ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟದ ಮಹತ್ವದ ಸಭೆ ಆರಂಭವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮಗಳ ಜಾರಿ ಕುರಿತು ಚರ್ಚೆ ನಡೆದಿದೆ.
ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ, ಅಶ್ವತ್ಥ ನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ವಿ.ಸೋಮಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಅಥವಾ ವಾರಪೂರ್ತಿ ಕರ್ಫ್ಯೂ ಮುಂದುವರಿಕೆ, ಇಲ್ಲವೇ ವೀಕೆಂಡ್ ಕರ್ಫ್ಯೂ ಮುಂದುವರಿಕೆ ಸೇರಿದಂತೆ ಟಫ್ ರೂಲ್ಸ್ ಜಾರಿ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಲ್ಲದೇ ಕೊರೊನಾ ಲಸಿಕೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಆಕ್ಸಿಜನ್ ಕೊರತೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ನೀಡಿರುವ ಸಲಹೆ ಕುರಿತಾಗಿ ಚರ್ಚೆ ನಡೆಯಲಿದೆ. ಒಟ್ಟಾರೆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ದೆಹಲಿಯಂತೆಯೇ ಒಂದು ವಾರ ಲಾಕ್ ಡೌನ್ ಜಾರಿ ಮಾಡುತ್ತಾ ಅಥವಾ ಕರ್ಫ್ಯೂ ಸೇರಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಸೋಂಕಿತರು ಆಸ್ಪತ್ರೆಗೆ ಬರಬೇಡಿ ಸಚಿವ ಸುಧಾಕರ್ ಮನವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ