Latest

ಪ್ರತಿಯೊಂದು ಖಾಸಗಿ ಆಸ್ಪತ್ರೆಗೆ ಒಬ್ಬ ಕೆಎಎಸ್ ಅಧಿಕಾರಿ ನೇಮಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದುವ ಕೋವಿಡ್ ಸೋಂಕಿತರು ಮತ್ತು ಖಾಲಿ ಆಗುವ ಹಾಸಿಗೆಗಳ ಸ್ಟೇಟಸ್ ಅನ್ನು ಇನ್ನು ಮುಂದೆ ಪ್ರತಿದಿನ ಕೋವಿಡ್ ವಾರ್ ರೋಂ ಮತ್ತು ಆಪ್ತಮಿತ್ರ ಪೋರ್ಟಲ್ ಗೆ ನೀಡುವಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಕಟ್ಟು ನಿಟ್ಟಿನ‌ ಸೂಚನೆ ನೀಡಲಾಗಿದೆ ಎಂದು ಕೋವಿಡ್ ಚಿಕಿತ್ಸಾ ಹಾಸಿಗೆ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖಂಡರುಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.

ಪ್ರತಿದಿನ ವೈದ್ಯಕೀಯ ಕಾಲೇಜುಗಳಿಂದ ಎಷ್ಟು ರೋಗಿಗಳು ದಾಖಲಾಗುತ್ತಾರೆ? ಎಷ್ಟು ರೋಗಿಗಳು ಬಿಡುಗಡೆ ಹೊಂದುತ್ತಾರೆ ಎಂಬುದರ ಮಾಹಿತಿ ಸಿಗುತ್ತಿರಲಿಲ್ಲ. ಆದರೆ ಇಂದಿನ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರ ಪರಿಣಾಮವಾಗಿ ಆಕ್ಸಿಜನ್, ಎಚ್ ಡಿ ಯು, ವೆಂಟಿಲೇಟರ್ ಸೇರಿದಂತೆ ಒಟ್ಟು 1035 ವಿವಿಧ ಪ್ರಕಾರದ ಹಾಸಿಗೆಗಳು ಸರ್ಕಾರದ ಸುಪರ್ದಿಗೆ ಲಭಿಸಿವೆ ಎಂದು ಅವರು ತಿಳಿಸಿದರು.

ಕೋವಿಡ್ ರೋಗಿಗಳ ತಪಾಸಣೆಗೆ ಸ್ನಾತಕೋತ್ತರ, ನರ್ಸಿಂಗ್ ಮತ್ತು ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವೆಯನ್ನು ಬಳಕೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಗೌರವಧನ ನೀಡುವ ಸಂಬಂಧ ಸಿಎಂ ಜೊತೆ ಚರ್ಚಿಸಿ ಆದೇಶ ಹೊರಡಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸಲು ತಗಲುವ ಒಟ್ಟು ವೆಚ್ಚದ ಶೇಕಡ 75ರಷ್ಟು ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ನೀಡಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಸರ್ಕಾರಕ್ಕೆ ನೀಡಬೇಕಾಗಿರುವ ಹಾಸಿಗೆಗಳ ಕುರಿತು ಮನವರಿಕೆ ಮಾಡಿಕೊಳ್ಳುವ ಸಂಬಂಧ ಪ್ರತಿಯೊಂದು ಖಾಸಗಿ ಆಸ್ಪತ್ರೆಗೆ ಒಬ್ಬ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು. ಪ್ರತಿ ಐದು ಆಸ್ಪತ್ರೆಗಳಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಿ ಒಟ್ಟಾರೆ ಸರ್ಕಾರದ ಪಾಲಿನ ಹಾಸಿಗೆಗಳು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು

ಬೆಂಗಳೂರಿನಲ್ಲಿ ಒಟ್ಟು 5000 step-down ಹಾಸ್ಪಿಟಲ್ ನಿರ್ಮಾಣದ ಗುರಿ ಇದೆ. ಇದಕ್ಕಾಗಿ ಆಸ್ಪತ್ರೆ ಪಕ್ಕದ ದೊಡ್ಡ ಹೊಟೇಲ್ ಗಳಲ್ಲಿನ‌ ರೂಂಗಳನ್ನು ಪಡೆಯಲಾಗುತ್ತಿದೆ.‌ ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

ಹೆಂಡತಿಗೂ ಬೆಡ್ ವ್ಯವಸ್ಥೆ ಮಾಡಲಾಗುತ್ತಿಲ್ಲ; ಜಿಲ್ಲಾ ಆರೋಗ್ಯಾಧಿಕಾರಿಯ ಅಸಹಾಯಕತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button