ದಕ್ಷಿಣೇ ಲಕ್ಷ್ಮಣೋ ಯಸ್ಯ

ಶ್ರೀ ರಾಮನವಮಿ ವಿಶೇಷ 

ನೂತನ ಕುಲಕರ್ಣಿ 

ಮತ್ತೊಮ್ಮೆ ದೂರದರ್ಶನದಲ್ಲಿ ರಮಾನಂದ ಸಾಗರರ
ರಾಮಾಯಣ ಪ್ರಸಾರವಾಗುತ್ತಿದೆ. ಮತ್ತೊಮ್ಮೆ ದೇಶದ ಎಲ್ಲ ಜನರ ಎದೆ ಬಡಿತವೂ, ನಾಡಿ ಮಿಡಿತವೂ ಅದೇ “ರಾಮಾಯಣ ರಾಗ”ಕ್ಕೆ
ಭಾವವೇಗಕ್ಕೆ ಸ್ಪಂದಿಸುತ್ತಿವೆ. ಭಾರತೀಯರಿಗೆ ರಾಮಾಯಣ ಬರೀ ಒಂದು ಕಥೆಯಲ್ಲ. ರಾಮ ಬರೀ ಒಬ್ಬ ಕಥಾ ನಾಯಕನಲ್ಲ. ಅವನು ಯುಗ ಯುಗಗಳಿಂದ ನಮ್ಮ ನರ -ನಾಡಿಗಳಲ್ಲಿ, ಮಾಂಸ -ಮಜ್ಜೆಯಲ್ಲಿ, ದೇಹ- ಪ್ರಾಣಗಳಲ್ಲಿ, ಅಣು -ಕಣ -ಕೋಶಗಳಲ್ಲಿ ಜೀವತಂತು -ಭಾವತಂತುವಾಗಿ ಬೆರೆತುಹೋಗಿದ್ದಾನೆ. ರಾಮಾಯಣ ನಮ್ಮ ಬಾಳ ಹಾದಿಯಲ್ಲಿ ಕೈ ಹಿಡಿದು ನಡೆಸುವ ಕರುಣಾಳು ಬೆಳಕು. ವ್ಯಕ್ತಿಯೊಬ್ಬ ಮಗ -ಮಗಳಾಗಿ, ಅಳಿಯ -ಸೊಸೆಯಾಗಿ, ಗಂಡ -ಹೆಂಡತಿಯಾಗಿ, ಅಣ್ಣ -ತಮ್ಮನಾಗಿ, ಶಿಷ್ಯನಾಗಿ, ಯೋಧನಾಗಿ, ರಾಜನಾಗಿ ಎಲ್ಲಕ್ಕೂ ಮಿಗಿಲಾಗಿ ಒಬ್ಬ ಉತ್ತಮ ಮಾನವನಾಗಿ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಪ್ರತಿ ಪಾತ್ರವೂ ಅತಿ ಸಹಜವಾಗಿ ತೋರಿಸುತ್ತದೆ. ಆದರ್ಶವೇ ರಾಮಾಯಣದ ಮೂಲ ಆಶಯ.
ಅದೇಕೋ ಈ ಸಲ ರಾಮಾಯಣ ನೋಡುವಾಗ ನನ್ನ ಮನಸ್ಸಿಗೆ ಬಹುವಾಗಿ ತಟ್ಟಿದ್ದು ಅಣ್ಣ ತಮ್ಮಂದಿರ ನಡುವಿನ ಮಧುರ ಬಾಂಧವ್ಯ ! ರಾಮ, ಲಕ್ಷ್ಮಣ, ಭರತ, ಶತ್ರುಘ್ನರಲ್ಲದೇ ರಾವಣ, ವಿಭೀಷಣ, ಕುಂಭಕರ್ಣ ಸೋದರರೂ ವಿಶೇಷವಾಗಿ ಸೆಳೆದರು. ಭ್ರಾತೃ ಪ್ರೇಮ ಭಾವವೇ ರಾಮ ಲಕ್ಷ್ಮಣರ, ಭರತ ಶತ್ರುಘ್ನರ ರೂಪದಲ್ಲಿ ಜೀವ ತಳೆದು ಬಂದಿದೆಯೇನೋ ಎನಿಸುತ್ತದೆ. ಚಿಕ್ಕಂದಿನಿಂದಲೂ ಸುಮಿತ್ರೆಯ ಮಗ ಲಕ್ಷ್ಮಣ ಕೌಸಲ್ಯೆಯ ಮಗ ರಾಮನ ನೆರಳಾಗಿ, ಬೆಂಬಿಡದೇ ನಡೆದು, ಬೆಳೆದು ಜೀವಿಸಿದ ಪರಿ ಅಪೂರ್ವ. ಹಾಗೂ ಅಸಾಧಾರಣ. ಅರಣ್ಯದಲ್ಲಿ ಋಷಿ -ಮುನಿಗಳ ಯಜ್ಞ -ಯಾಗಗಳನ್ನು ರಕ್ಕಸರ ಉಪಟಳದಿಂದ ರಕ್ಷಿಸುವಲ್ಲಿ ಅಣ್ಣನ ಸರಿ ಸಮಾನನಾಗಿ ಕಾದಾಡಿದ ಲಕ್ಷ್ಮಣನ ಶೌರ್ಯ ಮೆಚ್ಚುವಂಥದ್ದು. ಸೀತೆಗೆ ಸೋತ ರಾಮನ ಮನದ ತಳಮಳವನ್ನು ಗುರುತಿಸುವಲ್ಲಿ ಗೆಳೆಯನಾಗಿ ಸೆಳೆಯುತ್ತಾನೆ ಲಕ್ಷ್ಮಣ. ಕಬಂಧ ಮೋಕ್ಷ ಹಾಗೂ ಅಹಿಲ್ಯಾ ಉದ್ಧಾರದ ಸಂದರ್ಭದಲ್ಲಿ ಅಣ್ಣನ ದಿವ್ಯತೆಗೆ ಮನದಲ್ಲೇ ತಲೆ ಬಾಗುತ್ತಾನೆ. ರಾಮನಿಗೊದಗಿದ ವನವಾಸ ರಾಮನಿಗೆ ಅನಿವಾರ್ಯ ಪುತ್ರಧರ್ಮ. ಹೆಂಡತಿಯಾಗಿ ಸೀತೆಗೆ ಸತಿಧರ್ಮ. ಸರಿ ಲಕ್ಷ್ಮಣನಿಗೆಲ್ಲಿಯ ಕರ್ಮ? ಹರೆಯದ ಹೆಂಡತಿ ಊರ್ಮಿಳೆಗೆ ಹದಿನಾಲ್ಕು ವರ್ಷಗಳ ಕಣ್ಣೀರ ಕೊರಗನ್ನು ಕೊಟ್ಟು ನಡೆದು ಬಿಟ್ಟನಲ್ಲಾ ಅಣ್ಣನ ನೆರಳಾಗಿ ! ವನವಾಸದಲ್ಲಂತೂ ಲಕ್ಷ್ಮಣನ ವ್ಯಕ್ತಿತ್ವದ ಹತ್ತು ಹಲವು ಮಜಲುಗಳ ಪರಿಚಯವಾಗುತ್ತದೆ. ಆಹಾರ -ನೀರು ಒದಗಿಸುವ ಸೇವಕ, ಕಾಡು ಪ್ರಾಣಿ, ವಿಷ ಜಂತು, ರಕ್ಕಸರಿಂದ ಅಣ್ಣ ಅತ್ತಿಗೆಯನ್ನು ಕಾಪಾಡುವ ರಕ್ಷಕ, ಅತ್ತಿಗೆಯ ಕೆಲಸಗಳಲ್ಲಿ ಕೈ ಕೂಡಿಸುವ ನಲ್ಮೆಯ ಮೈದುನ, ಅಣ್ಣನ ಬೇಸರಕ್ಕೆ ಆಸರೆಯಾಗುವ ಸ್ನೇಹಿತ.. ಒಂದೇ ಎರಡೇ? ಇಷ್ಟೆಲ್ಲಾ ಸುಗುಣಗಳ ಜೊತೆ ಅವನ ಮುಂಗೋಪವೂ ಇಷ್ಟವಾಗುತ್ತದೆ. ರಾಮನ ಭೇಟಿಗಾಗಿ ಭರತ ಬರುತ್ತಿರುವಾಗ ಅವನು ಯುದ್ಧಕ್ಕೇ ಬಂದನೆಂದು ತೀರ್ಮಾನಿಸಿ ಬಿಲ್ಲು ಬಾಣ ಏರಿಸಿ ಸಿದ್ಧನಾಗೇಬಿಡುತ್ತಾನೆ. ಕೋಪದಲ್ಲಿ ಶೂರ್ಪನಖಿಯ ಮೂಗನ್ನು ಕತ್ತರಿಸುತ್ತಾನೆ. ಸಿಟ್ಟು ಅವನ ಮೂಗಿನ ತೊಟ್ಟಿನಲ್ಲಿ ! ಜಿಂಕೆಯ ಬೆನ್ನಟ್ಟಿ ರಾಮ ಹೋದಾಗ ಅವನ ಆಜ್ಞೆಯಂತೆ ಸೀತೆಯ ಕಾವಲಿಗೆ ನಿಲ್ಲುತ್ತಾನೆ. ರಕ್ಕಸರ ಮಾಯೆಯಿಂದ ರಾಮನ ದನಿಯಲ್ಲಿ ವೇದನೆಯ ಕೂಗು ಕೇಳಿದಾಗ ಸೀತೆ ಆತಂಕಗೊಂಡು, ಅಣ್ಣನ ನೆರವಿಗೆ ಹೋಗಲು ಲಕ್ಷ್ಮಣನಿಗೆ ಹೇಳುತ್ತಾಳೆ. ರಾಮನಿಗೆ ಏನೂ ಆಗಿಲ್ಲ ಅಂತ ಅವನಿಗೆ ಗೊತ್ತು. ನಿರಾಕರಿಸುತ್ತಾನೆ !ಸೀತೆಗೆ ಅವನ ಮೇಲೆ ಸಲ್ಲದ ಕೋಪ ಬರುತ್ತದೆ. ಅಣ್ಣನ ಆಜ್ಞೆ ಅತ್ತಿಗೆಯ ಹಠದ ನಡುವೆ ಸಿಕ್ಕ ಲಕ್ಷ್ಮಣನ ಗೊಂದಲ ಯಾರಿಗೂ ಬೇಡ. ಸೀತಾ ಅಪಹರಣವಾದಾಗ ಇನ್ನಿಲ್ಲದಂತೆ ಪಾಪಪ್ರಜ್ಞೆ ಕಾಡುತ್ತದೆ. ಅಣ್ಣನ ಹೆಗಲಿಗೆ ಬಗಲಾಗಿ, ಬೆನ್ನಿಗೆ ಬೆಂಬಲವಾಗಿ, ಹಗಲಿರುಳು ಜೊತೆಯಾಗಿ ಹೋರಾಡಿ ಗೆಲ್ಲುವ ಅದೇ ತಮ್ಮ, ಸೀತೆಗೆ ಅಗ್ನಿಪರೀಕ್ಷೆ ಎಂದು ರಾಮ ಹೇಳಿದಾಗ ಸಿಡಿದು ನಿಲ್ಲಲು ಹೆದರುವದಿಲ್ಲ. ಅಮಾಯಕ ಹೆಣ್ಣಿಗೆ ಅನ್ಯಾಯವಾದಾಗ, ಅಣ್ಣನಾದರೇನು ಯಾರಾದರೇನು ವಿರೋಧಿಸುವೆ, ವಿದ್ರೋಹಿಸುವೆ ಎಂದು ಗುಡುಗುವ ಲಕ್ಷ್ಮಣ ಒಮ್ಮೆಲೇ ಓದುಗರ , ನೋಡುಗರ ಎದೆಗಿಳಿದು ಬಿಡುತ್ತಾನೆ. ತುಂಬಿದ ಬಸುರಿ ಜಾನಕಿಯನ್ನು ಕಾಡುಪಾಲು ಮಾಡುವ ಪಾಪಭಾರವೂ ಅವನ ಕೊರಳಿಗೇ ! ಅಸಹಾಯಕ ನೋವು ಸಂಕಟದಿಂದ ಹತತೇಜನಾದ ಲಕ್ಷ್ಮಣನ ಸ್ಥಿತಿ ನಮ್ಮ ಹೃದಯ ಹಿಂಡಿಬಿಡುತ್ತದೆ. ರಾಮಾಯಣದುದ್ದಕ್ಕೂ ಲಕ್ಷ್ಮಣ ಸಾಮಾನ್ಯ ಮನುಷ್ಯನ ಅಂತಃಪ್ರಜ್ಞೆಯ ಪ್ರತೀಕವಾಗಿ ನಿಲ್ಲುತ್ತಾನೆ. ಶಾಂತ, ಸಮಾಧಾನಿ, ಸಂಯಮಿ, ಸಮಚಿತ್ತ, ನಿರ್ವಿಕಾರಿ ರಾಮನು ಆದರ್ಶಗಳ ಭಾರದಿಂದ ದೇವರಾಗಿ ದೂರಾದರೆ, ಮಾನವ ಸಹಜ ಪ್ರೀತಿ ಪ್ರೇಮ, ರಾಗ ದ್ವೇಷ, ಸಿಟ್ಟು ಸೆಡವು, ಆವೇಶ ಉದ್ವೇಗ, ಹತಾಶೆ ನಿರಾಸೆಗಳೆಲ್ಲವನ್ನೂ ಮುಕ್ತವಾಗಿ ವ್ಯಕ್ತ ಮಾಡುವ ಲಕ್ಷ್ಮಣ ಮನಸ್ಸಿಗೆ ಹತ್ತಿರವಾಗುತ್ತಾನೆ, ಆಪ್ತವಾಗುತ್ತಾನೆ. ಅಂತೆಯೇ ರಾಮನ ಜೀವನದಲ್ಲಿಯೂ ಲಕ್ಷ್ಮಣನಿಗೇ ಮೊದಲ ಸ್ಥಾನ, ಮಹತ್ವದ ಮಾನ !ಸಾಮಾನ್ಯವಾಗಿ ಪುರುಷನ ಬಲಭಾಗ ಹೆಂಡತಿಗೆ ಮೀಸಲು. ಆದರೆ ರಾಮನ ಬಲಭಾಗ ಎಂದಿಗೂ ಲಕ್ಷ್ಮಣನಿಗೇ ಮುಡಿಪು !(ದಕ್ಷಿಣೇ ಲಕ್ಷ್ಮಣೋ ಯಸ್ಯ )
ಕನಸಿನಲ್ಲಿಯೂ ಬಯಸದ ಅರಸು ಪಟ್ಟದ ಭಾಗ್ಯ ತಾನಾಗೇ ಅರಸಿ, ವರಿಸ ಬಂದಾಗ ತಿರಸ್ಕರಿಸಿದನಲ್ಲ ಭರತ :ಎಂಥ ಧೀಮಂತ, ಹೃದಯ ಶ್ರೀಮಂತ, ನ್ಯಾಯ ನಿಷ್ಠುರ, ಸ್ಥಿತಪ್ರಜ್ಞ ! ಸೂರ್ಯವಂಶದ ರಕ್ತ. ರಾಮನಿಗೆ ತಕ್ಕ ತಮ್ಮ. ಹೆಸರು ಹೇಳಿ ದೀಪ ಹಚ್ಚುವ ಘನವಂತ ! ಅಯೋಧ್ಯೆಯಂಥ ಬಲಶಾಲಿ ರಾಜ್ಯ, ರಾಜನ ಗತ್ತು ದೌಲತ್ತು,, ಯೌವನದ ವಯಸ್ಸು,, ತರುಣಿ ಸುಂದರಿ ಪತ್ನಿ…. ಯಾರಿಗುಂಟು ಯಾರಿಗಿಲ್ಲ? ಆದರೂ ಇದು ಅಣ್ಣನಿಗೆ ಸೇರಿದ ಸೊತ್ತು ಎಂಬ ನ್ಯಾಯಕ್ಕಾಗಿ, ತನ್ನದಲ್ಲದ್ದನ್ನು ತಿನ್ನಬಾರದು ಎಂಬ ನೀತಿಗಾಗಿ, ಅಡವಿಗೆ ಹೋದ ಅಣ್ಣ, ತಮ್ಮ ಮತ್ತು ಅತ್ತಿಗೆಗೆ ಇಲ್ಲದ ಭಾಗ್ಯ ನನಗೇಕೆ ಎಂಬ ಸೋದರ ಭಾವಕ್ಕೆ ಎಲ್ಲ ಬಿಟ್ಟು ಕಾವಿ ಉಟ್ಟ ಭರತ. ಪಟ್ಟದ ಮೇಲೆ ರಾಮ ಪಾದುಕೆ ಇಟ್ಟು, ಅರಮನೆ ತೊರೆದು ಗುಡಿಸಲಿನಲ್ಲಿ,, ರಾಮನ ದಾರಿ ಕಾಯುತ್ತ ಹದಿನಾಲ್ಕು ವರ್ಷ ಕಳೆದುಬಿಟ್ಟ ಭರತನ ತ್ಯಾಗಕ್ಕೆ ಹೋಲಿಕೆಯೇ ಇಲ್ಲ. ಲಕ್ಷ್ಮಣನಂತೆ ರಾಮನ ನೆರಳಾಗದಿದ್ದರೂ ರಾಮನ ನೆನಪಿನಲ್ಲೇ ಜೀವ ತೇದ ಗಂಧ ಅವನು ! ರಾಮನಿಗೂ ಭರತನ ಬಗ್ಗೆ ಅತೀವ ವಾತ್ಸಲ್ಯ. ಅವನ ಸೋದರ ಪ್ರೇಮವನ್ನು,, ತ್ಯಾಗ ಬುದ್ಧಿಯನ್ನು ಹೊಗಳಿದಷ್ಟೂ ಕಡಿಮೆಯೇ. ಬಂಧುಪ್ರೇಮವನ್ನು ಶಿಖರಕ್ಕೇರಿಸಿದ ಕೀರ್ತಿ ಭರತನಿಗೆ ಸಲ್ಲುತ್ತದೆ.
ಮೊನ್ನೆ ದೂರದರ್ಶನದಲ್ಲಿ ರಾಮ -ಲಕ್ಷ್ಮಣ – ಸೀತೆಯರು ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದೃಶ್ಯ ಬರುತ್ತಿತ್ತು. ಊರ ಹೊರಗಿನ ನಂದಿಗ್ರಾಮದಲ್ಲಿ ಭರತ ಕಾತರದಿಂದ ಕಾದು ನಿಂತಿದ್ದ. ಜೊತೆಗೆ ಶತ್ರುಘ್ನನೂ ಪೂರ್ತಿ ಪರಿವಾರದೊಂದಿಗೆ ಕಾದಿದ್ದ. ಬಾಕಿ ಮೂವರು ಜಟಾಧಾರಿಗಳಾಗಿ ನಾರುಬಟ್ಟೆ ಉಟ್ಟಿದ್ದರೆ, ಶತ್ರುಘ್ನ ಆಭೂಷಣ ಸಹಿತ ರಾಜ ಪೋಷಾಕು ಧರಿಸಿದ್ದನು. ಅದನ್ನು ನೋಡಿ ನನ್ನ ಮಕ್ಕಳು “ಅಮ್ಮಾ ನೋಡು, ಇದರಲ್ಲಿ ಮಸ್ತ್ ಮಜಾ ಮಾಡಿದವನೆಂದರೆ ಶತ್ರುಘ್ನ. ಇಬ್ಬರು ಅಣ್ಣಂದಿರು ವನವಾಸಕ್ಕೆ ಮತ್ತೊಬ್ಬ ಅಣ್ಣ ಊರ ಹೊರಗೆ ಕುಟೀರದಲ್ಲಿ. ಮಹಲಿನ ಸುಖವೂ, ರಾಜ ಸನ್ಮಾನವೂ ಒಬ್ಬನಿಗೇ “ಎಂದು ಮಜಾಕು ಮಾಡಿದರು. ಆಗ ಸುಮ್ಮನೇ ನಕ್ಕ ನಾನು ನಂತರ ಯೋಚಿಸಹತ್ತಿದೆ, “ಹೌದೇ, ಹೀಗಿರಬಹುದೇ? ” ಅಲ್ಲ, ಹಾಗಿರಲು ಸಾಧ್ಯವಿಲ್ಲ ಎನಿಸಿತು. ಅವನ ಎಳೆಯ ತೋಳುಗಳ ಮೇಲೆ ಬಿದ್ದ ಭಾರ ಕಮ್ಮಿಯೇ? ವೀರಾಧಿವೀರ ಅಣ್ಣಂದಿರು ವನಕ್ಕೆ ನಡೆದರು. ಯಾರು ರಾಜ್ಯಭಾರ ವಹಿಸಬೇಕಿತ್ತೋ ಅವನು ಊರಾಚೆಯ ಕುಟೀರದಲ್ಲಿದ್ದಾನೆ. ಅರಮನೆಯಲ್ಲಿ,, ವಿಧವೆಯರಾದ ಶೋಕದಲ್ಲಿ ಮೂವರು ತಾಯಿಯರು. ಮಕ್ಕಳನ್ನು ಅಗಲಿದ ದುಃಖದಲ್ಲಿ ಕೌಸಲ್ಯೆ ಮತ್ತು ಸುಮಿತ್ರೆ. ಪಾಪಪ್ರಜ್ಞೆಯಲ್ಲಿ ಬಳಲುತ್ತಿದ್ದ ಕೈಕಯಿ. ವಯಸ್ಸು ಬೇರೆ ಆಗಿದೆ. ಗಂಡನನ್ನು ಅಗಲಿ ಇರಬೇಕಾದ ಹರೆಯದ ಊರ್ಮಿಳೆ, ಬಹುಷಃ ಮಾಂಡವಿಯದೂ ಅದೇ ಹಣೆಬರಹ !ಇವರೆಲ್ಲರ ಯೋಗಕ್ಷೇಮದ ಹೊಣೆ ಶತ್ರುಘ್ನನೇ ಹೊತ್ತಿರಬಹುದು. ರಾಮನ ಪ್ರತಿನಿಧಿಯಾಗಿ ಭರತ ದೂರದಿಂದಲೇ ಕೊಡುವ ಆಜ್ಞೆ , ಸಲಹೆ ಸೂಚನೆಗಳನ್ನು ಪಕ್ಕಾಗಿ ಪಾಲಿಸಿದ್ದು ಶತ್ರುಘ್ನ. ಪ್ರಜೆಗಳ ಪಾಲನೆ, ಅವರ ವ್ಯವಸಾಯ, ಕೆಲಸ ಕಾರ್ಯ ಸರಿಯಾಗಿ ನಡೆದು, ಬೊಕ್ಕಸ ಬರಿದಾಗದಂತೆ ದಕ್ಷತೆ ವಹಿಸುವುದು, ಎಲ್ಲಕ್ಕೂ ಹೆಚ್ಚಾಗಿ ಶತ್ರುಗಳ ಕಾಟದಿಂದ ರಾಜ್ಯವನ್ನು ಸುರಕ್ಷಿತವಾಗಿಡುವದು…… ಇತ್ಯಾದಿ ರಾಜಕಾರ್ಯಗಳಿಗೇನು ಕೊರತೆ? ಬಹುಷಃ ಅಣ್ಣಂದಿರೆಲ್ಲರ ಪಾತ್ರಗಳನ್ನು ಒಬ್ಬನೇ ನಿಭಾಯಿಸಿದ ಶ್ರೇಯ ಶತ್ರುಘ್ನನಿಗೇ ಸೇರಬೇಕು. ರಾಮ ವನವಾಸ ಮುಗಿಸಿ ಬಂದಾಗ ಭರತ ಅವನಿಗೊಪ್ಪಿಸಿದ್ದು ಅವನ ಪ್ರತೀಕವಾದ ಪಾದುಕೆಯಾದರೆ ಶತ್ರುಘ್ನ  ರಾಮನಿಗೊಪ್ಪಿಸಿದ್ದು ಕುಶಲ -ಮಂಗಲ ಅಯೋಧ್ಯೆಯನ್ನು ! ಶತ್ರುಘ್ನ ಎಲೆಯ ಮರೆಯ ಮಲ್ಲಿಗೆ !! ಕಣ್ಣಿಗೆ ಕಾಣದಿದ್ದರೂ ಪರಿಮಳ ಬೀರುವದು ಸುಳ್ಳಲ್ಲ.
ಇನ್ನು ರಾವಣ, ವಿಭೀಷಣ, ಕುಂಭಕರ್ಣರ ಸೋದರ ಸಂಬಂಧ ಬೇರೆಯೇ ಮಜಲಿನದು. ತಂಗಿ ಶೂರ್ಪನಖಿಯ ಅಪಮಾನದ ಸೇಡು ತೀರಿಸಹೋಗಿ ಭಾರೀ ಬೆಲೆ ತೆತ್ತ ರಾವಣ. ಅಣ್ಣನ ಮೇಲೆ ಎಷ್ಟೇ ಗೌರವ ಪ್ರೇಮವಿದ್ದರೂ ಅವನ ಹೇಯ ಕಾರ್ಯವನ್ನು ಖಂಡಿಸಿ, ಬುದ್ಧಿವಾದ ಹೇಳುವ ಧೈರ್ಯ ವಿಭೀಷಣನಿಗಿದೆ. ಕೇಳದೇ ಹೋದಾಗ ಧರ್ಮ ಮತ್ತು ಸತ್ಯ ನಿಷ್ಠೆಗಾಗಿ ಅಣ್ಣನನ್ನು ತೊರೆದು ಶತ್ರುಪಕ್ಷದ ರಾಮನನ್ನು ಬೆಂಬಲಿಸುವ ಕಠೋರ ನಿರ್ಧಾರ ಮಾಡಿದ. ಕುಲಗೇಡಿ, ದೇಶದ್ರೋಹದ ಭಾರ ಹೊತ್ತುಕೊಂಡೇ ನ್ಯಾಯದ ಹಾದಿಯಲ್ಲಿ ನಡೆದ ವಿಭೀಷಣ. ಕುಂಭಕರ್ಣ ಸಹ ಅಣ್ಣ ರಾವಣನ ಕೃತ್ಯವನ್ನು ವಿರೋಧಿಸುತ್ತಾನೆ. ಆದರೆ ಯುದ್ಧದಂಥ ಕಷ್ಟಕಾಲದಲ್ಲಿ ಅಣ್ಣನ ಕೈ ಬಿಡುವುದಿಲ್ಲ. ಒಬ್ಬ ಆದರ್ಶ ತಮ್ಮನಾಗಿ, ವೀರಯೋಧನಾಗಿ ಕಲಿತನದಿಂದ ಕಾದಾಡಿ ವೀರ ಮರಣವನ್ನಪ್ಪುತ್ತಾನೆ.
ಶ್ರೀರಾಮಚಂದ್ರನಂತೂ ವ್ಯಕ್ತಿತ್ವದ ಎಲ್ಲ ಮಜಲುಗಳಲ್ಲೂ ಆದರ್ಶನೇ ಹೌದು. ಹಿರಿಯಣ್ಣನಾಗಿ ಎಲ್ಲ ತಮ್ಮಂದಿರ ಮೇಲೆ ಒಂದೇ ತೆರನಾದ ಅಮಿತ ವಾತ್ಸಲ್ಯ, ವಿಶ್ವಾಸ ತೋರಿದವನು. ಅವರವರಿಗೆ ಸಲ್ಲಬೇಕಾದ ಶ್ರೇಯವನ್ನು ನಿರ್ವoಚನೆಯಿಂದ ಕೊಟ್ಟವನು. ಹುಟ್ಟಿದಾಗಿನಿಂದ ಕೊನೆಯವರೆಗೂ ರಾಮ ಮತ್ತು ಸೋದರರು ಒಬ್ಬರಿಗೊಬ್ಬರು ಆಸರೆಯಾಗಿ ಬೆಂಬಲವಾಗಿ ನಿಂತು ಬಾಳಿದ ಪರಿ ಇಂದಿನ ನಮಗೆ ವಿಸ್ಮಯವೆನ್ನಿಸದೇ ಇರದು. ಯುಗ ಕಳೆದರೂ ಬಂಧುಪ್ರೇಮಕ್ಕೆ,, ತ್ಯಾಗಕ್ಕೆ ಶ್ರೇಷ್ಠ ಉದಾಹರಣೆಯಾಗಿ ನಿಲ್ಲುವುದು ಒಂದೇ – “ರಾಮಾಯಣ “!.

ದಕ್ಷಿಣೇ ಲಕ್ಷ್ಮಣೋ ಯಸ್ಯ
ವಾಮೇತು ಜನಕಾತ್ಮಜಾ
ಪುರತೋ ಮಾರುತಿ ಯಸ್ಯ
ತ್ವಮ್ ವಂದೇ ರಘುನಂದನಮ್ !.

(ಯಾರ ಬಲಭಾಗದಲ್ಲಿ ಲಕ್ಷ್ಮಣ, ಎಡಭಾಗದಲ್ಲಿ ಜಾನಕಿ ಹಾಗೂ ಎದುರುಗಡೆ ಮಾರುತಿ ಇರುವರೋ ಅಂಥ ರಘುನಂದನನಿಗೆ ವಂದನೆಗಳು. )

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button