ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪುರುಷ-ಮಹಿಳೆ ಎಂಬ ಭೇದ ಶರೀರದ ದೃಷ್ಟಿಯಿಂದ ಬರುತ್ತದೆ. ನಾವೆಲ್ಲರೂ ಆತ್ಮದ ದೃಷ್ಟಿಯಲ್ಲಿ ಪುರುಷರು. ಒಬ್ಬ ಪರಮಾತ್ಮನ ಮಕ್ಕಳಾದ ಕಾರಣ ನಾವೆಲ್ಲರೂ ಸಹೋದರ ಸಹೋದರಿಯರು. ವರ್ತಮಾನ ಸಮಯದಲ್ಲಿ ಪರಮಾತ್ಮ ಶಿವ ಅವತರಿಸಿ ಚಂಚಲ ಮನಸಿನ ಮಾನವರಿಗೆ ದಯೆ, ಶಾಂತಿ, ಪ್ರೇಮ, ಪವಿತ್ರತೆ ಮುಂತಾದ ದೈವಿ ಗುಣಗಳನ್ನು ತುಂಬಿ ದೇವಿ-ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ಆದ್ದರಿಂದ ಭಾರತದಲ್ಲಿ ಇಂದಿಗೂ ಮಹಿಳೆಯರನ್ನು ಶ್ರೀ ಲಕ್ಷ್ಮೀ, ಶ್ರೀ ಸರಸ್ವತಿ, ಶ್ರೀ ದುರ್ಗಾ ರೂಪದಲ್ಲಿ ಪೂಜಿಸಲಾಗುತ್ತಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವಲಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಅಂಬಿಕಾ ಹೇಳಿದರು.
ನಗರದ ಮಹಾಂತೇಶ ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಾಜಿ ಮಹಾಪೌರ ಎನ್.ಬಿ. ನಿರ್ವಾಣಿ ಮಾತನಾಡಿ, ಮಹಿಳೆ-ಪುರುಷರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದರು.
ಮಹಿಳಾ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶ್ರೀದೇವಿ ಪಾಟೀಲ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ, ಅವರ ಸಹಾಯಕ್ಕೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ಜೆಎನ್ಎಂಸಿ ರಿಸರ್ಚ್ ಯೂನಿಟ್ ರಿಸರ್ಚ್ ಆಫೀಸರ್ ಡಾ. ಸ್ಫೂರ್ತಿ ಮಾಸ್ತಿಹೋಳಿ ಮಾತನಾಡಿ, ಮಹಿಳೆಯರು ದೌರ್ಜನ್ಯ ಹಾಗೂ ವಿಚ್ಛೇದನ ಪ್ರಕರಣಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಸಹಜ ರಾಜಯೋಗ ಮೆಡಿಟೇಶನ್ನಿಂದ ಮಹಿಳೆಯರು ಮಾನಸಿಕ ಒತ್ತಡದಿಂದ ಹೊರ ಬರಲು ಸಾಧ್ಯ ಎಂದರು.
ವಿಟಿಯು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ. ರಶ್ಮಿರಾಜ, ಬ್ರಹ್ಮಕುಮಾರಿ ಪ್ರತಿಭಾ ಮಾತನಾಡಿದರು. ಗುರುರಾಜ ಸ್ವಾಗತಿಸಿದರು. ಶಿವೇಶ್ವರಿ ಸಂಸ್ಥೆಯ ಪರಿಚಯ ನೀಡಿದರು. ಶೈಲಜಾ ವಂದಿಸಿದರು. ಡಾ. ಸಂಗೀತಾ ನಿರೂಪಿಸಿದರು.