ಎಂ.ಕೆ.ಹೆಗಡೆ, ಬೆಳಗಾವಿ – ಬೆಳಗಾವಿಯ ಜಿಲ್ಲಾ ಆಸ್ಪತ್ರೆ (ಬಿಮ್ಸ್) ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಸ್ಥಿತಿ ನೋಡುವುದಕ್ಕಾಗಿಯೇ ಸ್ವತಃ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೂ ಸೇರಿ ಐವರು ಮಂತ್ರಿಗಳಿದ್ದಾರೆ. ಓರ್ವ ಉಪಮುಖ್ಯಮಂತ್ರಿ ಇದ್ದಾರೆ. ಸಂಸದರಿದ್ದಾರೆ. ಇವರೆಲ್ಲರೂ ಸೇರಿದಂತೆ 18 ಶಾಸಕರಿದ್ದಾರೆ. ದೆಹಲಿ ಪ್ರತಿನಿಧಿ, ಸರಕಾರದ ಮುಖ್ಯಸಚೇತಕ, ವಿಧಾನಸಭೆ ಉಪಸಭಾಧ್ಯಕ್ಷ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಎಲ್ಲರೂ ಇದ್ದಾರೆ. ಆದರೆ ಯಾರಿಂದಲೂ ಬಿಮ್ಸ್ ನಿಯಂತ್ರಣ ಸಾಧ್ಯವಾಗಿಲ್ಲ.
ಇಲ್ಲಿನ ಅಧಿಕಾರಿಗಳು ಯಾರ ಹಿಡಿತಕ್ಕೂ ಸಿಗುತ್ತಿಲ್ಲ. ಜಿಲ್ಲಾಡಳಿತ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ. ಮಂತ್ರಿಗಳೂ ಕೈ ಎತ್ತಿದ್ದಾರೆ. ನಾನೇ ಅಲ್ಲಿಗೆ ಸ್ವತಃ ಬಂದು ನೋಡುತ್ತೇನೆ ಎಂದು ಯಡಿಯೂರಪ್ಪ ಶನಿವಾರ ವೀಡಿಯೋ ಸಂವಾದದಲ್ಲಿ ತಿಳಿಸಿದ್ದಾರೆ.
ಕೊರೋನಾದಲ್ಲಿ ಬಿಮ್ಸ್ ಪರಿಸ್ಥಿತಿ ಅಲ್ಲೋಲಕಲ್ಲೋಲ ಆಗಿದೆ. ವೆಬ್ ಸೈಟ್ ನಲ್ಲಿ ದಿನವೂ 65 -70 ಆಕ್ಸಿಜನ್ ಬೆಡ್ ಖಾಲಿ ಇದೆ ಎಂದು ಹಾಕುತ್ತಾರೆ. ಅಲ್ಲಿಗೆ ಹೋಗಿ ಕೇಳಿದರೆ ಒಂದೂ ಬೆಡ್ ಇಲ್ಲ, ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎನ್ನುತ್ತಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶನಿವಾರ ಸ್ವತಃ ಆಸ್ಪತ್ರೆಯೊಳಕ್ಕೆ ಹೋಗಿ ಛೀ ಥೂ ಎನ್ನುತ್ತ ಹೊರಗೆ ಬಂದಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವುದಕ್ಕಿಂತ ಪರಿಸ್ಥಿತಿ ಭೀಕರವಾಗಿದೆ ಎಂದಿದ್ದಾರೆ. 2 ಶವಗಳು ಅಲ್ಲಿ ಹಾಗೆಯೇ ಬಿದ್ದಿರುವುದನ್ನು ನೋಡಿದ್ದೇನೆ. ಯಾವಾಗ ಮೃತಪಟ್ಟಿದ್ದು, ಇನ್ಯಾವಾಗ ಹೊರಗೆ ಕಳಿಸುತ್ತೀರಿ ಎಂದೂ ಕೇಳಿ ತಿಳಿದುಕೊಂಡಿದ್ದೇನೆ. ಪರಿಸ್ಥಿತಿ ಅರ್ಥವಾಗಿದೆ ಮುಖ್ಯಮಂತ್ರಿಗಳಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಅವರು ತಿಳಿಸಿದ್ದರಾೆ.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಿಮ್ಸ್ ಕುರಿತು ತಮ್ಮ ಅನುಭವಕ್ಕೆ ಬಂದಿದ್ದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ( ಬೆಳಗಾವಿ ಕೋವಿಡ್ ಪರಿಸ್ಥಿತಿ ಬಿಚ್ಚಿಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರೆ ). ಶಾಸಕ ಅಭಯ ಪಾಟೀಲ ಕೂಡ ಮುಖ್ಯಮಂತ್ರಿಗಳ ಸಭೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಡೆಡ್ ಬಾಡಿಗಳನ್ನು ಕೂಡ ರೋಗಿಗಳ ಮಧ್ಯೆಯೇ ಎಷ್ಟೋ ಗಂಟೆಗಳ ಕಾಲ ಇಡಲಾಗುತ್ತದೆ. 10 -15 ಜನರು ಸತ್ತರೆ ಒಂದೋ ಎರಡೋ ಲೆಕ್ಕ ಕೊಡುತ್ತಾರೆ ಎನ್ನುವುದನ್ನು ಮಂತ್ರಿಗಳು, ಶಾಸಕರು ಬಾಯಿಬಿಟ್ಟು ಹೇಳಿದ್ದಾರೆ. ಮುಚ್ಚಿಟ್ಟ ಸತ್ಯ ಬಹಳ ಇದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಬಳಿ ಹೋಗಿ ಹೇಳುತ್ತೇನೆ, ಅವರನ್ನೇ ಕರೆಸಿ ಇಲ್ಲಿ ಸಭೆ ಮಾಡಿಸುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಬಿಮ್ಸ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ವೈದ್ಯಾಧಿಕಾರಿಗಳು, ನರ್ಸ್ ಗಳಿಗೆ ಕೂಡ ಯಾವುದೇ ಸೌಲಭ್ಯವಾಗಲಿ, ಕನಿಷ್ಠ ಗೌರವವಾಗಲಿ ಇಲ್ಲ ಎನ್ನುವುದು ಬಹಿರಂಗ ಸತ್ಯ. ಕೊರೆನಾದಂತಹ ಗಂಭೀರ ಪರಿಸ್ಥಿತಿಯಲ್ಲೂ ಈ ರೀತಿ ಇದೆ ಎಂದಾದರೆ ಇಂತಹ ಆಸ್ಪತ್ರೆ ಯಾಕೆ ಬೇಕು? ಸರಕಾರ ಇಂತಹ ಆಸ್ಪತ್ರೆಗಳನ್ನಿಟ್ಟುಕೊಂಡು ಏಕೆ ಕಣ್ಣುಚ್ಚಿ ಕುಳಿತಿದೆ. ಇಲ್ಲಿರುವ ಜನಪ್ರತಿನಿಧಿಗಳೆಲ್ಲ ಅಷ್ಟೊಂದು ಅಸಹಾಯಕರಾಗಿದ್ದಾರೆಯೇ?
ಜಿಲ್ಲಾಧಿಕಾರಿಗಳು ಸಭೆಯ ಮೇಲೆ ಸಭೆ ನಡೆಸುತ್ತಾರೆ. ಆದರೆ ಅದರಿಂದ ಪೈಸಾ ಪ್ರಯೋಜನವೂ ಆಗುತ್ತಿಲ್ಲ. ಅಲ್ಲಿ ಸಾಯುವವರು ಸಾಯುತ್ತಲೇ ಇರುತ್ತಾರೆ. ಒಂದು ಸುತ್ತು ಹಾಕಿಬಂದರೆ ಅಲ್ಲಿನ ನರಕ ದೃಷ್ಯ ಕಾಣುತ್ತದೆ.
ಬಿಮ್ಸ್ ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕಾದವರು ತಮ್ಮಿಂದ ಸಾಧ್ಯವಾಗದು ಎಂದಾದರೆ ರಾಜಿನಾಮೆ ಕೊಟ್ಟು ಹೋಗುವುದು ವಿಹಿತವಲ್ಲವೇ? ನಿತ್ಯ ಹತ್ತಾರು ಜನರ ಪ್ರಾಣ ಹೋಗುತ್ತಿದ್ದರೂ ಜೀವಕ್ಕೆ ಬೆಲೆಯೇ ಇಲ್ಲ ಎನ್ನುವಂತಿದ್ದಾರೆ ಎಂದಾದರೆ ಇದು ಕೊಲೆಗಿಂತ ಕಡಿಮೆ ಎಂದು ಅನಿಸುವುದಿಲ್ಲ.
ಈಗ ಯಡಿಯೂರಪ್ಪ ಸ್ವತಃ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಪರಿಸ್ಥಿತಿ ಹೇಗಿದೆ ಎಂದು ಜನರೇ ತೀರ್ಮಾನಿಸಬೇಕಿದೆ. ಈವರೆಗೆ ಉಳಿಸಬಹುದಾಗಿದ್ದ ನೂರಾರು ಜನರ ಪ್ರಾಣ ಬೇಜವಾಬ್ದಾರಿಯಿಂದಲೇ ಹೋಗಿದ್ದರೆ ಅಂತವರೆಲ್ಲ ಬದುಕಿರಲಿಕ್ಕೂ ನಾಲಾಯಕ್ಕು.
ನೋಡೋಣ, ಯಡಿಯೂರಪ್ಪ 4 -5 ದಿನದಲ್ಲಿ ಬರಬಹುದು. ಅಲ್ಲಿಯವರೆಗೆ ಜನರನ್ನು ದೇವರೇ ಕಾಪಾಡಲಿ ಎಂದು ಪ್ರಾರ್ಥಿಸೋಣ.
ಸಿಎಂ ವಿಡಿಯೋ ಸಂವಾದ: ಬೆಳಗಾವಿ ಶಾಸಕರು ಹೇಳಿದ್ದೇನು?
ಕೋವಿಡ್ ಸೋಂಕಿತರು ಬಿಮ್ಸ್ ಗೆ ಯಾಕೆ ಬರುತ್ತಿಲ್ಲ? ; ಹೈ ಪವರ್ ಕಮಿಟಿ ಸಭೆಯಲ್ಲಿ ಏನೆಲ್ಲ ಚರ್ಚೆ?
ವಿನೂತನ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ