Latest

ಹನಿ ತಿಂದವರ್ಯಾರು ಎಂದ ಡಿಕೆಶಿ, ಕಾಂಗ್ರೆಸ್ ಗೆ ಭಯವೇಕೆ ಎಂದ ಬೊಮ್ಮಾಯಿ

https://youtu.be/Zcrxg2cnhe8

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ವಿಧಾನಸಭೆಯಲ್ಲಿ ಸೋಮವಾರ 4 ಗಂಟೆಗಳ ಕಾಲ ಚರ್ಚೆಗೆ ಗ್ರಾಸವಾಯಿತು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಷ್ಯ ಪ್ರಸ್ತಾಪಿಸಿ, ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ರಕ್ಷಣೆ ಕೋರಿ ಬಂದ ಹೆಣ್ಣು ಮಗಳಿಗೆ ರಕ್ಷಣೆ ನೀಡುವ ಬದಲು ಷಢ್ಯಂತ್ರ ಯಾರದ್ದು ಎನ್ನುವ ಕುರಿತು ವಿಚಾರಣೆ ನಡೆಯುತ್ತಿದೆ. ರಮೇಶ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು, ಕೋರ್ಟ್ ಮೆಟ್ಟಿಲೇರಿರುವ 6 ಸಚಿವರೂ ರಾಜಿನಾಮೆ ನೀಡಬೇಕು, ಹೈಕೋರ್ಟ್ ಮುುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಹನಿಟ್ರ್ಯಾಪ್ ನಡೆದಿದೆ ಎನ್ನುತ್ತಿದ್ದಾರೆ. ಹನಿ ತಿಂದವರು ಯಾರು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನವರು ಯಾರಿಗೂ ಪ್ಯಾಂಟ್ ಬಿಚ್ಚಿ, ಜಿಪ್ ಬಿಚ್ಚಿ, ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ಯಡಿಯೂರಪ್ಪ ವಿರುದ್ಧ ಆರೋಪ ಮಾಡಿ ಎಂದು ಹೇಳಲಿಲ್ಲ. ಸಿಡಿ ಮಾಡಿದವರು ಯಾರೇ ಇರಲಿ, ಇಂತಹ ನೀಚ ರಾಜಕಾರಣಿಗಳನ್ನು ರಾಷ್ಟ್ರಕ್ಕೆ ತೋರಿಸಿದರಲ್ಲ. ಏನೇನು ಬೇಕೋ ಅದನ್ನು ಮಾತನಾಡುತ್ತ ತಿರುಗುತ್ತಿದ್ದರಲ್ಲ, ಹಣ್ಣು ಮಕ್ಕಳ ಬಗೆಗೆ, ಮಾಧ್ಯಮದವರ ಬಗೆಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರಲ್ಲಾ ಇಂತವರ ಪರಿಚಯ ನಾಡಿಗೆ ಆಗುವಂತಾಯಿತು. ನಾವು ಸಮಾಜದಲ್ಲಿ ತಲೆ ಎತ್ತಿ ತಿರುಗುವ ಸ್ಥಿತಿ ಇಲ್ಲ ಎಂದು ಕಿಡಿಕಾರಿದರು.

ಮಾಜಿ ಸ್ಪೀಕರ್ ರಮೇಶ ಕುಮಾರ ಸಹ ಸರಕಾರದ ನೀತಿಯ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ 6 ಸಚಿವರಿಗೆ ನ್ಯಾಯಾಲಯಕ್ಕೆ ಹೋಗುವ ಸಲಹೆ ನೀಡಿದವರು ಶುದ್ಧ ಅವಿವೇಖಿಗಳು, ಮೂರ್ಖರು, ನಿಮ್ಮ ಹಿತ ಶತ್ರುಗಳು ಎಂದು ಕಿಡಿಕಾರಿದರು.

 ಯಾರನ್ನೂ ರಕ್ಷಿಸಲ್ಲ – ಗೃಹ ಸಚಿವ ಬಸವರಾಜ ಬೊಮ್ಮಾಯಿ
ಸರಕಾರದ ಪರವಾಗಿ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ,  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರೇ ಆಗಿರಲಿ ಎಷ್ಟೇ ದೊಡ್ಡವರು ಆಗಿರಲಿ ಅವರಿಗೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನಿಯಮ 69ರ ಅಡಿ ಮಂಡಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಅವರು, ಈ ಪ್ರಕರಣದ ವಿಚಾರಣೆ ಸ್ವತಂತ್ರವಾಗಿ ಹಾಗೂ ನಿಸ್ಪಕ್ಷಪಾತವಾಗಿ ನಡೆಯುತ್ತಿದೆ ಎಂದರು.
ಪ್ರಕರಣದ ವಿಚಾರಣೆ ಎಲ್ಲಾ ಆಯಾಮಗಳಲ್ಲಿ ನಡೆಯುತ್ತಿದೆ ರಮೇಶ್ ಜಾರಕಿಹೊಳಿ ನೀಡಿರುವ ದೂರು ಹಾಗೂ ಸಿಡಿಯಲ್ಲಿರುವ ಯುವತಿಯ ಮನವಿಯನ್ನು ಆಧರಿಸಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಈಗಾಗಲೇ ಎರಡು ಬಾರಿ ರಮೇಶ್ ಜಾರಕಿಹೊಳಿ ಅವರನ್ನು ಕರೆದು ವಿಚಾರಣೆಗೆ ಒಳಪಡಿಸಲಾಗಿದೆ. ಯುವತಿ ಎಲ್ಲಿದ್ದಾಳೆ ಎಂಬುದು ಇದುವರೆಗೆ ಪತ್ತೆ ಆಗಿಲ್ಲ. ಯುವತಿ ಒಂದೇ ಸ್ಥಳದಲ್ಲಿ ನೆಲೆ ನಿಲ್ಲುತ್ತಿಲ್ಲ. ನಿರಂತರವಾಗಿ ಸ್ಥಳ ಬದಲು ಮಾಡುತ್ತಿದ್ದಾಳೆ. ನಮಗೆ ಮಾಹಿತಿ ಸಿಕ್ಕ ಕಡೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಆ ಸ್ಥಳಕ್ಕೆ ಕಳುಹಿಸಲಾಗುತ್ತಿದೆ. ಆದರೆ ಯುವತಿ ಮಾತ್ರ ಸಿಗುತ್ತಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಗೆ  ತನಿಖೆಯ ಭಯ ಏಕೆ? 
ಸಿಡಿ ತನಿಖೆ ಆದ್ರೆ ಕಾಂಗ್ರೆಸ್ಗೆ ಯಾಕೆ ಭಯ? ಯಾರಾದ್ರೂ ಕ್ಯಾಮೆರಾ ಇಟ್ರೆ ಮಾತ್ರ ವಿಡಿಯೋ ರೆಕಾರ್ಡ್ ಆಗಲು ಸಾಧ್ಯ. ಆ ರೆಕಾರ್ಡಿಂಗ್ ವಿಡಿಯೋವನ್ನು ಎಡಿಟಿಂಗ್ ಮಾಡಿದ್ದಾರೆ. ನಂತರ ಸಿಡಿ ಬರ್ನ್ ಮಾಡಿದ್ದಾರೆ. ಹೀಗೆ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರು ಮತ್ತು ಪರೋಕ್ಷವಾಗಿ ಸಹಾಯ ಮಾಡಿದವರ ಪತ್ತೆ ಮಾಡಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರು ಯಾರೇ ಅಗಿರಲಿ, ಎಷ್ಟೇ ದೊಡ್ಡವರಿರಲಿ ಅವರನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಸ್ಪಷ್ಟ ಸಂದೇಶ ನೀಡಿದರು ಬೊಮ್ಮಾಯಿ.
ಅಧಿವೇಶನದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬೊಮ್ಮಾಯಿ, ಮೇಟಿ ಪ್ರಕರಣದಲ್ಲಿ ಏನಾಗಿತ್ತು  ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಕ್ಲೀನ್ ಚಿಟ್ ನೀಡಿದ್ರು. ಈಗ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಸಿಡಿ ಯುವತಿ ಹಾಗೂ ರಮೇಶ್ ಇಬ್ಬರ ದೂರಿನ ಅನ್ವಯ ತನಿಖೆ ನಡೆಯಲಿದೆ. ಪೊಲೀಸ್ ರು ನಿಷ್ಪಕ್ಷಪಾತವಾಗಿ ತನಿಖೆ ನಢಸುತ್ತಿದ್ದಾರೆ. ಎಲ್ಲವನ್ನೂ ಎಫ್.ಎಸ್.ಎಲ್ ಗೆ ಕಳಿಸಲಾಗಿದೆ. ತನಿಖೆ ಆದ ಬಳಿಕ ಎಲ್ಲವೂ ಹೊರ ಬರಲಿದೆ. ತನಿಖೆ ಬಹಳ ಚುರುಕಾಗಿ ನಡೆಯುತ್ತಿದೆ. ತನಿಖೆಯಿಂದ ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಬಯಲಿಗೆ ಬರಲಿದೆ. ಶೀಘ್ರದಲ್ಲೇ ಪ್ರಕರಣ ಇತ್ಯರ್ಥವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಬೊಮ್ಮಾಯಿ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ನಾಳೆಗೆ ಮುಂದೂಡಿದರು.

ಕರ್ನಾಟಕ ಪೊಲೀಸರ ಗೌರವ ಕೆಡಿಸಬೇಡಿ – ಸದನದಲ್ಲಿ ಕಾಂಗ್ರೆಸ್ ತರಾಟೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button