ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಕೋವಿಡ್ ಸೋಂಕಿತರು, 80 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಆಬ್ಸೆಂಟಿಂಗ್ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ಉಪ ಚುನಾವಣೆಗೆ ಏ.17 ರಂದು ಮತದಾನ ನಡೆಯಲಿದೆ. ಆದರೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಈಗಾಗಲೇ ಹೆಸರು ನೋಂದಾಯಿಸಿರುವ ಅರ್ಹ ಮತದಾರರಿಗೆ ಏ.8 ಹಾಗೂ 9 ರಂದು ಅವರ ಮನೆಯಿಂದಲೇ ಪೋಸ್ಟಲ್ ಬ್ಯಾಲೆಟ್ ಮೂಲಕ ತಮ್ಮ ಮತ ಚಲಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಕೋವಿಡ್ ಸೋಂಕಿತರು, 80 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಆಬ್ಸೆಂಟಿಂಗ್ ಮತದಾರರನ್ನು ಗುರುತಿಸಿ ಅವರಿಗೆ ಪೋಸ್ಟಲ್ ಬ್ಯಾಲೆಟ್ ಅರ್ಜಿ ನಮೂನೆ 12 ಬಿ ಯನ್ನು ಹಂಚಿಕೆ ಮಾಡಲಾಗಿದೆ.
ಏ.8 ಹಾಗೂ 9 ರಂದು ಪೋಸ್ಟಲ್ ಬ್ಯಾಲೆಟ್ ಸಂಗ್ರಹ:
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಈಗಾಗಲೇ 12 ಬಿ ನಮೂನೆಯಲ್ಲಿ ನೋಂದಾಯಿಸಿರುವ ಅರ್ಹ ಮತದಾರರ ಮನೆ ಮನೆಗೆ ತೆರಳಿ ಏ. 8 ಹಾಗೂ 9 ರಂದು ಮತ ಸಂಗ್ರಹಿಸಲಾಗುವುದು.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 6402 ಮತದಾರರು ಪೋಸ್ಟಲ್ ಬ್ಯಾಲೆಟ್ ಗಾಗಿ ಹೆಸರು ನೋಂದಾಯಿಸಿರುತ್ತಾರೆ.
ಪೋಸ್ಟಲ್ ಬ್ಯಾಲೆಟ್ ಸಂಗ್ರಹ ವಿಧಾನ:
ಪೋಸ್ಟಲ್ ಬ್ಯಾಲೆಟ್ ಸಂಗ್ರಹಕ್ಕೆ ನಿಯೋಜಿತ ಎಲ್ಲ ತಂಡಗಳು ಏ.8 ಮತ್ತು 9, 2021 ರಂದು ಬೆಳಿಗ್ಗೆ 7 ಗಂಟೆಗೆ ಆಯಾ ತಾಲ್ಲೂಕು ಕಚೇರಿಯಲ್ಲಿ ಹಾಜರಿರುವ ರಾಜಕೀಯ ಪಕ್ಷದ ಏಜೆಂಟರುಗಳ ಸಮ್ಮುಖದಲ್ಲಿ ಈ ಮತದಾನಕ್ಕೆ ಬಳಕೆಯಾಗುವ ಖಾಲಿ ಪೆಟ್ಟಿಗೆಯನ್ನು ತೋರಿಸಿ ಸೀಲ್ ಮಾಡಲಾಗುತ್ತದೆ.
ಬೆಳಿಗ್ಗೆ 7 ಗಂಟೆ ವೇಳೆಗೆ ಮತಪೆಟ್ಟಿಗೆಯಲ್ಲಿ ಯಾವುದೇ ಮತ ದಾಖಲಾಗಿಲ್ಲವೆಂದು ಹಾಗೂ ಅದನ್ನು ಸೀಲ್ ಮಾಡಲಾಗಿದೆ ಎಂದು ಘೋಷಿಸಿ ಪಿ.ಆರ್.ಓ. ಘೋಷಣೆಗೆ ಸಹಿ ಮಾಡುತ್ತಾರೆ. ಇದಲ್ಲದೇ ಸ್ಥಳದಲ್ಲಿ ಹಾಜರಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಹಿಯನ್ನು ಕೂಡ ಪಡೆಯಲಾಗುತ್ತದೆ.
ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು ನಂತರ ತಂಡದ ಸದಸ್ಯರು ತಮಗೆ ನಿಗದಿಪಡಿಸಿದ ವಾಹನದಲ್ಲಿ ಕುಳಿತು, ಮತದಾರರ ಮನೆಗೆ ತೆರಳಬೇಕು.
ಮನೆ ಮನೆಗಳಿಂದ ಮತ ಸಂಗ್ರಹ:
ಮತದಾರರ ಮನೆಯ ಬಾಗಿಲಿನಲ್ಲಿ ಹಾಜರಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತದಾರರಿಗೆ ಪೋಸ್ಟಲ್ ಬ್ಯಾಲೇಟನ 13 ಎ ಫಾರ್ಮ್ ನೀಡಲಾಗುತ್ತದೆ.
ಅದರಲ್ಲಿ ಪಾರ್ಟ್ ನಂಬರ್ ಮತ್ತು ಸೀರಿಯಲ್ ನಂಬರ್ ಬರೆದು ಮತದಾರ ಸಹಿ ಮಾಡಿದ ಮೇಲೆ ತಂಡದಲ್ಲಿರುವ ಗೇಜೆಟೆಡ್ ಅಧಿಕಾರಿಯು ತನ್ನ ಮುಂದೆ ಮತದಾರ ಸಹಿ ಮಾಡಿದನೆಂದು ದೃಢೀಕರಿಸಿ ಸಹಿ ಮಾಡಿ ಸೀಲ್/ಮೋಹರು ಹಾಕಬೇಕು. ನಂತರ 13 ಬಿ ಕವರಿನಲ್ಲಿ ಮತಪತ್ರವನ್ನು ಮೊದಲು ಲಂಬವಾಗಿ (ಉದ್ದವಾಗಿ) ನಂತರ ಅಡ್ಡಲಾಗಿ ಮಡಚಿ ಸಣ್ಣ ಕವರಿನಲ್ಲಿಟ್ಟು ಅಲ್ಲೇ ಮತದಾರನ ಗೌಪ್ಯತೆಯನ್ನು ಕಾಪಾಡುವಂತೆ ಕಂಪಾರ್ಟಮೆಂಟ್ನ ಒಳಗೆ ಮತ ಪೆಟ್ಟಿಗೆ ಇಡಲಾಗುತ್ತದೆ.
ಕಂಪಾರ್ಟ್ಮೆಂಟಿನ ಮರೆಯಲ್ಲಿ ಕೂತ ಮತದಾರ ತನಗೆ ಬೇಕಾದ ಅಭ್ಯರ್ಥಿಗೆ ಮತ ಚಲಾಯಿಸಿ ಅದನ್ನು 13 ಬಿ ಸಣ್ಣ ಕವರಿನಲ್ಲಿ ಹಾಕಿ ದೊಡ್ಡಕವರಿನಲ್ಲಿ ಡಿಕ್ಲೇರೇಷನ್ ಫಾರ್ಮ್ ಮತ್ತು 13 ಬಿ ಮತ ಚಲಾಯಿಸಿದ ಕವರನ್ನು ಹಾಕಿ ಸ್ಟೀಕ್ ಗಮ್ನಿಂದ ಸೀಲ್ ಮಾಡಿ ತಮ್ಮ ಮುಂದೆ ಇರಿಸಿರುವ ಮತಪೆಟ್ಟಿಗೆ ಒಳಗೆ ಹಾಕಬೇಕಾಗುತ್ತದೆ.
ಈ ಎಲ್ಲಾ ಪ್ರಕ್ರಿಯೇಗಳು ವಿಡಿಯೋ ಚಿತ್ರಿಕರಣ ಮಾಡಲಾಗುತ್ತದೆ. ಇದಾದ ನಂತರ ಮತ್ತೊಬ್ಬ ಮತದಾರನ ಮನೆಗೆ ತೆರಳಿ ಪೋಸ್ಟಲ್ ಬ್ಯಾಲೆಟ್ ಸಂಗ್ರಹಿಸಲಾಗುತ್ತದೆ.
ಏ.8 ಮತ್ತು 9 ರ ಸಂಜೆ 6-00 ಗಂಟೆಯೊಳಗೆ ಪ್ರಕ್ರಿಯೆ ಮುಕ್ತಾಯಗೊಳಿಸಿ ತಾಲ್ಲೂಕು ಕಛೇರಿಗೆ ತಂದು ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಬಟ್ಟೆಯ ಕವರಿನಲ್ಲಿ ಹಾಕಿ ಸೀಲ್ಮಾಡಿ ನಂತರ ಪಿಆರ್ ಓ ಘೋಷಣೆ -2ನ್ನು ಭರ್ತಿಮಾಡಿ ಅದರಲ್ಲಿ ರಾಜಕೀಯ ಪಕ್ಷದವರ ಸಹಿ ಪಡೆಯಲಾಗುತ್ತದೆ.
ಜೊತೆಗೆ ಚುನಾವಣೆಗೆ ಬಳಸಿದ 17 ಎ ರೆಜಿಸ್ಟರ್ ಹಾಗೂ ಇತರೆ ಸಾಮಗ್ರಿಗಳನ್ನು ಸೀಲ್ಮಾಡಿ ಪೆಟ್ಟಿಗೆಗಳನ್ನು ಅಂದೇ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿರುವ ಪೋಸ್ಟಲ್ ಬ್ಯಾಲೇಟ್ ನೋಡಲ್ ಅಧಿಕಾರಿಯವರಿಗೆ ಅಂದೇ ತಲುಪಿಸಿ ಸ್ವೀಕೃತಿ ಪಡೆದುಕೊಳ್ಳಲಾಗುತ್ತದೆ.
ಪೋಸ್ಟಲ್ ಬ್ಯಾಲೇಟ್ ನೋಡಲ್ ಅಧಿಕಾರಿಯವರು ಜಿಲ್ಲಾ ಖಜಾನೆಯಲ್ಲಿ ಈಗಾಗಲೇ ಗುರುತಿಸಿರುವ ಸ್ಥಳದಲ್ಲಿ ಪೆಟ್ಟಿಗೆಗಳನ್ನು ಇರಿಸಿ, ಪೋಸ್ಟಲ್ ಬ್ಯಾಲೇಟ್ ಮತದಾನದ ವಿವರವನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಗೆ ನೀಡುತ್ತಾರೆ.
ಈಗಾಗಲೇ 12 ಬಿ ನಮೂನೆಯಲ್ಲಿ ನೋಂದಾಯಿಸಿರುವ ಅರ್ಹ ಮತದಾರರ ಮನೆ ಮನೆಗೆ ತೆರಳಿ ಏ. 8 ಮತ್ತು 9 ರಂದು ಹೀಗೆ ಮತಗಳನ್ನು ಸಂಗ್ರಹಿಸಲಾಗುವುದು.
ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಕೋವಿಡ್ ಸೋಂಕಿತರು, 80 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಆಬ್ಸೆಂಟಿಂಗ್ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ಸಂಗ್ರಹಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ