ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ರಾಜ್ಯದ ಆಡಳಿತ ಕುಸಿದು ಬಿದ್ದಿರುವುಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರು ತಕ್ಷಣ ಮಧ್ಯೆಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ಧ ಹೈಕಮಾಂಡ್ ಗೆ ಸಚಿವ ಈಶ್ವರಪ್ಪ ದೂರು ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕನಾಗಿ ನಾನು ಮಾಡುತ್ತಾ ಬಂದಿರುವ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಮಾತಿಗೆ ಬದ್ಧರಾಗಿ ಉಳಿಯಬೇಕು. ವರಿಷ್ಠರು ಈಶ್ವರಪ್ಪನವರ ಬಾಯಿಮುಚ್ಚಿಸಲು ಪ್ರಯತ್ನಿಸದೆ ಇತರ ಸಚಿವರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಬೇಕು. ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಸಾರಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಕೊರೊನಾ ವೈರಸ್ ಕಾರಣ ಅಲ್ಲ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಂಟಿರುವ ಭ್ರಷ್ಟಾಚಾರದ ವೈರಸ್ ಕಾರಣ ಎನ್ನುವುದನ್ನು ಈಶ್ವರಪ್ಪನವರು ತನ್ನ ಸಂಶೋಧನೆ ಮೂಲಕ ಬಹಿರಂಗಗೊಳಿಸಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳು ಕೇವಲ ಗ್ರಾಮೀಣ ಅಭಿವೃದ್ದಿ ಇಲಾಖೆಯೊಂದಕ್ಕೆ ಸಂಬಂಧಿಸಿದ್ದಲ್ಲ, ಇದು ಸರ್ಕಾರದ ಪ್ರತಿಯೊಂದು ಇಲಾಖೆಯೊಳಗಿನ ಕರ್ಮಕಾಂಡ. ಮುಖ್ಯಮಂತ್ರಿಗಳ ವಿರುದ್ಧ ಈಶ್ವರಪ್ಪನವರು ರಾಜ್ಯಪಾಲರಿಗೆ ಮಾತ್ರ ಆರೋಪ ಪಟ್ಟಿ ಸಲ್ಲಿಸದೆ, ಅದರ ಪ್ರತಿಯನ್ನು ಪ್ರಧಾನಿ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕಳಿಸಿದ್ದಾರೆ. ಅವರೆಲ್ಲರೂ ಆರೋಪ ಪಟ್ಟಿ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಹಿರಿಯ ಸಚಿವರಾಗಿ ಹೀಗೆ ಮಾಡಿದ್ದು ಸರಿಯಲ್ಲ; ಈಶ್ವರಪ್ಪ ನಡೆಗೆ ಅರುಣ್ ಸಿಂಗ್ ಅಸಮಾಧಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ