Kannada NewsKarnataka NewsLatest

ಬೆಳಗಾವಿ ಮೃಗಾಲಯಕ್ಕೆ ಸಿಂಹ, ಹುಲಿ, ಚಿರತೆ : ಸತೀಶ್ ಜಾರಕಿಹೊಳಿ

ಶೀಘ್ರವೇ ಮೈಸೂರು ಮೃಗಾಲಯದ ದರ್ಜೆಗೆ

ಶೀಘ್ರವೇ ಮೃಗಾಲಯದಲ್ಲಿ ಹುಲಿ ಸಫಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ರಾಣಿ ಚನ್ನಮ್ಮ ಕಿರು ಮೃಗಾಲಯ ಉತ್ತರ ಕರ್ನಾಟಕದ ಹೆಮ್ಮೆಯಾಗಿದೆ. ಅದರ ಅಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳಿ ತಿಳಿಸಿದರು.
ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಮಂಗಳವಾರ (ಮಾ.೦೨) ಭೇಟಿ ನೀಡಿ ಮಾಧ್ಯಮಗೋಷ್ಠಿ ನಡೆಸಿದರು.

ಬೆಳಗಾವಿ ಝೂದಲ್ಲಿ ಸಿಂಹ

ಈಗಾಗಲೇ ಮೃಗಾಲಯಕ್ಕೆ 3 ಸಿಂಹಗಳು ಆಗಮಿಸಿವೆ. ಮುಂಬರುವ ದಿನಗಳಲ್ಲಿ ಹುಲಿ,ಚಿರತೆ, ಕರಡಿ ಮುಂತಾದ ಪ್ರಾಣಿಗಳನ್ನು ಕರೆತರುವ ಯೋಜನೆ ಇದ್ದು, ಅವುಗಳಿಗೆ ಬೇಕಾದ ವಾತಾವರಣ ಹಾಗೂ ಸೌಕರ್ಯಗಳ ವ್ಯವಸ್ಥೆ ಒದಗಿಸುವ ಕಾರ್ಯ ಜಾರಿಯಲ್ಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಪ್ರಾಣಿಗಳನ್ನು ವೀಕ್ಷಿಸಲು ಜನ ದೂರದ ಸ್ಥಳಗಳಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಜಿಲ್ಲೆಯಲ್ಲಿಯೇ ಇರುವ ಕಿರು ಮೃಗಾಲಯವನ್ನು ಶೀಘ್ರವೇ ಮೈಸೂರು ಮೃಗಾಲಯದ ದರ್ಜೆಗೆ ಏರಿಸಲಾಗುವುದು. ಮೃಗಾಲಯವು ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗುವುದು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಪ್ರವಾಸಿಗರಿಗೆ  ಮೃಗಾಲಯವು ಒಳ್ಳೆಯ ವೀಕ್ಷಣಾ ತಾಣವಾಗಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಮೃಗಾಲಯಕ್ಕೆ ಆಗಮಿಸುವ ವೀಕ್ಷಕರಿಗಾಗಿ ಉಪಹಾರ ಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಪ್ರಾಣಿಗಳಿಗಾಗಿ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು. ಮೃಗಾಲಯದ ಪ್ರಾಣಿಗಳನ್ನು ನೋಡಿಕೊಳ್ಳಲು ಮಾರ್ಕಂಡೇಯ ನದಿ ನೀರನ್ನು ಬಳಕೆ ಮಾಡಲಾಗುತ್ತಿದ್ದು,ನೀರಿನ ಕೊರತೆಯಾಗದಂತೆ ಸಂಗ್ರಹ ಮಾಡುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಶೀಘ್ರವೇ ಮೃಗಾಲಯದಲ್ಲಿ ಹುಲಿ ಸಫಾರಿ ವ್ಯವಸ್ಥೆ:
ಮೃಗಾಲಯಕ್ಕೆ ಬೆಂಗಳೂರಿನ ಬನ್ನೇರುಘಟ್ಟ  ಜೈವಿಕ ಉದ್ಯಾನವನದಿಂದ  ಕೃಷ್ಣ, ನಕುಲ ಹಾಗೂ ನಿರುಪಮಾ ಹೆಸರಿನ ೩ ಸಿಂಹಗಳು ಆಗಮಿಸಿವೆ. ಸಿಂಹಗಳ ವಿಶೇಷ ಕಾಳಜಿಗಾಗಿ ಮೈಸೂರಿನಿಂದ ಪರಿಣಿತರು ಆಗಮಿಸಿದ್ದಾರೆ. ಪಶು ವೈದ್ಯರು ದಿನನಿತ್ಯ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಎಲ್ಲ ಸಿಂಹಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಬಸವರಾಜ ಪಾಟೀಲ್ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಹುಲಿಗಳು ಆಗಮಿಸಲಿದ್ದು, ಪ್ರವಾಸಿಗರಿಗೆ ಹುಲಿ ಸಫಾರಿ ಸೌಲಭ್ಯದ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ೨ಕಿ.ಮೀ. ರಸ್ತೆಯ ವ್ಯವಸ್ಥೆ ಮಾಡಲಾಗುತ್ತಿದೆ. ಚಿರತೆ, ಕರಡಿ,ಜಿರಾಫೆ ಮುಂತಾದ ಪ್ರಾಣಿಗಳನ್ನು ಬನ್ನೇರುಘಟ್ಟ, ಮೈಸೂರು ಹಾಗೂ ಚಿತ್ರದುರ್ಗದಿಂದ ಮೃಗಾಲಯಕ್ಕೆ ತರುವುದಾಗಿ ಅವರು ಮಾಹಿತಿ ನೀಡಿದರು.
ಇನ್ನು, ಪ್ರಾಣಿಗಳನ್ನು ದತ್ತು ಪಡೆಯುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ್ ಹುಲಿ, ಚಿರತೆಗಳನ್ನು ದತ್ತು ಸ್ವೀಕರಿಸಿದರೆ ವರ್ಷಕ್ಕೆ ರೂ.೧ ಲಕ್ಷ ಹಾಗೂ ಜಿಂಕೆ ಇತರೆ ಪ್ರಾಣಿಗಳನ್ನು ದತ್ತು ಸ್ವೀಕರಿಸಿದರೆ ರೂ.೭,೦೦೦ದಿಂದ ರೂ.೧೦,೦೦೦ ವೆಚ್ಚವಾಗುವುದು ಎಂದು ತಿಳಿಸಿದರು. ಪ್ರಾಣಿಗಳನ್ನು ದತ್ತು ಪಡೆಯಲು ಶೀಘ್ರದಲ್ಲಿಯೇ ವ್ಯವಸ್ಥೆ ಮಾಡಲಾಗುವುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಬಸವರಾಜ ಪಾಟೀಲ್ ಅವರು ತಿಳಿಸಿದರು.
ಗೋಷ್ಠಿಯಲ್ಲಿ ಡಿಸಿಎಫ್ ಅಮರನಾಥ , ಎಸಿಎಫ್ ಮಲ್ಲನಾಥ ಕುಸನಾಳ, ಮೃಗಾಲಯ ವ್ಯವಸ್ಥಾಪಕರಾದ ರಾಕೇಶ್ ಅರ್ಜುನವಾಡ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button