ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ವರ್ತುಲ (ರಿಂಗ್) ರಸ್ತೆ ಕಾಮಗಾರಿಗೆ ರಾಜ್ಯದ ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರೂ 140 ಕೋಟಿ ಅನುದಾನ ನೀಡಿದ್ದಾರೆ.
ಬೆಳಗಾವಿ ವರ್ತುಲ ರಸ್ತೆಗೆ ಅನುದಾನ ಮತ್ತು ಕಾಮಗಾರಿಗೆ ಚಾಲನೆ ನೀಡಬೇಕೆಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನ್ಯಾಯವಾದಿ ಎನ್.ಆರ್.ಲಾತೂರ್ ಮತ್ತು ಹಿರಿಯ ವಕೀಲರು ತಿಳಿಸಿದ್ದಾರೆ.
ಫೆಬ್ರವರಿ 10ರಂದು ಬೆಳಗಾವಿಯಿಂದ ವಕೀಲರ ನಿಯೋಗ ಶಂಕರಗೌಡ ಪಾಟೀಲ್ ಮುಖಾಂತರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ರಿಂಗ್ ರೋಡ್ ಬಗ್ಗೆ ಮನವಿ ಸಲ್ಲಿಸಿತ್ತು ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಜನತೆಯ ಅಶೋತ್ತರಗಳಿಗೆ ಹಾಗೂ ಶಂಕರಗೌಡ ಪಾಟೀಲ್ ಅವರ ದಶಕದ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿಗಳು ರಿಂಗ್ ರಸ್ತೆಗೆ ಹಣ ನೀಡಿದ್ದಾರೆ. ಶಂಕರಗೌಡ ಪಾಟೀಲ 2008ರಿಂದಲೇ ರಿಂಗ್ ರಸ್ತೆಗಾಗಿ ಹೋರಾಟ ನಡೆಸುತ್ತ ಬಂದಿದ್ದಾರೆ ಎಂದಿರುವ ಅವರು 2012ರಲ್ಲಿ ನಡೆದ ಹೋರಾಟದ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ಬೆಳಗಾವಿ ರಿಂಗ್ ರಸ್ತೆ ಕಾಮಗಾರಿಯು, ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಿಂಗ್ ರಸ್ತೆ ನಿರ್ಮಾಣದಿಂದ ಮೂಲ ಸೌಕರ್ಯವು ಅಭಿವೃದ್ಧಿಯಾಗಿ, ವಾಣಿಜ್ಯ ಚಟುವಟಿಗಳಿಗೆ ಪುಷ್ಟಿ ನೀಡುವುದಲ್ಲದೆ, ಉದ್ಯೋಗವಕಾಶಗಳೂ ಹೆಚ್ಚಾಗುವುದರಿಂದ, ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡುವುದು ಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತು.
ಈ ವಿಷಯವು ಶಂಕರಗೌಡ ಪಾಟೀಲ್ ಅವರ ಗಮನಕ್ಕೆ ಬಂದಾಗ, ತಕ್ಷಣವೇ ಈ ನಿಟ್ಟಿನಲ್ಲಿ ಗಮನ ಹರಿಸಿ, ಕ್ಷೇತ್ರದ ಜನರ ಅಪೇಕ್ಷೆಯಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕಾಮಗಾರಿಯ ಚಾಲನೆಯ ಬಗ್ಗೆ ಬೇಡಿಕೆಯನ್ನು ಸಲ್ಲಿಸಿದ್ದರು. ನಂತರ, ದಿನಾಂಕ: 10/02/2021 ರಂದು ಹಿರಿಯ ನ್ಯಾಯವಾದಿಗಳ ತಂಡದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಪತ್ರವನ್ನು ಸಲ್ಲಿಸಿದ್ದೆವು. ಅಲ್ಲದೆ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಗಿರೀಶ್ ಹೊಸೂರು ಅವರ ಪ್ರಯತ್ನವು ಕೂಡ ಸೇರಿದೆ. ಶೀಘ್ರವಾಗಿ ಯೋಜನೆ ಅನುಷ್ಠಾನಗೊಳಿಸುವ ಸಲುವಾಗಿ ನಮ್ಮ ಮನವಿಯನ್ನು ಪುರಸ್ಕರಿಸಿ, ಕಾಮಗಾರಿಯ ಅನುಷ್ಠಾನಕ್ಕೆ ಈ ಬಾರಿಯ ಬಜೆಟ್ ನಲ್ಲಿ ರೂ. 140 ಕೋಟಿ ಅನುದಾನ ನೀಡುವ ಮೂಲಕ ಬಿ ಎಸ್ ಯಡಿಯೂರಪ್ಪ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹಿರಿಯ ವಕೀಲರ ಬಳಗದ ಕಾರ್ಮಿಕ ಮುಖಂಡ ಎನ್ ಆರ್ ಲಾತೂರ್, ಹಿರಿಯ ವಕೀಲರಾದ ಸಿ.ಟಿ. ಮಜಗಿ, ಎಸ್ ಬಿ ಪೂಜಾರ್, ಎಸ್ ಕಿವುಡ ಸಣ್ಣವರ್, ವಿಜಯ್ ಪಾಟೀಲ್, ಉದ್ಯಮಿ ಮಲ್ಲಿಕಾರ್ಜುನ ಬಹದ್ದೂರಿ, ವಾಣಿಜ್ಯೋದ್ಯಮ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಶರ್ಮ ಇತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ