ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ವಿದ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಿತ್ರ ಟ್ವಿಸ್ಟ್ ಸಿಕ್ಕಿದ್ದು, ಅತ್ಯಾಚಾರ ನಡೆದ ಘಟನೆಯೇ ಸುಳ್ಳು ಎಂದು ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಹೈದರಾಬಾದ್ ನಲ್ಲಿ ಬಿ.ಫಾರ್ಮಾ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಆಟೋ ಚಾಲಕ ಹಾಗೂ ಇತರರು ಗ್ಯಾಂಗ್ ರೇಪ್ ನಡೆಸಿ ವಿವಸ್ತ್ರಗೊಳಿಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದರು ಎಂಬ ಸುದ್ದಿ ವರದಿಯಾಗಿತ್ತು. ಇದೀಗ ವಿದ್ಯಾರ್ಥಿನಿ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಇದು ವಿದ್ಯಾರ್ಥಿನಿಯೇ ಸೃಷ್ಟಿಸಿದ ಕಟ್ಟುಕಥೆ ಎಂದು ತಿಳಿದುಬಂದಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಭಾಗವತ್, ವಿದ್ಯಾರ್ಥಿನಿ ತನ್ನ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಮಹಿಳಾ ಡಿಸಿಪಿ ಮುಂದೆ ಹೇಳಿದ್ದಾಳೆ. ಹಿಂದೆ ಚಿಲ್ಲರೆ ವಿಷಯಕ್ಕೆ ಆಟೋ ಚಾಲಕರ ಜೊತೆ ನಡೆದಿದ್ದ ಜಗಳವನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ವಿದ್ಯಾರ್ಥಿನಿ ಅದಕ್ಕೆ ಪ್ರತಿಕಾರವಾಗಿ ಈ ಕಟ್ಟುಕಥೆ ಹೆಣೆದಿದ್ದಾಗಿ ತಿಳಿಸಿದ್ದಾಗಿ ಹೇಳಿದರು.
ಘಟನೆ ನಡೆದಿದೆ ಎಂದು ಹೇಳಲಾದ ದಿನದ ಸಿಸಿಟಿವಿ ದೃಶ್ಯ, ವಿದ್ಯಾರ್ಥಿನಿಯ ಮೊಬೈಲ್ ಹಾಗೂ ಗೂಗಲ್ ಮ್ಯಾಪ್ ಎಲ್ಲವನ್ನೂ ಪರಿಶೀಲನೆ ನಡೆಸಲಾಗಿದ್ದು, ಗ್ಯಾಂಗ್ ರೇಪ್ ನಡೆದಿದೆ ಎಂಬ ಸಂಗತಿಯೇ ಸುಳ್ಳು ಕಥೆ ಎಂಬುದು ಬಯಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ