ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ, ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ರೈತರ ಪ್ರತಿಭಟನೆ ಆರಂಭವಾಗಿದ್ದು,ಬೆಂಗಳೂರಿನಲ್ಲಿ ಅನ್ನದಾತನ ರಣಕಹಳೆ ಭುಗಿಲೆದ್ದಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆ ಆರಂಭವಾಗಿದ್ದು, ಕೆಎಸ್ಆರ್ ರೈಲು ನಿಲ್ದಾಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಟ್ರ್ಯಾಕ್ಟರ್ ಮೂಲಕ ಫ್ರೀಂ ಪಾರ್ಕ್ ಗೆ ಆಗಮಿಸಿದ್ದು, ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ನ ಮಹಿಳಾ ಮುಖಂಡರು ಕಾಲ್ನಡಿಗೆ ಜಾಥಾ ಮೂಲಕ ಫ್ರೀಡಂ ಪಾರ್ಕ್ ಗೆ ಆಗಮಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶದ ಬಳಿಕ ರಾಜಭವನ ಚಲೋ ಪ್ರತಿಭಟನೆ ಆರಂಭವಾಗಲಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿದ್ದು, ಪೊಲೀಸರು ಪ್ರತಿಭಟನೆ ತಡೆಯಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಡಿ.ಕೆ ಶಿವಕುಮಾರ್, ನಮ್ಮ ಹೋರಾಟ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದ್ದು, ರಾಜಧಾನಿಗೆ ಆಗಮಿಸುತ್ತಿರುವ ಕಾಂಗ್ರೆಸ್, ಕಾರ್ಯಕರ್ತರು ಹಾಗೂ ರೈತರನ್ನು ರಸ್ತೆ ಮಧ್ಯೆ ತಡೆಯಲಾಗುತ್ತಿದೆ. ಒಂದೊಮ್ಮೆ ಪ್ರತಿಭಟನೆ ಹತ್ತಿಕ್ಕುವ ಯತ್ನ ನಡೆಸಿದರೆ ಅಲ್ಲಿಯೇ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ಎಂದು ಕರೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ