕೇದಗಿ ಹೂವನ್ನು ಒಪ್ಪಿಸುತ್ತಾನೆ. ಇದು ಶಿವನಿಗೆ ಗೊತ್ತಾಗಿ ಬ್ರಹ್ಮನಿಗೆ ಇನ್ನು ಮಂದೆ ಪೂಜಿಸಲಾಗುವುದಿಲ್ಲ ಎಂದು ಶಾಪ ನೀಡುತ್ತಾನೆ. ಕೇದಗಿ ಹೂವಿಗೂ ಪೂಜೆಗೆ ಯೋಗ್ಯವಿಲ್ಲವೆಂದು ಶಾಪ ಸಿಗುತ್ತದೆ. ಇನ್ನೊಂದು ಕಥೆಯಲ್ಲಿ ಸಪ್ತ ಋಷಿಗಳಲ್ಲಿ ಕೋಪಿಷ್ಟನಾದ ಭೃಗು ಋಷಿ ಬ್ರಹ್ಮನನ್ನು ಕಾಣಲು ಹೋದಾಗ, ಅವನು ತನ್ನ ಸತಿಯ ಜೊತೆಗೆ ಮಗ್ನವಾಗಿರುತ್ತಾನೆ. ಅದನ್ನು ಕಂಡ ಋಷಿಗೆ ಕೋಪಬಂದು ಬ್ರಹ್ಮನಿಗೆ ಪೂಜೆ ಆಗಬಾರದು ಎಂದು ಶಾಪ ನೀಡುತ್ತಾನೆ. ಮತ್ತೊಂದು ಕಥೆಯಲ್ಲಿ ಬ್ರಹ್ಮನ ಐದನೇ ತಲೆಯನ್ನು ಶಿವನು ಕತ್ತರಿಸುತ್ತಾನೆ. ಇವೆಲ್ಲಾ ದಂತಕಥೆಗಳು.
‘ಜಗತ್‍ಪಿತ ಬ್ರಹ್ಮ’ನ ವಿಶ್ವವಿಖ್ಯಾತ ಏಕೈಕ ಪುರಾತನ ಮಂದಿರ ರಾಜಸ್ಥಾನದ ಅಜ್ಮೇರ್ ಹತ್ತಿರ ಪುಷ್ಕರದಲ್ಲಿದೆ. ಇತ್ತೀಚೆಗೆ ವಿಶ್ವದಾದ್ಯಂತ ಅನೇಕ ಬ್ರಹ್ಮ ಮಂದಿರಗಳು ಇವೆ. ಅವುಗಳೆಂದರೆ – ಅಸೊತ್ರ ಬಾರಮೇರ್, ರಾಜಸ್ಥಾನ; ‘ಬ್ರಹ್ಮಪುರೀಶ್ವರ’ ತಿರುಪತ್ತೂರ್ ಮತ್ತು ಕುಂಭಕೋಣಂ, ತಮಿಳನಾಡು; ‘ಆದಿಬ್ರಹ್ಮ’ ಖೊಂಖಾದ ಕುಲು ಕಣಿವೆ, ಹಿಮಾಚಲ ಪ್ರದೇಶ; ಕರಮಾಲಿ ಕರಂಬೋಲಿಯಮ್, ಪಣಜಿ ಗೋವ; ಕಾಳಹಸ್ತ್ರಿ, ತಿರುಪತಿ, ಆಂಧ್ರ ಪ್ರದೇಶ; ಖೇಡಬ್ರಹ್ಮ ಗುಜರಾತ್; ಮಂಗಳವೇಡ್, ಸೊಲ್ಲಾಪುರ, ಮಹಾರಾಷ್ಟ್ರ; ಕರಿವೊಬನಹಳ್ಳಿ, ಬೆಂಗಳೂರು, ಕರ್ನಾಟಕ; ಕಾಂಬೋಡಿಯಾದ ಅತಿ ದೊಡ್ಡ ಬ್ರಹ್ಮಮಂದಿರ; ಥೈಲ್ಯಾಂಡ್‍ನಲ್ಲಿನ ಅತಿಸುಂದರ ಬ್ರಹ್ಮ ಮಂದಿರ ಇತ್ಯಾದಿ. ಥೈಲ್ಯಾಂಡ್‍ನಲ್ಲಿ ಇರುವಾನಿನ ಕೆಲವು ಹಳ್ಳಿಗಳಲ್ಲಿ ಬ್ರಹ್ಮನಿಗೆ ಪೂಜೆಯನ್ನು ದಿನನಿತ್ಯ ಸಲ್ಲಿಸಲಾಗುತ್ತದೆ.
ಆದರೆ ಈಶ್ವರೀಯ ವಿಶ್ವವಿದ್ಯಾಲಯದ ಇತಿಹಾಸದಲ್ಲಿ, ಬ್ರಹ್ಮಾರವರ ಚರಿತ್ರೆಯೇ ಬೇರೆಯಾಗಿದೆ. ಅವರು ತ್ಯಾಗಿ, ತಪಸ್ವಿ, ಪುರಿಷಾರ್ಥಿ, ಪರಮಾರ್ಥಿ, ಪರಮಶ್ರೇಷ್ಠ, ಯೋಗಿಯಾಗಿರುವುದಿಂದ ಅವರ ಪೂಜೆ ನಡೆಯುವುದಿಲ್ಲ.
‘ಅವಜಾನಂತಿ ಮಾಂಮೂಢಾ ಮಾನುಷೀಂತನುಮಾಶ್ರಿತಮ್.
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್. (ಗೀ.ಅ. 9, ಶ್ಲೋ-11)
ನನ್ನ ಪರಮಭಾವವನ್ನು ಅರಿಯದ ಮೂಢಮತಿ ಜನರು ಮನುಷ್ಯ ಶರೀರದಲ್ಲಿ ಅವತರಿಸುವ ನಾನು ಈಶ್ವರನನ್ನು ತುಚ್ಛನೆಂದು ತಿಳಿದುಕೊಳ್ಳುತ್ತಾರೆ. ಅಂದರೆ ಯೋಗಮಾಯೆಯಿಂದ ಜಗತ್ತಿನ ಉದ್ಧಾರಕ್ಕಾಗಿ ಮನುಷ್ಯನ ಶರೀರದಲ್ಲಿ ಅವತರಿಸಿರುವ ನಾನು ಪರಮೇಶ್ವರನನ್ನು ಸಾಧಾರಣ ಮನುಷ್ಯರು ನಂಬುವುವುದಿಲ್ಲ. ಬ್ರಹ್ಮಾರವರ ಕರ್ತವ್ಯ ಸ್ಥಾಪನೆಯಾಗಿದ್ದು, ಇದನ್ನು ಅವರು ಮಾಡಿ ಹೋಗಿದ್ದಾರೆ. ಈಗಲೂ ಅವರು ಸೂಕ್ಷ್ಮ ದೇಹದಿಂದ ಮಾಡುತ್ತಿದ್ದಾರೆ.
ಪ್ರಜಾಪಿತ ಬಹ್ಮ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ನಿರಾಕಾರ ಪರಮಪಿತ ಪರಮಾತ್ಮನಿಂದ ‘ಪ್ರಜಾಪಿತ ಬ್ರಹ್ಮಾರವರ ಸಾಕಾರ ಮಾಧ್ಯಮದ ಮೂಲಕ 1937 ರಲ್ಲಿ ಸಿಂಧ್ ಹೈದರಾಬಾದ್‍ನಲ್ಲಿ ಸ್ಥಾಪಿಸಲ್ಪಟ್ಟಿತು. 1950 ರಲ್ಲಿ ಇದು ಭಾರತದ ಅಬುಪರ್ವತಕ್ಕೆ ಸ್ಥಳಾಂತರಗೊಂಡಿತು. ವರ್ತಮಾನ ಸಮಯದಲ್ಲಿ ತನ್ನ 8500 ಶೈಕ್ಷಣಿಕ ಸೇವಾಕೇಂದ್ರಗಳ ಮೂಲಕ 132 ದೇಶಗಳಲ್ಲಿ ಈಶ್ವರೀಯ ಜ್ಞಾನ ಮತ್ತು ಸಹಜ ರಾಜಯೋಗ ಶಿಕ್ಷಣವನ್ನು ನೀಡುತ್ತಾ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡಲು ಸೇವಾನಿರತವಾಗಿದೆ. ಬ್ರಹ್ಮ್ಮಾಬಾಬಾರವರ ಮೂಲಕ ಸ್ವಯಂ ಪರಮಾತ್ಮನೇ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನೀಡಿರುವ ಆಧ್ಯಾತ್ಮಿಕ ಶಿಕ್ಷಣ ಲಕ್ಷಾಂತರ ಜನರಿಗೆ ನವಜೀವನ ನೀಡಿದೆ. ಇದು ಕೇವಲ ಒಬ್ಬರ ಅನುಭವವಲ್ಲ, ಲಕ್ಷಾಂತರ ನಿತ್ಯ ವಿದ್ಯಾರ್ಥಿಗಳ ಅನುಭವವಾಗಿದೆ.
ವಿಶ್ವದಲ್ಲಿ ಮಹಾನ್ ವ್ಯಕ್ತಿತ್ವ ಹೊಂದಿದ `ದಾದಾ ಲೇಖರಾಜ’ (ಪ್ರಜಾಪಿತ ಬ್ರಹ್ಮಾರವರ ಪೂರ್ವಾಶ್ರಮದ ಹೆಸರು) ರವರ ಜನ್ಮವು ಡಿಸೆಂಬರ್ 15, 1876ರಲ್ಲಿ ಸಿಂಧ್ ಹೈದರಾಬಾದ್‍ನ ಕೃಪಲಾನಿ ಕುಲದಲ್ಲಿ ವಲ್ಲಭಾಚಾರಿ ಭಕ್ತರ ಮನೆಯಲ್ಲಿ ಆಯಿತು. ಇವರ ತಂದೆಯವರು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಆದರೆ ಲೇಖರಾಜರವರು ತಮ್ಮ ಚಾರಿತ್ರ್ಯ, ಬುದ್ಧಿಚಾತುರ್ಯ ಹಾಗೂ ದೃಢಪ್ರಯತ್ನದಿಂದ ಗೋಧಿ ಮಾರುವ ಸಾಮಾನ್ಯ ವ್ಯಾಪಾರಿಯಿಂದ ಒಬ್ಬ ಪ್ರಸಿದ್ಧ ವಜ್ರದ ವ್ಯಾಪಾರಿಯಾದರು. ತಮ್ಮ ಈ ವ್ಯಾಪಾರದಿಂದಾಗಿ ಅವರು ನೇಪಾಳದ ರಾಜಕುಲ, ಉದಯಪುರದ ಮಹಾರಾಜ, ವೈಸ್‍ರಾಯ್ ಮತ್ತು ಧನಾಢ್ಯ ವ್ಯಕ್ತಿಗಳೊಡನೆ ಒಡನಾಟವನ್ನು ಹೊಂದಿದ್ದರು. ಜನರು ಇವರನ್ನು ಪ್ರೀತಿಯಿಂದ `ದಾದಾ’ ಎಂದು ಕರೆಯುತಿದ್ದರು. ಆದರೆ ನಿರಾಕಾರ ಪರಮಾತ್ಮನು ಪರಕಾಯ ಪ್ರವೇಶಿಸಿದ ನಂತರ ಅವರಿಗೆ `ಪ್ರಜಾಪಿತ ಬ್ರಹ್ಮಾ’ ಎಂದು ನಾಮಕರಣ ಮಾಡಿದರು.
ಪರಮಾತ್ಮನ ಸಾಕಾರ ಮಾಧ್ಯಮವಾಗಿದ್ದ ದಾದಾರವರು ಸಾಧಾರಣ ಮಾನವರಾಗಿದ್ದರೂ ಎಲ್ಲಾ ದೃಷ್ಟಿಕೋನದಿಂದಲೂ ಉತ್ತಮ ಹಾಗೂ ಅದ್ಭುತ ವ್ಯಕ್ತಿಯಾಗಿದ್ದರು. ಬಾಬಾರವರ ಚಿತ್ರ(ದೇಹ) ಮತ್ತು ಚಾರಿತ್ರ್ಯಗಳೆರಡೂ ಸುಂದರವಾಗಿದ್ದವು. ಅವರು ಸಾಕ್ಷಾತ್ ದೇವತಾ ಸ್ವರೂಪರಾಗಿದ್ದರು. ಅವರನ್ನು ನೋಡಿದಾಗ ಅನೇಕರಿಗೆ ಶ್ರೀಕೃಷ್ಣನ ಸಾಕ್ಷಾತ್ಕಾರವಾಗುತ್ತಿತ್ತು. ಬಾಬಾರವರು ಮಹಾನ್ ಭಕ್ತರಾಗಿದ್ದರು. ಅವರು ನಿಯಮ ಮತ್ತು ನೀತಿಗಳನ್ನು ಉಲ್ಲಂಘಿಸಿ ಯಾವ ಕರ್ಮಗಳನ್ನೂ ಮಾಡುತ್ತಿರಲಿಲ್ಲ. ಬಾಬಾರವರಿಗೆ ಲೌಕಿಕ ಗುರುಗಳಲ್ಲಿ ಅಪಾರವಾದ ನಂಬಿಕೆ ಇತ್ತು. ಸದ್ಗುರು ಪರಮಾತ್ಮನ ಆಜ್ಞೆಯನ್ನು ಅವರು ಸಂಪೂರ್ಣವಾಗಿ ಪಾಲನೆ ಮಾಡುತ್ತಿದ್ದರು.
ದಾದಾರವರಿಗೆ ಒಂದು ದಿನ ಮುಂಬೈನಲ್ಲಿರುವ ಬಬೂಲನಾಥ ಮಂದಿರದ ಪಕ್ಕದಲ್ಲಿದ್ದ ತಮ್ಮ ಮನೆಯಲ್ಲಿ ಅತೀಂದ್ರಿಯ ಸುಖದ ಅನುಭವವಾಗ ತೊಡಗಿತು. ಆಗ ಅವರಿಗೆ ಚತುರ್ಭುಜ ವಿಷ್ಣುವಿನ ದಿವ್ಯ ಸಾಕ್ಷಾತ್ಕಾರವಾಯಿತು. ಸ್ವಲ್ಪ ಕಾಲದ ನಂತರ ದಾದಾರವರು ವಾರಾಣಾಸಿಗೆ ಹೋದರು. ಅಲ್ಲಿಯೂ ಸಹ ಏಕಾಂತದಲ್ಲಿ ಕುಳಿತು ಪ್ರಭು-ಚಿಂತನೆಯಲ್ಲಿ ತಲ್ಲೀರರಾದಾಗ ಅನೇಕ ದಿವ್ಯ ಸಾಕ್ಷಾತ್ಕಾರ ಹಾಗೂ ವಿಚಿತ್ರ ಅನುಭವಗಳಾದವು. ಕ್ರಮೇಣ ದಾದಾರವರಿಗೆ ಪರಮಾತ್ಮನೇ ದಿವ್ಯಬುದ್ಧಿ, ದಿವ್ಯದೃಷ್ಟಿದಾತನೆಂದು ಸ್ಪಷ್ಟವಾಯಿತು. ಒಂದು ದಿನ ದಾದಾರವರಿಗೆ ನಿರಾಕಾರ ಜ್ಯೋತಿರ್ಬಿಂದು ಶಿವನ ಸ್ವರೂಪ ಮತ್ತು ಕಲಿಯುಗಿ ಸೃಷ್ಟಿಯ ಮಹಾವಿನಾಶದ ಸಾಕ್ಷಾತ್ಕಾರವಾಯಿತು. ಅಮೇರಿಕಾ ಮತ್ತು ಯೂರೋಪಿಯನ್ನರು ಭಯಂಕರವಾದ ಅಣುಬಾಂಬುಗಳ ಮೂಲಕ ವಿನಾಶ ಮಾಡುತ್ತಿದ್ದುದ್ದನ್ನು ಅವರು ಕಂಡರು. ಆ ಸಮಯದಲ್ಲಿ ಇನ್ನು ಅಣುಬಾಂಬುಗಳ ಸಂಶೋಧನೆ ಆಗಿರಲಿಲ್ಲ. ತದ ನಂತರ ದಾದಾರವರು ತಮ್ಮ ವಜ್ರದ ವ್ಯಾಪಾರವನ್ನು ಬಿಟ್ಟು ತಮ್ಮ ಪಾಲಿನ ಹಣವನ್ನು ಈಶ್ವರನ ಸೇವೆಗೆ ಸಮರ್ಪಣೆ ಮಾಡಿದರು. ಕ್ರಮೇಣ ದಾದಾರವರಿಗೆ ತಮ್ಮ ಶರೀರದಲ್ಲಿ ನಿರಾಕಾರ ಪರಮಪಿತ ಪರಮಾತ್ಮ ಶಿವನೇ ಪ್ರವೇಶಿಸಿ ದಿವ್ಯ ಜ್ಞಾನವನ್ನು ಸತ್ಯಯುಗಿ ಸೃಷ್ಟಿಯ ಸ್ಥಾಪನೆಗಾಗಿ ನೀಡುತ್ತಿದ್ದಾನೆ ಎಂಬ ವಿಚಾರವು ಸ್ಪಷ್ಟವಾಯಿತು. ನಿರಾಕಾರ ಪರಮಾತ್ಮ ಶಿವನು ದಾದಾರವರ ಶರೀರದಲ್ಲಿ ಪ್ರವೇಶ ಮಾಡಿ ನರ-ನಾರಿಯರ ಆಹಾರ-ವಿಹಾರ, ವ್ಯವಹಾರ, ದೃಷ್ಟಿ-ವೃತ್ತಿಗಳನ್ನು ಶುದ್ಧ ಮಾಡುತ್ತಾ ಅವರಿಗೆ ಆಧ್ಯಾತ್ಮಿಕ ಶಿಕ್ಷಣಕ್ಕಾಗಿ ವ್ಯವಸ್ಥೆ ಮಾಡಿದರು. ಹೀಗೆ ಸಿಂಧ್‍ನಲ್ಲಿ ಬಾಬಾರವರ ನೇತೃತ್ವದಲ್ಲಿ `ಓಂ ಮಂಡಳಿ’ ಎಂಬ ಹೆಸರಿನಲ್ಲಿ ಪ್ರಾರಂಭವಾದ ಸತ್ಸಂಗವು ಇಂದು ಈಶ್ವರೀಯ ವಿಶ್ವ ವಿದ್ಯಾಲಯವಾಗಿ 84 ವರ್ಷಗಳಿಂದ ಅಮೋಘ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.
ಬಾಬಾರವರ ವ್ಯಕ್ತಿತ್ವವು ಬಹಳ ಪ್ರಭಾವಶಾಲಿ ಆಗಿತ್ತು. “ಬೇಡುವುದಕ್ಕಿಂತ ಸಾಯುವುದು ಮೇಲು” ಎಂಬ ಪಾಠವನ್ನು ಅವರು ಎಲ್ಲ ಯಜ್ಞವತ್ಸರಿಗೂ ಕಲಿಸುತ್ತಿದ್ದರು. ರಾಜರಂತೆ ಶಿಷ್ಟಾಚಾರ, ಆತಿಥ್ಯ, ಉದಾರತೆ, ಸ್ವಚ್ಛತೆ ಮೊದಲಾದ ಗುಣಗಳನ್ನು ಬೆಳೆಸಿಕೊಳ್ಳಲು ಶಿಕ್ಷಣ ನೀಡುತ್ತಿದ್ದರು. ಸರ್ವರಲ್ಲಿ ಸ್ನೇಹವಿಡುವ, ಎಲ್ಲರ ಬಗ್ಗೆ ಕಲ್ಯಾಣದ ಭಾವನೆ ಇಟ್ಟುಕೊಳ್ಳುವ, ಎಲ್ಲ ಧರ್ಮದವರನ್ನು ತಮ್ಮವರೆಂದು ಭಾವಿಸುವ ಮತ್ತು ಶಿವತಂದೆಯ ಪ್ರೇಮವನ್ನು ಪ್ರಕಟಿಸುವ ಸಂಸ್ಕಾರವನ್ನು ಬ್ರಹ್ಮಾಬಾಬಾರವರು ಹೊಂದಿದ್ದರು. ಭಾರತ ಮತ್ತು ವಿಶ್ವದ ಸೇವೆಗಾಗಿ ತಮ್ಮ ತನು-ಮನ-ಧನಗಳನ್ನು ಉಪಯೋಗಿಸಬೇಕೆಂದು ಮಕ್ಕಳಿಗೆ ಪ್ರೇರಣೆ ನೀಡುತ್ತಿದ್ದರು. ಅವರು `ದಧೀಚಿ’ ಋಷಿಯಂತೆ ಯಜ್ಞದ ಸೇವೆಗೆ ಶರೀರವನ್ನೇ ಅರ್ಪಿಸಿದರು. ಅವರ ಸ್ಥೂಲ ಶರೀರವನ್ನು ತತ್ವಗಳಲ್ಲಿ ವಿಲೀನ ಗೊಳಿಸಿದ ಸ್ಥಳದಲ್ಲಿ ನಿರ್ಮಿಸಲಾದ `ಶಾಂತಿ-ಸ್ತಂಭ’ವು ಇಂದಿಗೂ ಪವಿತ್ರತೆ-ಶಾಂತಿಯ ಕಿರಣಗಳನ್ನು ಪಸರಿಸುತ್ತಿದೆ. ಬಾಬಾರವರ ತ್ಯಾಗವೃತ್ತಿಯು ಅತ್ಯಂತ ಉನ್ನತ ಮಟ್ಟದ್ದಾಗಿತ್ತು. ಅವರು ಸಾಧಾರಣ ವಸ್ತ್ರಧಾರಿಗಳಾಗಿದ್ದರು. ಹೊಸ ಕಟ್ಟಡಗಳನ್ನು ನಿರ್ಮಿಸಿದ್ದರೂ ಅವು ಮಕ್ಕಳಿಗಾಗಿ ಎಂದು ಹಳೆಯ ಕೋಣೆಯಲ್ಲಿ ವಾಸಿಸುತ್ತಿದ್ದರು. ಬಾಬಾರವರು ಎಲ್ಲಾ ಸೇವಾ-ಕಾರ್ಯಗಳಲ್ಲಿ ಮಕ್ಕಳನ್ನೇ ಮುಂದಿಡುತ್ತಿದ್ದರು. ಎಂತಹ ಅಸಾಧ್ಯವಾದ ಕಾರ್ಯವಾಗಿದ್ದರೂ ಬಾಬಾರವರು ನಿಶ್ಚಯ ಬುದ್ಧಿಯಿಂದ ಯೋಗಯುಕ್ತರಾಗಿ ಕಾರ್ಯವನ್ನು ಮಾಡಿ ಸಫಲಗೊಳಿಸುತ್ತಿದ್ದರು. ಅವಗುಣಗಳನ್ನು ನೋಡಿದರೂ ಗುಣಧಾರಿಗಳನ್ನಾಗಿ ಮಾಡಲು ಯತ್ನಿಸುತ್ತಿದ್ದರು. ಬ್ರಹ್ಮ್ಮಾರವರು ನೀಡಿರುವ ಸಂದೇಶ – ‘ಮಧುರ ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ಒಬ್ಬ ಪರಮಪಿತ ಶಿವನನ್ನು ನೆನಪು ಮಾಡಿ. ಏಕೆಂದರೆ ಆ ಪರಮಪಿತನ ಸ್ಮತಿಯಿಂದ ಅನೇಕ ಜನ್ಮಗಳ ಪಾಪಕರ್ಮಗಳು ಭಸ್ಮವಾಗುವವು. ನರ-ನಾರಿಯರು ಸಂಪೂರ್ಣ ಪವಿತ್ರರಾಗಿ ಸುಖ ಶಾಂತಿಯ ಸಾಮ್ರಾಜ್ಯದಲ್ಲಿ ನಾರಾಯಣ ಮತ್ತು ಲಕ್ಷ್ಮಿಯ ಪದವಿ ಪಡೆಯುವರು.’
‘ಮಧುರ ಮಕ್ಕಳೇ, ಈಗ ದೇಹದ ಧರ್ಮಗಳನ್ನು ಬಿಟ್ಟು ಸ್ವಧರ್ಮ ಅಂದರೆ ಶಾಂತಿಯ°è ಸ್ಥಿತರಾಗಿರಿ. ಹಿಂದೂ, ಮುಸಲ್ಮಾನ, ಕ್ರೈಸ್ತ, ನರ-ನಾರಿ ಎಂಬ ದೇಹಾಭಿಮಾನವನ್ನು ತ್ಯಜಿಸಿ, ನಿಮ್ಮನ್ನು ನೀವು ಆತ್ಮ ಎಂದು ತಿಳಿದು, ಆ ಪರಮಪಿತನನ್ನು ನೆನಪು ಮಾಡಿ ಪವಿತ್ರ ಮತ್ತು ಯೋಗಿಗಳಾಗಿರಿ. ಈಗ ಕಲಿಯುಗದ ಅಂತಿಮ ಸಮಯವಿದೆ. ಕಲಿಯುಗಿ ಸೃಷ್ಟಿಯ ಮಹಾವಿನಾಶ ಸಮೀಪವಿದೆ. ನಾವು ಎಲ್ಲರೂ ಅಶರೀರಿಗಳಾಗಿ ಪರಮಧಾಮಕ್ಕೆ (ಆತ್ಮಗಳ ಮನೆ) ಹೋಗಬೇಕಾಗಿದೆ. ಆದ್ದರಿಂದ ವಿದೇಹಿಯಾಗಿ, ಆತ್ಮನಿಶ್ಚಯ ಮಾಡಿಕೊಳ್ಳಿರಿ. ಸತ್ಯಯುಗಿ ಸೃಷ್ಟಿಯ ಪುನರ್ ಸ್ಥಾಪನೆಯ ಕಾರ್ಯದಲ್ಲಿ ಸಹಯೋಗಿಗಳಾಗಿರಿ’.
ಅವರು ಇಟ್ಟಿರುವ 18 ಹೆಜ್ಜೆಗಳು ಇವತ್ತಿಗೂ ಎಲ್ಲಾ ಬ್ರಹ್ಮವತ್ಸರಿಗೆ ದಾರಿದೀಪ. ಅವುಗಳು ಈ ಕೆಳಗಿನಂತಿವೆ:
1. ಎಲ್ಲರಿಗೂ ಪ್ರೀತಿ ಹಾಗೂ ಗೌರವ ಕೊಟ್ಟು ಮುಂದುವರೆಸವುದು.
2. ಈಶ್ವರೀಯ ನಿಯಮದಂತೆ ನಡೆಯುವುದು ಮತ್ತು ನಡೆಸುವುದು.
3. ಗುಣಗಳನ್ನು ನೋಡುತ್ತಾ ಸೇವೆಯಲ್ಲಿ ತೊಡಗಿಸುವುದು.
4. ಖುಷಿಯಲ್ಲಿ ತರುವುದು ಮತ್ತು ಹಗುರ ಮಾಡುವುದು.
5. ಆಲಸ್ಯ ಮತ್ತು ಹುಡುಗಾಟಿಕೆಯಿಂದ ದೂರವಿದ್ದು ನಿದ್ರಾಜೀತರಾಗುವುದು.
6. ನಾನು ಎನ್ನುವ ಅಹಂಕಾರವನ್ನು ಸಂಪೂರ್ಣ ತ್ಯಜಿಸುವುದು.
7. ಸರ್ವಶ್ರೇಷ್ಠ ಯೋಗಿ.
8. ಸದಾ ನಿಶ್ಚಿಂತ ಮತ್ತು ಅಚಲ ಸ್ಥಿತಿ.
9. ಸದಾ ಅಪರಿಮಿತ ಖುಷಿ.
10. ಸಾಗರದ ಸಮಾನ ಗಂಭೀರ.
11. ಸಭ್ಯತೆ ಹಾಗೂ ಸದ್ವ್ಯವಹಾರ.
12. ಸ್ನೇಹ, ಸಂರಕ್ಷಣೆ ಮತ್ತು ಸಹಾಯ ಮಾಡುವುದರಲ್ಲಿ ನಿಪುಣ.
13. ಎಲ್ಲರಲ್ಲಿ ಸಾಮಥ್ರ್ಯವನ್ನು ತುಂಬುವ ಕಲೆ.
14. ದೇಹಾತೀತ ಮಾಡುವಂತಹ ಶಕ್ತಿಶಾಲಿ ದೃಷ್ಟಿ.
15. ಜೀವನದಲ್ಲಿ ಜ್ಞಾನ ಮತ್ತು ಪ್ರೇಮದ ಅದ್ಭುತ ಸಮ್ಮಿಲನ.
16. ಪ್ರತಿಯೊಂದು ಪರಿಸ್ಥಿತಿಯಲ್ಲಿ ಪರಮಾತ್ಮನ ನೆನಪು.
17. ಜೀವನದಲ್ಲಿ ಅದ್ಭುತವಾದ ಸಮತೋಲನೆ.
18 ಆತ್ಮಿಕದೃಷ್ಟಿ ಮತ್ತು ಸರ್ವರ ಶುಭಚಿಂತಕ.
ಜನವರಿ 18, 1969 ರಲ್ಲಿ ಪಿತಾಶ್ರೀಯವರು ದೈಹಿಕ ಶರೀರವನ್ನು ತ್ಯಜಿಸಿ ಸಂಪೂರ್ಣರಾದರು. ಅವರ ಅವ್ಯಕ್ತ ಸಹಯೋಗದಿಂದ ಈಶ್ವರೀಯ ಸೇವೆಯು ಮೊದಲಿಗಿಂತಲೂ ತೀವ್ರಗತಿಯನ್ನು ಪಡೆದು ಇಂದು ವಿಶ್ವದಾದ್ಯಂತ ಸುಮಾರು 132 ರಾಷ್ಟ್ರಗಳಲ್ಲಿ ಹರಡಿದೆ. ಸೂಕ್ಷ್ಮರೂಪದಿಂದ ಇಂದಿಗೂ ಪಿತಾಶ್ರೀಯವರು ಪ್ರತಿಯೊಬ್ಬರಿಗೂ ತಮ್ಮ ಜೊತೆಯ ಅನುಭವ ಮಾಡಿಸುತ್ತಾ ಹೆಜ್ಜೆ-ಹೆಜ್ಜೆಗೂ ಸಹಯೋಗ, ಸ್ನೇಹ ಮತ್ತು ಪ್ರೇರಣೆಯನ್ನು ನೀಡುತ್ತಿದ್ದಾರೆ. ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ಧರಿಸಿದಂತೆ ಪಿತಾಶ್ರೀಯವರು ತಮ್ಮ ಹಳೆಯ ದೇಹವನ್ನು ತ್ಯಜಿಸಿ ಸೂಕ್ಷ್ಮ ಶರೀರಧಾರಿಯಾಗಿ ವಿಶ್ವಸೇವೆ ಮಾಡುತ್ತಿದ್ದಾರೆ. ಸೂಕ್ಷ್ಮಲೋಕ ನಿವಾಸಿಯಾಗಿ ಅವರು ನಿತ್ಯ ಮಕ್ಕಳನ್ನು ಭೇಟಿ ಮಾಡುತ್ತಿದ್ದಾರೆ. ತಮ್ಮ ಛತ್ರಛಾಯೆಯ ಮೂಲಕ ಮಕ್ಕಳಿಗೆ ನಿರಂತರ ಸುರಕ್ಷಾ-ಕವಚವನ್ನು ನೀಡುತ್ತಾ ಬರುತ್ತಿದ್ದಾರೆ. ಇಂದು ಪಿತಾಶ್ರೀಯವರ 52ನೇ ಪುಣ್ಯತಿಥಿಯಾಗಿದೆ. ನಾವೆಲ್ಲರೂ ಆ ಅವ್ಯಕ್ತ ಆತ್ಮಕ್ಕೆ ನಮ್ಮ ಶ್ರದ್ಧಾಸುಮನಗಳನ್ನು ಸಲ್ಲಿಸೋಣ.
–ಬ್ರ.ಕು.ವಿಶ್ವಾಸ ಸೋಹೋನಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ