ಪ್ರಗತಿವಾಹಿನಿ ಸುದ್ದಿ; ರಾಮದುರ್ಗ: ರಾಮದುರ್ಗ ತಾಲೂಕಿನ ಸುರೇಬಾನದ ಹತ್ತಿರ ಕೊಳಚಿ ಕೆನಾಲ್ ನಲ್ಲಿ ಕಾಲು ಜಾರಿಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮಹಾಂತೇಶಗೌಡ ಪಾಟೀಲ (11) ಮೃತ ಬಾಲಕ. ಈತ ಸುರೇಬಾನದ ಪ್ರಗತಿ ವಿದ್ಯಾಲಯದಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ. ಶುಕ್ರವಾರ ಬೆಳಿಗ್ಗೆ ವಿದ್ಯಾಗಮ ತರಗತಿಗೆ ಹಾಜರಾಗಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೆನಾಲ್ ಹತ್ತಿರ ಇರುವ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಹಾಗೂ ಚಿಕ್ಕಪ್ಪನಿಗೆ ಮನೆಯಿಂದ ಊಟ ತೆಗೆದುಕೊಂಡು ಬಂದಿದ್ದಾನೆ. ಎಲ್ಲರೂ ಕೂಡಿ ಊಟ ಮಾಡಿದ್ದಾರೆ. ನಂತರ ಉಳಿದವರೆಲ್ಲ ಕಬ್ಬು ಕಡೆಯಲು ತೆರಳಿದ್ದಾರೆ. ಊಟದ ಪ್ಲೇಟುಗಳನ್ನು ತೊಳೆಯಲು ಹೊಲದ ಹತ್ತಿರ ಇರುವ ಕೆನಾಲ್ ಗೆ ಮಹಾಂತೇಶ ತೆರಳಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.
ಕೆಲ ಸಮಯವಾದರೂ ಮಗಬಾರದಿದ್ದಾಗ ಪೋಷಕರು ಕಾಲುವೆ ಹತ್ತಿರ ಬಂದು ನೋಡಿದಾಗ ಕಾಲುವೆ ದಂಡೆಯ ಮೇಲೆ ಪ್ಲೇಟುಗಳು ಬಿದ್ದಿದ್ದು, ಕಾಲುವೆ ದಂಡೆಯಲ್ಲಿ ಕಾಲು ಜಾರಿರುವ ಗುರುತುಗಳನ್ನು ನೋಡಿ ನೀರಿನಲ್ಲಿ ಹುಡುಕಾಡಿದ್ದಾರೆ. ಬಾಲಕ ಪತ್ತೆಯಾಗದ ಕಾರಣ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಎರಡು ಗಂಟೆಗೆ ಹೆಚ್ಚು ಕಾಲ ಕಾಲುವೆಯಲ್ಲಿ ಹುಡುಕಾಟ ನಡೆಸಿದ ನಂತರ ಬಾಲಕ ಪತ್ತೆಯಾಗಿದ್ದಾನೆ. ತಕ್ಷಣ ರಾಮದುರ್ಗ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.
ರಾಮದುರ್ಗ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ