Kannada NewsLatest

62.55 ಲಕ್ಷ ನಗದು ವಶ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಅಕ್ರಮ‌ ಹಣ ಅಥವಾ ಮದ್ಯ ಸಾಗಾಣಿಕೆ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಚೆಕ್ ಪೋಸ್ಟ್ ಗಳಲ್ಲಿ ಇದುವರೆಗೆ 62.55 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ 27 ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡಿರುವ ಎಸ್.ಎಸ್.ಟಿ. ತಂಡಗಳು ತಪಾಸಣೆ ಸಂದರ್ಭದಲ್ಲಿ 62,55,510 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿರುತ್ತದೆ.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪೊಲೀಸ್ ಮತ್ತಿತರ ತಂಡಗಳಿಂದ ಪರಿಶೀಲಿಸಿದ ಬಳಿಕ 19,83,890 ಲಕ್ಷ ರೂಪಾಯಿಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗಿದೆ. ಇನ್ನುಳಿದ 42,71,620 ರೂಪಾಯಿಗಳನ್ನು ನಿಯಮಾವಳಿ ಪ್ರಕಾರ ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿರುತ್ತದೆ.

4 ಸಾವಿರ ಲೀಟರ್ ಮದ್ಯ ವಶ:

ಉಪ ಚುನಾವಣೆ ಹಿನ್ನೆಲೆಯಲ್ಲಿ ವಿವಿಧೆಡೆ ತಪಾಸಣೆ ಕೈಗೊಂಡು ಒಟ್ಟಾರೆ 11.25 ಲಕ್ಷ ಮೌಲ್ಯದ 4020 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಅಬಕಾರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟಾರೆ 42.26 ಲಕ್ಷ ಮೌಲ್ಯದ ಒಟ್ಟು 16 ಬೈಕ್ ಗಳು, 1 ಕಂಟೇನರ್, 1 ಟ್ಯಾಂಕರ್, 4 ಕಾರು‌ ಹಾಗೂ ಒಂದು ಜೀಪು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಮತ್ತು ಪೊಲೀಸ್ ಕಾರ್ಯಾಚರಣೆಯಲ್ಲಿ ಮದ್ಯ‌ ಹಾಗೂ ಸಾಗಾಣಿಕೆಗೆ ಬಳಸಲಾಗುತ್ತಿದ್ದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಬಕಾರಿಗೆ ಸಂಬಂಧಿಸಿದಂತೆ ಒಟ್ಟಾರೆ 128 ಉಲ್ಲಂಘನೆ ಪ್ರಕರಣಗಳು ವರದಿಯಾಗಿರುತ್ತವೆ.

ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ- 22 ದೂರು ದಾಖಲು:

ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಇದುವರೆಗೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಸಂಬಂಧಿಸಿದಂತೆ ಒಟ್ಟಾರೆ 22 ದೂರುಗಳು ಸ್ವೀಕೃತಿಯಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಈ 22 ದೂರುಗಳ ಪೈಕಿ 18 ಪ್ರಕರಣಗಳನ್ನು ಪರಿಶೀಲಿಸಿ ಒಟ್ಟಾರೆ 56000 ರೂಪಾಯಿ ದಂಡವನ್ನು ವಿಧಿಸಲಾಗಿರುತ್ತದೆ. 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ನೀಡಲಾಗಿರುತ್ತದೆ. ಇನ್ನುಳಿದ ಒಂದು ದೂರಿಗೆ ಸಂಬಂಧಿಸಿದಂತೆ ಪ್ರಕರಣವು ಖಚಿತಪಟ್ಟಿರುವುದಿಲ್ಲ.

ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಸಂಬಂಧಿಸಿದಂತೆ ಇದೀಗ ಜಿಲ್ಲೆಯ ಎಲ್ಲ ನಗರ ಪ್ರದೇಶಗಳಲ್ಲಿ ಮಾರ್ಷಲ್ ಗಳನ್ನು ನೇಮಿಸಿ, ದಂಡ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಲಾಗಿದೆ.

ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಂದರ್ಭದಲ್ಲಿ ‌ಅಕ್ರಮ ಹಣ ಮತ್ತು ಮದ್ಯ‌ ಸಾಗಾಣಿಕೆ ತಡೆಗಟ್ಟಲು ಹಾಗೂ ಇನ್ನಿತರ ಚುನಾವಣಾ ಅಕ್ರಮಗಳನ್ನು ಪತ್ತೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ದೂರುಗಳು ಬಂದಾಗ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ 27 ಎಫ್.ಎಸ್.ಟಿ. ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಅದೇ ರೀತಿ ಚುನಾವಣಾ ಪ್ರಚಾರ ಸಭೆಗಳು, ರ್ಯಾಲಿ ಮತ್ತಿತರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಲು 48 ವಿ.ಎಸ್.ಟಿ. ತಂಡಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದಲ್ಲದೇ ಚುನಾವಣಾ ಅಕ್ರಮಗಳ ಕುರಿತು ಸಾರ್ವಜನಿಕರಿಂದ ನೇರವಾಗಿ ದೂರು ಅಥವಾ ಮಾಹಿತಿ ಸ್ವೀಕರಿಸಲು ಸಿವಿಜಿಲ್, ದೂರು ನಿರ್ವಹಣಾ ಕೋಶ ಹಾಗೂ ಮಾದರಿ ನೀತಿ ಸಂಹಿತೆ ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಲಾಗಿರುತ್ತದೆ.

ಇದಲ್ಲದೇ ಭಾರತ ಚುನಾವಣಾ ಆಯೋಗದಿಂದ ನಿಯೋಜಿಸಲ್ಪಟ್ಟಿರುವ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ‌ಪೊಲೀಸ್ ವೀಕ್ಷಕರು ಕೂಡ ಚುನಾವಣಾ ಪ್ರಕ್ರಿಯೆಯನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಿರುತ್ತಾರೆ.

ಸುಗಮ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ‌ಡಾ.ಕೆ.ಹರೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button