Latest

ಕುಗ್ರಾಮದಲ್ಲಿ ಮತ ಜಾಗ್ರತಿ ಮಾಡಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬುಡಕಟ್ಟು ಸಮುದಾಯವಿರುವ ಗರಡೊಳ್ಳಿ ಗ್ರಾಮ ಸುಮಾರು ೮೦ ಮನೆಗಳನ್ನು ಹೊಂದಿದ್ದು, ಸುಮಾರು ೧೫೦ ಕ್ಕೂ ಅಧಿಕ ಮತದಾರರನ್ನು ಹೊಂದಿದ ಗ್ರಾಮವಾಗಿದೆ. ಇಂತಹ ಹಿಂದುಳಿದ ಬುಡಕಟ್ಟು ಗ್ರಾಮಕ್ಕೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸ್ವತಃ ಭೇಟಿ ನೀಡಿರುವುದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿ, ಹಳಿಯಾಳ – ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ಗರಡೊಳ್ಳಿ ಗ್ರಾಮಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂಜೀವ್ ಕುಮಾರ್ ಅವರು ಮಂಗಳವಾರ ಭೇಟಿ ನೀಡುವ ಮೂಲಕ ಮತದಾನದ ಜಾಗೃತಿಯ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟಿದ್ದಾರೆ.

ಬುಡಕಟ್ಟು ಜನಾಂಗದವರಿಗೆ ಮತದಾನದ ಮಹತ್ವವನ್ನು ಸ್ವತಃ ರಾಜ್ಯ ಚುನಾವಣಾಧಿಕಾರಿಯೇ ಬಂದು ವಿವರಿಸಿದ ಅಪರೂಪದ ವಿದ್ಯಮಾನ ಇದಾಗಿದೆ.

ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಲು ಚುನಾವಣೆ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದೆ. ಹಿಂದುಳಿದವರು, ಬುಡಕಟ್ಟು ಜನಾಂಗದವರು ಸಹ ಮುಖ್ಯವಾಹಿನಿಗೆ ಬಂದು ಮತದಾನದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಶ್ರಮ ವಹಿಸುತ್ತಿದೆ.

ಹಳಿಯಾಳ ತಾಲೂಕು ಸಾಂಬ್ರಾಣಿ ಹೋಬಳಿಯಲ್ಲಿರುವ ಬುಡಕಟ್ಟು ಸಮುದಾಯವಿರುವ ಗ್ರಾಮವಾದ ಗರಡೊಳ್ಳಿಗೆ ಮಂಗಳವಾರ ಭೇಟಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಗ್ರಾಮದ ಮತದಾರರ ಜೊತೆಗೆ ಬೆರೆತು ಅವರ ಅಹವಾಲುಗಳನ್ನು ಸ್ವೀಕರಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೋ ಇಲ್ಲವೋ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಿದರು. ಹೆಸರು ಸೇರ್ಪಡೆ, ಯುವ ಮತದಾರರ ಹೆಸರು ನೋಂದಣಿ, ವಿಶೇಷ ಚೇತನ ಮತದಾರರ ಸೇರ್ಪಡೆ ಬಗ್ಗೆ ಕೂಲಂಕುಷವಾಗಿ ವೀಕ್ಷಿಸಿದರು.

ಬಳಿಕ ಗ್ರಾಮದ ಜನರಿಗೆ ಚುನಾವಣಾ ಮಹತ್ವವನ್ನು ತಿಳಿಸುತ್ತಾ, ತಾವು ಬುಡಕಟ್ಟು ಜನಾಂಗಕ್ಕೆ ಸೇರಿರುತ್ತೀರಿ, ಯಾವುದೇ ಕಾರಣಕ್ಕೆ ಹಿಂದುಳಿಯದೇ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ತಾವೆಲ್ಲರೂ ಭಾಗವಹಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಾಗಿದೆ ಎಂಬುವುದು ನಮ್ಮ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ನಾನು ಖುದ್ದು ಈ ಹಳ್ಳಿಗೆ ಭೇಟಿಯನ್ನು ನೀಡಿ ಹೆಸರು ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಡಿಸಿ ಡಾ. ಹರೀಶಕುಮಾರ ಕೆ., ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button