Kannada NewsLatest

ಕೃಷಿ ಜಿಲ್ಲೆಯಾಗಿ ಘೋಷಣೆಯಾಗುತ್ತಾ ಚಿಕ್ಕೋಡಿ?

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಶೈಕ್ಷಣಿಕ ಜಿಲ್ಲೆಯ ಮಾದರಿಯಲ್ಲಿ ಚಿಕ್ಕೋಡಿಯನ್ನು ಕೃಷಿ ಜಿಲ್ಲೆಯಾಗಿ ಘೋಷಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಈ ರೀತಿಯ ಘೋಷಣೆಯ ಸಾಧ್ಯತೆ ಕುರಿತು ಪರಿಶೀಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.

ರಸಗೊಬ್ಬರ, ಬಿತ್ತನೆ ಬೀಜಗಳ ಲಭ್ಯತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಶೈಕ್ಷಣಿಕ ಜಿಲ್ಲೆ ಮಾದರಿಯಲ್ಲಿ ಚಿಕ್ಕೋಡಿಯನ್ನು ಕೃಷಿ ಜಿಲ್ಲೆಯಾಗಿ ಘೋಷಿಸುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಳ್ಳಬೇಕು ಎಂದು ಕುಡಚಿ ಶಾಸಕ ಪಿ‌.ರಾಜೀವ್ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಕೃಷಿ ಸಚಿವರು, ಈ ರೀತಿ ಕೃಷಿ ಜಿಲ್ಲೆ‌ ಘೋಷಿಸುವ ಬಗ್ಗೆ ಗೊತ್ತಿಲ್ಲ. ಅಧಿಕಾರಿಗಳ ಜತೆ ಚರ್ಚಿಸಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆಯಿಲ್ಲ; ಸಮರ್ಪಕ ದಾಸ್ತಾನು ಲಭ್ಯವಿದ್ದು, ಯಾವುದೇ ಕಾರಣಕ್ಕೂ ಕಾಳಸಂತೆಯಲ್ಲಿ ಸಬ್ಸಿಡಿ ಗೊಬ್ಬರ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ‌ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೊಬ್ಬರ ಸಮರ್ಪಕ ವಿತರಣೆಗೆ ಸೂಚನೆ:

ಫೆಡರೇಶನ್ ಮೂಲಕ ಸಮರ್ಪಕವಾಗಿ ಗೊಬ್ಬರ ವಿತರಿಸಬೇಕು. ಸಾಕಷ್ಟು ದಾಸ್ತಾನು ಇರುವುದರಿಂದ ಸಮರ್ಪಕ ವಿತರಣೆ ಮಾಡಬೇಕು ಇಲ್ಲದಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೊಸ ತಾಲ್ಲೂಕು ಪುನರ್ವಿಂಗಡಣೆ ಬಳಿಕವೇ ಅಗತ್ಯ ರೈತ ಸಂಪರ್ಕ ಕೇಂದ್ರಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು. ಹಣಕಾಸು ಇಲಾಖೆಯ ಒಪ್ಪಿಗೆ ದೊರೆತ ಬಳಿಕ ನೂತನ ತಾಲ್ಲೂಕುಗಳಿಗೆ ಕೃಷಿ ಸಹಾಯಕ ನಿರ್ದೇಶಕರ ಹುದ್ದೆ ಮಂಜೂರು ಮಾಡಲಾಗುತ್ತದೆ ಎಂದು ತಿಳಿಸಿದರು.

ಬೆಳೆ ಸಮೀಕ್ಷೆ; ಭೂಮಿ ಸಾಫ್ಟ್‌ವೇರ್ ಗೆ ಲಿಂಕ್:

ರೈತರಿಂದಲೇ ಬೆಳೆ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಬಾರಿ ಭೂಮಿ ಸಾಫ್ಟ್‌ವೇರ್ ಗೆ ಲಿಂಕ್ ಮಾಡುವುದರಿಂದ ಬೆಳೆ ಸಮೀಕ್ಷೆ ವಿವರ ನೇರವಾಗಿ ಪಹಣಿಗೆ ಸೇರ್ಪಡೆಯಾಗಲಿದೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಂಶೋಧಕರು ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ರೈತರ ಜತೆ ಸಮಾಲೋಚನೆ ನಡೆಸಬೇಕು ಎಂದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಈ ಬಗ್ಗೆ ಇಲಾಖೆಯ ವತಿಯಿಂದ ವರದಿ ಪಡೆದುಕೊಳ್ಳಲಾಗುತ್ತಿದೆ ಎಂದರು.

ಪಿಎಂ‌‌ ಕಿಸಾನ್ ಯೋಜನೆ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ರೈತರಿಂದಲೇ ಬೆಳೆ ಸಮೀಕ್ಷೆ ಯೋಜನೆ ಬಗ್ಗೆ ಕೇಂದ್ರ ಸರಕಾರ ‌ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಷ್ಟ್ರಮಟ್ಟದಲ್ಲಿ ಇದನ್ನು ಜಾರಿಗೊಳಿಸುವುದಕ್ಕೆ ಚಿಂತನೆ ನಡೆಸಿದೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಕಬ್ಬು ಕಟಾವು ಯಂತ್ರಗಳ ಖರೀದಿ ಸಬ್ಸಿಡಿ ಬಾಕಿಯಿದೆ. ಯಂತ್ರಗಳಿಗೆ ಬೇಡಿಕೆ ಇರುವುದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಯಂತ್ರಗಳ ಖರೀದಿ ಗುರಿ ನಿಗದಿಪಡಿಸಬೇಕು ಎಂದು ಸಚಿವರ ಗಮನಸೆಳೆದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ನನ್ನ ಬೆಳೆ ನನ್ನ ಹಕ್ಕು’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ವರ್ಷ ಕೂಡ ಹೆಚ್ಚಿನ ಪ್ರಚಾರ ನೀಡಿ ಇದನ್ನು ಮುಂದುವರಿಸಬೇಕು ಎಂದರು.

ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಪಿ.ರಾಜೀವ್, ರೈತರ ಹೊಲ-ತೋಟಗಳಲ್ಲಿರುವ ಬಾವಿಗಳ ರಕ್ಷಣೆ ಮತ್ತು ಅಭಿವೃದ್ಧಿ ಕೆಲಸವನ್ನು ನರೇಗಾ ಯೋಜನೆಯಡಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇಸ್ರೇಲ್ ಮಾದರಿಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಅಧಿಕಾರಿಗಳು ಕನಿಷ್ಠ ನೂರು ಹೆಕ್ಟೇರ್ ಉಸ್ತುವಾರಿ ವಹಿಸಿಕೊಂಡು ರೈತರ‌ ಜತೆ ಕೃಷಿಯಲ್ಲಿ ಮಾಡಬೇಕು. ಹೊಸ ತಂತ್ರಜ್ಞಾನ, ಆವಿಷ್ಕಾರಗಳನ್ನು ಪರಿಚಯಿಸಬೇಕು.‌ಇದರಿಂದ ರೈತರಿಗೆ ಇಲಾಖೆಯ ಮೇಲೆ ವಿಶ್ವಾಸ ಮೂಡಲಿದೆ ಎಂದು ಶಾಸಕ ರಾಜೀವ್ ಅಭಿಪ್ರಾಯಪಟ್ಟರು.

ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ನರೇಗಾ ಯೋಜನೆಯಡಿ ರೈತರ ಬಾವಿಗಳನ್ನು ಅಭಿವೃದ್ಧಿಪಡಿಸಿದರೆ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ. ಕೃಷಿ ಇಲಾಖೆಯು ಇದಕ್ಕೆ ಆದ್ಯತೆ ನೀಡಬೇಕು ಎಂದರು.

ಶಾಸಕ ಮಹಾಂತೇಶ ದೊಡ್ಡಗೌಡ್ರ, ಕಿತ್ತೂರು ತಾಲ್ಲೂಕಿಗೆ ಕೃಷಿ ಸಹಾಯಕ ನಿರ್ದೇಶಕ ಹುದ್ದೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಗೊಬ್ಬರ ವಿತರಣೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಫೆಡರೇಶನ್ ಮೂಲಕ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನೆರೆಯ ಧಾರವಾಡ ಜಿಲ್ಲೆಗೆ ಹೋಲಿಸಿದರೆ ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕಿನ ರೈತರಿಗೆ ಬೆಳೆವಿಮೆ ಪರಿಹಾರದಲ್ಲಿ ತಾರತಮ್ಯ ಉಂಟಾಗುತ್ತಿದೆ. ಈ ಬಗ್ಗೆ ಪ್ರತಿ ಸಭೆಯಲ್ಲಿ ಚರ್ಚೆ ನಡೆಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಹೇಳಿದರು.

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಉತ್ತಮ ಮಳೆ‌ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೋಕಾಕ ಹಾಗೂ ಮೂಡಲಗಿ ಹೊರತುಪಡಿಸಿ ಎಲ್ಲೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಬೀಜದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು. ರೈತ ಸಂಪರ್ಕ ಕೇಂದ್ರಗಳಲ್ಲಿ 16,411 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಮಾಹಿತಿಯನ್ನು ನೀಡಿದರು.

ಬೆಳಗಾವಿ ಸಂಸದರಾದ ಮಂಗಲಾ ಅಂಗಡಿ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್, ಕೃಷಿ ಇಲಾಖೆಯ ಅಪರ ನಿರ್ದೇಶಕ ಡಾ.ವಿ.ಜೆ.ಪಾಟೀಲ, ಕೃಷಿ ಇಲಾಖೆಯ ವಿಚಕ್ಷಣಾ ದಳದ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೆಕರ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಹತ್ವದ ಭಾಷಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button