ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವಕ್ತಪಡಿಸಿದ್ದು, ಇದು ಆರ್ ಎಸ್ ಎಸ್ ಅಜೆಂಡಾ ಇಂಥಹ ವಿಚಾರದ ಚರ್ಚೆ ಬೇಡ ಎಂದು ಗದ್ದಲವೆಬ್ಬಿಸಿದರು.
ಸ್ಪೀಕರ್ ವಿಶೇಷಾಧಿಕಾರ ದುರುಪಯೋಗ ಸರಿಯಲ್ಲ ಎಂದು ಕಾಂಗ್ರೆಸ್ ನ ಕೆ.ಆರ್ ರಮೇಶ್ ಕುಮಾರ್ ಹೇಳಿದರು. ಇದಕ್ಕೆ ಗರಂ ಆದ ಸ್ಪೀಕರ್ ನಿಮ್ಮ ಮಾತು ಘನತೆಗೆ ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ರಮೇಶ್ ಕುಮಾರ್ ನಿಮ್ಮ ಕೃಪೆಯಿಂದ ನನ್ನ ಘನತೆ ಹೆಚ್ಚಿಸಿಕೊಳ್ಳಬೇಕಿಲ್ಲ ಎಂದು ಹೇಳಿದರು. ಕಾಂಗ್ರೆಸ್ ವಿರೋಧದ ನಡುವೆಯೂ ಸ್ಪೀಕರ್ ಒಂದು ದೇಶ, ಒಂದು ಚುನಾವನೆ ವಿಚಾರ ಚರ್ಚೆಗೆ ಮುಂದಾದ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು.
ಈ ವೇಳೆ ಭದ್ರವಾತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸಂಗಮೇಶ್ ನಡೆಗೆ ಕಿಡಿಕಾರಿದ ಸ್ಪೀಕರ್, ಸದನದಲ್ಲಿ ಇಂತಹ ವರ್ತನೆ ಶೋಭೆಯಲ್ಲ. ಅಶಿಸ್ತಿನಿಂದ ನಡೆದುಕೊಂಡರೆ ಹೊರಗೆ ಹಾಕಬೇಕಾಗುತ್ತದೆ. ಸದನದಲ್ಲಿ ಗೌರವದಿಂದ ನಡೆದುಕೊಳ್ಳಿ, ಕ್ಷೇತ್ರದ ಜನತೆಗೆ ಅಗೌರವ ತೋರಬೇಡಿ ಎಂದು ಗುಡುಗಿದರು. ಬಳಿಕ ಡಿ.ಕೆ.ಶಿವಕುಮಾರ್ ಸಂಗಮೇಶ್ ಅವರಿಗೆ ಶರ್ಟ್ ಹಾಕಿದ ಘಟನೆ ನಡೆಯಿತು.
ಕಲಾಪದಲ್ಲಿ ಶರ್ಟ್ ಬಿಚ್ಚಿ ದುರ್ವರ್ತನೆ ಮೆರೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನು ಸದನದಿಂದ 1 ವಾರ ಕಾಲ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ