Kannada NewsKarnataka NewsLatest
ಆಂಧ್ರ ಮಾದರಿಯಲ್ಲಿ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ- ಸಿಎಂಗೆ ಮನವಿ ಸಲ್ಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ದೇವಾಂಗ ಸಮಾಜದ ನೆರವಿಗೆ ಸರಕಾರ ತುರ್ತಾಗಿ ಧಾವಿಸಬೇಕು. ಸಮಾಜದ ಅಭಿವೃದ್ಧಿಗೆ ನಿಗಮವೊಂದನ್ನು ಸ್ಥಾಪಿಸಬೇಕು ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಯಡಿಯೂರಪ್ಪ ಅವರಿಗೆ ಲಕ್ಷ್ಮಿ ಹೆಬ್ಬಾಳಕರ್ ಮನವಿಯೊಂದನ್ನು ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕಿಂತಲೂ ಹೆಚ್ಚಿನ ದೇವಾಂಗ ಜನಾಂಗದವರು ವಾಸಿಸುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಳೇಭಾವಿ ಗ್ರಾಮದಲ್ಲಿ ಅಧಿಕವಾಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ, ಬೆಳಗಾವಿ ನಗರದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಸಮಾಜವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಕೊರೋನಾ ಸಂದರ್ಭದಲ್ಲಿ ಮತ್ತು ಕಳೆದ 2 ವರ್ಷ ಅಪ್ಪಳಿಸಿದ ಪ್ರವಾಹದಿಂದಾಗಿ ಜನಾಂಗದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಉದ್ಯೋಗ ಮಾಡಲೂ ಆಗದೆ, ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆಯೂ ಸಿಗದೆ ಪರದಾಡುವಂತಾಗಿದೆ. ಹಾಗಾಗಿ ಸರಕಾರ ಅವರ ನೆರವಿಗೆ ತಕ್ಷಣ ಬರಬೇಕು ಎಂದು ಹೆಬ್ಬಾಳಕರ್ ಕೋರಿದ್ದಾರೆ.
ಶಿವನ ತ್ರಿನೇತ್ರದಿಂದ ಉದ್ಭವಿಸಿದ ಶ್ರೀ ದೇವಲ ದೇವಾಂಗ ಮಹರ್ಷಿಯವರು ತ್ರಿಮೂರ್ತಿಗಳಾಗಿ ಹಾಗೂ ಇತರ ದೇವತೆಗಳಿಗೆ ವಸ್ತ್ರಗಳನ್ನು ನೇಯ್ದು ಕೊಟ್ಟು ದೇವಾಂಗ ಸಮಾಜದವರು ನೇಕಾರರೆನಿಸಿಕೊಂಡಿದ್ದಾರೆ. ಆದರೆ ಈಗ ಬೇರೆಯವರ ಮಾನ ಕಾಪಾಡುವ ಮೂಲ ನೇಕಾರರಿಗೆ ಸರಕಾರದಿಂದ ಯಾವುದೇ ರೀತಿಯ ಮಿಸಲಾತಿ ಮತ್ತಿತರ ಸೌಲಭ್ಯಗಳಿಲ್ಲ. ಈ ಹಿಂದೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ದೇವಾಂಗ ಸಮಾಜಕ್ಕೆ ಮೀಸಲಾತಿಯಿತ್ತು. ಈಗ ಸುಮಾರು 4 -5 ವರ್ಷಗಳ ಹಿಂದೆ ಅದನ್ನು ರದ್ದುಗೊಳಿಸಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.
ತಾವು ವಿವಿಧ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಬಡಜನರನ್ನು ಮೇಲೆತ್ತುವ ಅಭಿನಂದನಾರ್ಹ ಕಾರ್ಯ ಮಾಡಿದ್ದೀರಿ. ದೇವಾಂಗ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ಅವರು ಸರಕಾರದ ನೆರವು ಕೇಳುತ್ತಿರುವುದು ನ್ಯಾಯಬದ್ಧವಾಗಿದೆ. ಅವರ ಮನವಿಯನ್ನು ನೆರವೇರಿಸಲು ನಾನು ಮನಃಪೂರ್ವಕವಾಗಿ ಒಪ್ಪಿ ತಮ್ಮ ಅವಗಾಹಣೆಗಾಗಿ ತರುತ್ತಿದ್ದೇನೆ. ಅವರ ಮನವಿಯನ್ನು ಪುರಸ್ಕರಿಸಿ, ಆಂಧ್ರ ಪ್ರದೇಶದ ಮಾದರಿಯಲ್ಲಿ “ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ” ಸ್ಥಾಪಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ