✍️ ಪುಷ್ಪ ಪ್ರಸಾದ್
ಜೂನ್ ತಿಂಗಳಿಗೆ ಒಂದು ವಿಶೇಷತೆ ಇದೆ. ಇಂದು ವಿಶ್ವ ಪರಿಸರ ದಿನ. ಇದು ಪರಿಸರ ದಿನಾಚರಣೆಯ ತಿಂಗಳು. ಇದು ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನಗಳಲ್ಲಿ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದದ್ದನ್ನು ನೆನಪಿಸುವ ಮಹತ್ತರವಾದ ದಿನ. ನಾವು ಈ ಪರಿಸರದ ಶಿಶುಗಳು, ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಪುರಾಣ ಕಾಲದಿಂದಲೂ ರಾಜಕುವರರೂ ಋಷಿಗಳ ಆಶ್ರಮದಲ್ಲಿಯೇ ಇದ್ದುಕೊಂಡೇ ಈ ಸಹಜ ಪ್ರಕೃತಿಯ ಮಡಿಲಲ್ಲಿಯೇ ವಿದ್ಯೆ ಕಲಿತರು… ಪರಿಸರವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಅರಿತರು. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ. ನಮ್ಮ ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದರೂ ನಾವು ಅದನ್ನು ನಗಣ್ಯ ಎಂಬಂತೆ ವರ್ತಿಸುತ್ತಿದ್ದೇವೆ. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಉದ್ದೇಶದಿಂದಲೇ 1972 ನೇ ಇಸವಿಯಿಂದ ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದೇವೆ.
ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಮಾನವನ ಜಗತ್ತು ಜೀವ ಸಂಕುಲ ಎಲ್ಲ ಒಂದು ಮಹತ್ವವಾಗಿದೆ . ಇಂತಹ ಪರಿಸರವನ್ನು ಉಳಿಸಿ-ಬೆಳೆಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ನಮ್ಮ ಒಂದು ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡಿದರೆ ನಾಳೆಯ ದಿನ ಪರಿಸರ ನಮ್ಮನ್ನು ಉಳಿಸುವುದಿಲ್ಲ. ಹಸುರು ನಮ್ಮೆಲ್ಲರ ಉಸಿರು ಎಂಬ ನುಡಿ ಮಾತು ನಿಜಕ್ಕೂ ಅದ್ಭುತವಾದ ಅರ್ಥ ಕಲ್ಪಿಸುತ್ತದೆ. ಗಿಡ ಮರ, ಹೂ, ಪ್ರಾಣಿ, ಪಕ್ಷಿಗಳು ಎಲ್ಲ ಜೀವಿಗಳ ಸಂಕುಲವನ್ನು ಪರಿಸರದಲ್ಲಿ ನೋಡುವ ಸೊಬಗು ಕಣ್ಣಿಗೆ ಆಕರ್ಷಣಿಯವಾದದು.
ಮರವಿದ್ದರೆ ಬದುಕು, ಮರವಿದ್ದರೆ ಆಯುಷ್ಯ ಮತ್ತು ಹಸಿರೇ ಉಸಿರು. ಆದ್ರೆ ಅಭಿವೃದ್ಧಿಯ ಮಾತಿನಲ್ಲಿ ಪರಿಸರ ಸಂರಕ್ಷಣೆಯನ್ನು ಮರೆತಿದ್ದೇವೆ. ಅಷ್ಟೇ ಅಲ್ಲ ಉಳಿದಿರುವ ಅಷ್ಟಿಷ್ಟು ಮರಗಳನ್ನು ಕೂಡ ನೆಲಸಮ ಮಾಡಲಾಗುತ್ತಿದೆ. ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದ್ದರೆ ಒಳಿತು, ಇಲ್ಲದಿದ್ದರೆ ಶಾಪ ಅನ್ನುವ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡವರೇ ಕಡಿಮೆ. ಕೇವಲ ಪರಿಸರವಾದಿಗಳು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಉಳಿದವರು ತಾವು ಮಾಡುವ ಮತ್ತು ಅಂದುಕೊಂಡ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಬೆಂಗಳೂರಿನಲ್ಲಂತೂ ಮರಗಳನ್ನು ನೆಡುವ ಬದಲು ಅದನ್ನು ಉರುಳಿಸುವ ಸಂಖ್ಯೆಯೇ ಹೆಚ್ಚಾಗಿದೆ.
ಪ್ರತಿಯೊಬ್ಬರು ಒಂದೊಂದು ಮರ ನೆಡುತ್ತಾ ಪರಿಸರ ಬೆಳೆಸುವಲ್ಲಿ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಜಾಗೃತಿ ಮೂಡಿಸುವ ಕರ್ತವ್ಯ ನಮ್ಮದಾಗಬೇಕು. ನಿಸರ್ಗ ಒಂದು ಕೊಡುಗೆ ಅದನ್ನು ವರ್ಣಿಸಲು ಪದಗಳೇ ಸಾಲದು ನಿಸರ್ಗದ ಒಡಲು ತಾಯಿಯ ಮಡಿಲು ಯಾವುದಕ್ಕೂ ಸರಿಸಾಟಿಯಾಗದು. ಜೀವ ಸಂಕುಲಕ್ಕೆ ಮಗುವಾಗಿ ಪಾಲನೆ ಮಾಡುವ ತಾಯಿ, ಪ್ರಕೃತಿಯನ್ನು ತನ್ನ ಮಡಿಲಲ್ಲಿ ಜೋಗುಳವಾಡುವ ಭೂ ತಾಯಿ ಇವಳನ್ನು ನಾವು ಕಾಪಾಡುವ ಒಂದು ಮನೋಭಾವ ಇರ ಬೇಕು. ಪ್ರಕೃತಿಯ ಸೊಬಗಲಿ ನಾವೆಲ್ಲ ಪ್ರಾಣಿ, ಪಕ್ಷಿಗಳನ್ನು ಜೀವಿಸಲು ಬಿಡಬೇಕು. ಹಸುರು ಉಸಿರಾಗಬೇಕು ಪ್ರತಿಯೊಬ್ಬ ಮಕ್ಕಳಿಗೆ ಪರಿಸರ ಮಹತ್ವ ತಿಳಿಸುವುದರ ಜತೆಗೆ ಜೂನ್ 5 ರಂದು ಸಸಿಗಳನ್ನು ನೆಡುವುದರ ಮೂಲಕ ಪ್ರಕೃತಿಯ ಮಹತ್ವ ತಿಳಿಸುವುದು ನಮ್ಮ ಕರ್ತವ್ಯ. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಪಕ್ಕ ಅಥವಾ ರಸ್ತೆ ಬದಿಯಲ್ಲಿ ಒಂದೊಂದು ಗಿಡ ನೆಟ್ಟರೂ ಕೂಡ ಪರಿಸರ ಉಳಿಸಬಹುದು.
ಸುಂದರ ಪ್ರಕೃತಿ ಭೂಮಿಯನ್ನೇ ಸ್ವರ್ಗವಾಗಿಸಿದೆ. ಇಂತಹ ಸಂದರ್ಭದಲ್ಲಿ ಅ ಪ್ರಕೃತಿಯ ಸಂಪತ್ತು ಉಳಿವು ನಮ್ಮ ಕೈಯಲ್ಲಿ ಇದೆ. ನಮ್ಮ ಬೇಕು ಬೇಡಿಕೆಗಳನ್ನು ಈ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಪರಿಸರದಿಂದ ಪಡೆದುಕೊಳ್ಳುವುದು. ಅದರ ಉಳಿವಿಗಾಗಿ ಪ್ರತಿಯೊಬ್ಬರು ಪ್ರತಿ ಕ್ಷಣವೂ ಆಲೋಚಿಸುವ ಭಾವನೆ ಹೊಂದಿರಬೇಕು. ಎಲ್ಲರೂ ನಿಸರ್ಗದ ಮಕ್ಕಳು. ಚಿಗುರುವ ಎಲೆಗಳಂತೆ ನಮ್ಮ ದಿನ ನಿತ್ಯದ ಜೀವನ ಪರಿಸರ ಸೌಂದರ್ಯ ಇನ್ನೂ ಹೆಚ್ಚಾಗಲಿ. ಇದು ಪ್ರಕೃತಿಯಲ್ಲಿ ಅಡಗಿರುವ ಸೌಂದರ್ಯ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ