ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಮಂಗಳವಾರ (ಮಾ.22) ಅಧಿಸೂಚನೆ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಸಲು ಮಾರ್ಚ್ 30 ಕಡೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.
ಲೋಕಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ (ಮಾ.22) ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನಾಮಪತ್ರಗಳ ಪರಿಶೀಲನೆ ಮಾರ್ಚ್ 31 ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 3 ಕಡೆಯ ದಿನವಾಗಿದೆ.
ಏಪ್ರಿಲ್ 17, 2021 ರಂದು ಮತದಾನ ನಡೆಯಲಿದ್ದು, ಮೇ 2, 2021 ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಒಟ್ಟು 18.07 ಲಕ್ಷ ಮತದಾರರು:
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮ ಮತದಾರರ ಪಟ್ಟಿ(18-1-2021)ಯ ಪ್ರಕಾರ ಒಟ್ಟು 18,07,250 ಮತದಾರರಿದ್ದಾರೆ. ಒಟ್ಟು 7925 ಸೇವಾ ಮತದಾರರಿದ್ದು, 12,290 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಅದೇ ರೀತಿ ಕ್ಷೇತ್ರದ ವ್ಯಾಪ್ತಿಯಲ್ಲಿ 329 ಗಣ್ಯ ವ್ಯಕ್ತಿಗಳನ್ನು ಗುರುತಿಸಲಾಗಿದೆ.
ಕ್ಷೇತ್ರದಲ್ಲಿ ಎಂಬತ್ತು ವರ್ಷ ಮೇಲ್ಪಟ್ಟಿರುವ 41,535 ಮತದಾರರಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 2566 ಮತಗಟ್ಟೆಗಳು:
ಲೋಕಸಭಾ ಉಪ ಚುನಾವಣೆಗೆ ಒಟ್ಟಾರೆ 2566 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ 2064 ಮೂಲ ಮತಗಟ್ಟೆಗಳು ಹಾಗೂ ಒಂದು ಸಾವಿರಕ್ಕೂ ಅಧಿಕ ಮತದಾರರಿರುವ ಕಡೆಗಳಲ್ಲಿ ಹೆಚ್ಚುವರಿಯಾಗಿ 502 ಉಪ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಉಪ ಚುನಾವಣಾ ಕಾರ್ಯಕ್ಕಾಗಿ 2566 ಮತಗಟ್ಟೆಗಳಿಗೆ 11, 290 ಸಿಬ್ಬಂದಿ ನಿಯೋಜಿಸಲಾಗುತ್ತದೆ.
ಅಗತ್ಯವಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್ ಗಳು ಲಭ್ಯವಿವೆ. ಈಗಾಗಲೇ ಮೊದಲ ಹಂತದ ಪರಿಶೀಲನೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸಾಫ್ಟವೇರ್ ಮೂಲಕ ರ್ಯಾಂಡಮೈಜೇಷನ್ ಕೂಡ ಮಾಡಲಾಗಿದೆ.
ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಸೇರಿದಂತೆ ಎಲ್ಲ ತಂಡಗಳನ್ನು ರಚಿಸಿ, ಅಗತ್ಯ ತರಬೇತಿಯನ್ನು ಕೂಡ ನೀಡಲಾಗಿರುತ್ತದೆ. ಮತಗಟ್ಟೆ ಸಿಬ್ಬಂದಿಗೂ ಕೂಡ ಆಯ್ದ ದಿನಗಳಂದು ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ: ಸಹಾಯಕ ಚುನಾವಣಾಧಿಕಾರಿಗಳ ನೇಮಕ
ಉಪಚುನಾವಣೆ: ನಾಳೆಯಿಂದಲೇ ನಾಮಪತ್ರ ಸಲ್ಲಿಕೆ
ಚುನಾವಣೆ ನಿರ್ವಹಣೆಗೆ ರಾಜ್ಯ ಪ್ರಶಸ್ತಿ ಪಡೆದ ಡಾ.ಹರೀಶ್ ಕುಮಾರ ಡಿಸಿಯಾಗಿ ಅಧಿಕಾರ ಸ್ವೀಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ