ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾನುವಾರ ಮೇ.16ರಂದು ಮುಂಜಾನೆ 9 ಗಂಟೆ ಸಮಯದಲ್ಲಿ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದ ಪರಿಣಾಮ ದೊಡ್ಡವ್ವ ರುದ್ರಪ್ಪ ಪಟ್ಟೆದ (55) ಮತ್ತು ಅವರ ಮೊಮ್ಮಗ ಅಭಿಷೇಕ ಸುರೇಶ ಪಟ್ಟೆದ (3) ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿಯಿಂದ ಗ್ರಾಮದಲ್ಲಿ ಸುರಿಯುತ್ತಿರುವ ಮಳೆ-ಗಾಳಿಗೆ ಇವರು ವಾಸವಿದ್ದ ಮನೆಯ ಗೋಡೆ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂದಗಡ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ದೊಡ್ಡವ್ವ ಅವರ ಮಗ ಮತ್ತು ಸೊಸೆ ಗಾಯಗೊಂಡಿದ್ದಾರೆ.
ಭಾರೀ ಗಾಳಿ-ಮಳೆಯಿಂದಾಗಿ ಖಾನಾಪುರ ತಾಲ್ಲೂಕಿನ ಪಾರವಾಡ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದ ಮೇಚ್ಚಾವಣಿ ಹಾರಿ ಹೋಗಿದೆ. ಜೊತೆಗೆ ಗ್ರಾಮದ ಕೆಲವು ಮನೆಗಳ ಹೆಂಚುಗಳು ಮತ್ತು ತಗಡಿನ ಶೀಟುಗಳು ಹಾರಿಹೋಗಿ ತೀವ್ರ ಹಾನಿ ಸಂಭವಿಸಿದೆ.
ಅಷ್ಟೇ ಅಲ್ಲ, ಗಾಳಿ ಮತ್ತು ಮಳೆಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಿದೆ. ವಿದ್ಯುತ್ ತಂತಿಗಳು ಒಂದಕ್ಕೊಂದು ಸೇರಿಕೊಂಡಿದ್ದು, ಇದರ ಪರಿಣಾಮವಾಗಿ, ಈ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ, ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಗ್ರಾಮಸ್ಥರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ ಮತ್ತು ಹಿಟ್ಟಿನ ಗಿರಣಿಗಳು ಸ್ಥಗಿತಗೊಂಡಿವೆ.
ಹೆಸ್ಕಾಂ ಆದಷ್ಟು ಬೇಗ ವಿದ್ಯುತ್ ಮಾರ್ಗ ಸರಿಪಡಿಸಲು ಗ್ರಾಮದ ನಾಗರಿಕರು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ