ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ.
ಮೊದಲ ದಿನ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಮಾ.30ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಆದರೆ ಈವರೆಗೂ ಪ್ರಮುಖ ರಾಜಕೀಯ ಪಕ್ಷಗಳಾಗ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಿಸಿಲ್ಲ. ಆಕಾಂಕ್ಷಿಗಳು ದೆಹಲಿಗೆ ಹೋಗಿ ಕಾಯುತ್ತ ಕುಳಿತಿದ್ದಾರೆ.
ಮಂಗಳವಾರ ಸಂಜೆ ದೆಹಲಿಯಿಂದ ಬಂದಿರುವ ಮಾಹಿತಿ ಪ್ರಕಾರ ಬಿಜೆಪಿ ಅಂತಿಮ ಪಟ್ಟಿಯಲ್ಲಿ ನಾಲ್ವರ ಹೆಸರಿದ್ದು, ಅವರಲ್ಲಿ ಒಬ್ಬರ ಆಯ್ಕೆಯಾಗಬೇಕಿದೆ. ಬುಧವಾರ ಸಂಜೆಯೊಳಗೆ ಅಭ್ಯರ್ಥಿ ಘೋಷಿಸಬಹುದು.
ವಿಧಾನ ಪರಿಷತ್ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ, ದಿವಂಗತ ಸುರೇಶ ಅಂಗಡಿ ಅವರ ಪುತ್ರಿ ಶೃದ್ಧಾ ಶೆಟ್ಟರ್, ಹಿರಿಯ ನ್ಯಾಯವಾದಿ ಎಂ.ಬಿ.ಜಿರಲಿ ಮತ್ತು ವೈದ್ಯ ಡಾ.ರವಿ ಪಾಟೀಲ ಅವರ ಹೆಸರು ಅಂತಿಮವಾಗಿ ಗಣನೆಯಲ್ಲಿದೆ. ಈಚೆಗೆ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರೂ ಈ ನಾಲ್ವರ ಹೆಸರನ್ನು ಆಯ್ಕೆ ಮಾಡಿಕೊಂಡು ಹೋಗಿದ್ದಾರೆ ಎಂದು ಉನ್ನತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.
ಇನ್ನು ಮಂಗಲಾ ಅಂಗಡಿ ಮತ್ತು ಡಾ.ಗಿರೀಶ್ ಸೋನ್ವಾಲ್ಕರ್ ಹೆಸರು ಕೂಡ ಪ್ರಸ್ತಾಪದಲ್ಲಿದ್ದು, ಮಂಗಲಾ ಅಂಗಡಿ ಅವರು ತಮಗಿಂತ ಮಗಳಿಗೆ ಮೊದಲ ಆದ್ಯತೆ ನೀಡುವಂತೆ ವಿನಂತಿಸಿದ್ದಾರೆ. ಗಿರೀಶ್ ಸೋನ್ವಾಲಕರ್ ತಮ್ಮದೇ ಮಾರ್ಗದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.
ಬುಧವಾರ ಅಮಿತ್ ಶಾ ಅವರ ಬಳಿ ಅಂತಿಮ ಪಟ್ಟಿ ಹೋಗುವ ಸಾಧ್ಯತೆ ಇದ್ದು, ಅವರು ಯಾವುದೇ ಬದಲಾವಣೆ ಮಾಡಬಹುದು. ಇದೇ ಪಟ್ಟಿಯಲ್ಲಿರುವವರನ್ನು ಆಯ್ಕೆ ಮಾಡಬಹುದು ಅಥವಾ ಬೇರೆಯದ್ದೇ ಹೆಸರು ಹೇಳಬಹುದು. ಕಾದು ನೋಡೋಣ.
ಬಿಜೆಪಿ ಸಂಭವನೀಯ ಅಭ್ಯರ್ಥಿ ಮಹಾಂತೇಶ ಕವಟಗಿಮಠ
ಸತೀಶ್ ಜಾರಕಿಹೊಳಿ V/S ಶೃದ್ಧಾ ಶೆಟ್ಟರ್ ?
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಅಂತಿಮ: ಅಧಿಕೃತ ಘೋಷಣೆಯಷ್ಟೆ ಬಾಕಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ