ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಆರಂಭಿಸಿದೆ. ಆದರೆ ಲಸಿಕೆ ಲಭ್ಯತೆಯೇ ಇಲ್ಲದೇ ಅಭಿಯಾನ ಆರಂಭಿಸಿರುವುದಾದರೂ ಯಾಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕೇರ್ಸ್ ಅಭಿಯಾನದಡಿ ಕೋವಿಡ್ ಸೋಂಕಿತರ ನೆರವಿಗೆ ಆಂಬುಲೆನ್ಸ್ ಗಳಿಗೆ ಚಾಲನೆ ನೀಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾವುದೇ ಪೂರ್ವತಯಾರಿಯಿಲ್ಲದೇ ಲಸಿಕೆ ಅಭಿಯಾನ ಘೋಷಿಸಿದ್ದಾರೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಬೇಕೆಂದರೆ ಆರುವರೆ ಕೋಟಿ ವ್ಯಾಕ್ಸಿನ್ ಬೇಕು. ರಾಜ್ಯದಲ್ಲಿ 1 ವ್ಯಾಕ್ಸಿನ್ ಗೆ 300 ರೂ ಇದೆ. ಅಂದರೆ ಸುಮಾರು 2000 ಕೋಟಿ ರೂಪಾಯಿ ಅಗತ್ಯವಿದೆ. ಹೀಗಿರುವಾಗ ಸರ್ಕಾರ ರಾಜ್ಯದ ಜನರಿಗೆ ಲಸಿಕೆ ನೀಡಿಕೆಗೆ ಯಾವ ರೀತಿ ಪೂರ್ವ ತಯಾರಿ ನಡೆಸಿದೆ ಎಂಬುದನ್ನು ವಿವರಿಸಬೇಕು ಎಂದರು.
ನನಗಿರುವ ಮಾಹಿತಿ ಪ್ರಕಾರ ಈ ತಿಂಗಳಾಂತ್ಯಕ್ಕೆ ದೇಶದಲ್ಲಿ ಲಸಿಕೆ ಲಭ್ಯವಾಗುತ್ತದೆ. ಮೋದಿಯವರು ಒಂದು ದೇಶದ ಪ್ರಧಾನಿಯಾಗಿ ಹೇಳಿಕೆ ಭರವಸೆ ನೀಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಲಸಿಕೆ ಪೂರೈಕೆ ಬಗ್ಗೆ ಮಾಹಿತಿಯೇ ಇಲ್ಲದೇ ಮೇ 1ರಿಂದ ದೇಶಾದ್ಯಂತ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಘೋಷಿಸಿ ಈಗ ಲಸಿಕೆ ಕೊರತೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇನ್ನು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರು ಲಸಿಕೆ ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಸಚಿವರು, ಸಂಸದರಿಗೆ ಮಾತ್ರ ಲಸಿಕೆಗಳನ್ನು ಕೊಡುತ್ತಿದ್ದಾರೆ. ಸಂದರ ಉಮೇಶ್ ಜಾಧವ್ ಅವರಿಗೆ ಮೂಟೆಗಟ್ಟಲೆ ಲಸಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ; ಚಾಲನೆ ನೀಡಿದ ಸಿಎಂ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ