ಪ್ರಗತಿವಾಹಿನಿ ಸುದ್ದಿ: ಬೆಳಗಾವಿ; ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತನ್ನದೇ ಛಾಪು ಮೂಡಿಸುತ್ತ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ರಾಜ್ಯದ ಗಮನ ತನ್ನತ್ತ ಸೆಳೆಯುತ್ತ ಬಂದಿದ್ದು, ಇದೀಗ ಫಲಿತಾಂಶದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವ ಉದ್ದೇಶದಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿದ್ಯಾರ್ಥಿಗಳಿಗೆ ಗೆಲುವಿನತ್ತ ನಮ್ಮ ಚಿತ್ತ ಎಂಬ ಪಠ್ಯ ಮಾರ್ಗದರ್ಶಿ ವಿತರಿಸಿದ್ದಾರೆ.
ಹೌದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಎಸ್ಎಸ್ಎಲ್ಸಿ ಏಳು ಬಾರಿ ಪ್ರಥಮ ಸ್ಥಾನ ಪಡೆದು ರಾಜ್ಯದ ಗಮನ ಸೆಳೆದಿತ್ತು. ಆದರೆ ಇತ್ತೀಚೆಗೆ ನೆರೆ ಹಾವಳಿ, ಬರ, ಕೊರೋನ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಡಕು ಉಂಟು ಮಾಡಿದ್ದ ಪರಿಣಾಮ ಫಲಿತಾಂಶ ಗಣನೀಯ ಇಳಿಕೆ ಕಂಡುಬಂದಿತ್ತು. ಈ ಬಾರಿ ಕೊರೋನ ಹೊಡೆತಕ್ಕೆ ಶಾಲೆಯಿಂದಲೇ ದೂರವುಳಿದಿರುವ ಮಕ್ಕಳ ಅಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಜಿಲ್ಲೆಯ ಸುಮಾರು 30 ಸಾವಿರ ಪಠ್ಯ ಮಾರ್ಗದರ್ಶಿ ಜೊಲ್ಲೆ ಉದ್ಯೋಗ ಸಮೂಹದಿಂದ ಮುದ್ರಿಸಿ ಮಕ್ಕಳಿಗೆ ವಿತರಿಸಿದ್ದಾರೆ.
ಕನ್ನಡ ಹಾಗೂ ಆಂಗ್ಲ ಮಾದ್ಯಮದ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಪರೀಕ್ಷೆಗೆ ಪೂರಕವಾಗಿರುವ ಅಂಶಗಳನ್ನು ಪುಸ್ತಕದಲ್ಲಿ ಸೇರಿಸಲಾಗಿದ್ದು, ಶೈಕ್ಷಣಿಕ ಜಿಲ್ಲೆಯ ಪರಿಣಿತ ಶಿಕ್ಷಕರ ಸಹಕಾರದೊಂದಿಗೆ ಈ ಮಾರ್ಗದರ್ಶಿ ತಯಾರಿಸಲಾಗಿದ್ದು, ಕನ್ನಡ, ಇಂಗ್ಲಿಷ್, ಹಿಂದಿ,ಗಣಿತ,ಸಮಾಜ ವಿಜ್ಞಾನ, ವಿಜ್ಞಾನ ಸೇರಿದಂತೆ ಎಸ್ಎಸ್ಎಲ್ಸಿ ಪರೀಕ್ಷಾ ಪೂರ್ವ ತಯಾರಿಗೆ ಅವಶ್ಯವಿರುವ ಎಲ್ಲ ಅಂಶಗಳನ್ನು ಈ ಮಾರ್ಗದರ್ಶಿ ಒಳಗೊಂಡಿದೆ.
ಒಟ್ಟಾರೆಯಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಹಾಗೂ ಬಡ ಮಕ್ಕಳ ಅಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸದ ಜೊಲ್ಲೆ ಅವರು ವಿನೂತನ ಪ್ರಯತ್ನಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಜಯವಂತ ಭಾಟಲೆ, ಹಾಗೂ ಸಂಜಯ ಅರಗೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ