ಬೆಳಗಾವಿಗೆ ಇಂದು 2 ವಿಶೇಷ ವಿಮಾನದಲ್ಲಿ 272 ಮಲೆಷಿಯನ್ ವಿದ್ಯಾರ್ಥಿಗಳು
ಮತ್ತೆ ರಂಗೇರಲಿದೆ ಮೆಡಿಕಲ್ ಕಾಲೇಜ್ ಕ್ಯಾಂಪಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಗೆ ಇಂದು 2 ವಿಶೇಷ ವಿಮಾನಗಳು ಆಗಮಿಸಲಿವೆ. ಮಲೇಷಿಯಾದಿಂದ ಇಂಡಿಗೋ ವಿಮಾನಗಳು ಬರಲಿದ್ದು, ಒಂದು ಸಂಜೆ 4 ಗಂಟೆಗೆ, ಇನ್ನೊಂದು ರಾತ್ರಿ 8 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿವೆ.
ಈ ಎರಡೂ ವಿಮಾನಗಳು ಮಲೇಷಿಯಾದಿಂದ ವಿದ್ಯಾರ್ಥಿಗಳನ್ನು ಹೊತ್ತು ತರಲಿವೆ. ಕೊರೋನಾ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ವಾಪಸ್ಸಾಗಿದ್ದ ಮಲೇಷಿಯನ್ ವಿದ್ಯಾರ್ಥಿಗಳು ಈಗ ಮತ್ತೆ ಬೆಳಗಾವಿಗೆ ವಾಪಸ್ಸಾಗಿ ಕಾಲೇಜು ತುಂಬಲಿದ್ದಾರೆ.
ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ಮಲೇಷಿಯನ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗಾಗಿಯೇ ವಿಶೇಷ (USM-KLE) ಮೆಡಿಕಲ್ ಕಾಲೇಜು ನಡೆಸುತ್ತಿದೆ. ಇದರಲ್ಲಿ ಸುಮಾರು 320 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಆದರೆ ಕೊರೋನಾ ಮಿತಿ ಮೀರುತ್ತಿರುವ ಸಂದರ್ಭದಲ್ಲಿ, ಅಂದರೆ 2020ರ ಏಪ್ರಿಲ್ ತಿಂಗಳಲ್ಲಿ ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ವಾಪಸ್ಸಾಗಿದ್ದರು. ಕೆಲವರು ಇಲ್ಲೇ ಉಳಿದುಕೊಂಡಿದ್ದರು. ವಾಪಸ್ಸಾದ 272 ವಿದ್ಯಾರ್ಥಿಗಳು ಇಂದು ಮತ್ತೆ ಬೆಳಗಾವಿಗೆ ಆಗಮಿಸುವರು.
ಮಲೇಷಿಯಾಕ್ಕೆ ಮರಳಿದ್ದ ವಿದ್ಯಾರ್ಥಿಗಳಿಗೆ ಈವರೆಗೂ ಆನ್ ಲೈನ್ ತರಗತಿ ನಡೆಯುತ್ತಿತ್ತು. ಈಗ ಕಾಲೇಜು ಶಿಕ್ಷಣ ಆರಂಭವಾಗಲಿದೆ. ಇಂದು 2 ವಿಮಾನಗಳ ಮೂಲಕ 272 ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಯುಎಸ್ ಎಂ-ಕೆಎಲ್ಇ ಸ್ಪೆಷಲ್ ಪ್ರೋಗ್ರಾಂ ಡೈರೆಕ್ಟರ್ ಡಾ. ಎಚ್.ಬಿ. ರಾಜಶೇಖರ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಇಂದು ಸಂಜೆ 4 ಗಂಟೆಗೆ ಬರುವ ವಿಮಾನ ಚೆನ್ನೈ ಮೂಲಕ ಬರಲಿದ್ದು, ಅದರಲ್ಲಿ 132 ವಿದ್ಯಾರ್ಥಿಗಳಿರಲಿದ್ದಾರೆ. ರಾತ್ರಿ 8 ಗಂಟೆಗೆ ಬೆಂಗಳೂರು ಮೂಲಕ ಆಗಮಿಸಲಿದ್ದು, ಅದರಲ್ಲಿ 140 ವಿದ್ಯಾರ್ಥಿಗಳಿರಲಿದ್ದಾರೆ. ಅವರೊಂದಿಗೆ ಮಲೇಷಿಯನ್ ವಿವಿಯ ಡೀನ್ ಒಬ್ಬರು ಸಹ ಆಗಮಿಸಲಿದ್ದು, ಅವರು ಇಲ್ಲಿಯೇ ಇದ್ದು, ವರ್ಷ ಪೂರ್ತಿ ಶೈಕ್ಷಣಿಕ ಚಟುವಟಿಕೆಗಳನ್ನು ಅವಲೋಕಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ