Latest

ಪರವಾನಿಗೆ ಇಲ್ಲದೆ ಮಾರಾಟ; 1,90,000 ಮೌಲ್ಯದ ಕೃಷಿ ಪರಿಕರಗಳ ಜಪ್ತಿ 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸವದತ್ತಿ ತಾಲ್ಲೂಕಿನ ಯರಗಟ್ಟಿ ಹೋಬಳಿಯ ಅಕ್ಕಿಸಾಗರ ಗ್ರಾಮದಲ್ಲಿ ಶ್ರೀ ಆಂಜನೇಯ ಅಗ್ರೋ ಸೆಂಟರ್‌ ಮೇಲೆ ದಾಳಿ ನಡೆಸಿ, ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ಕೃಷಿ ಪರಿಕರಗಳನ್ನು ಜಪ್ತಿ ಮಾಡಿ, ಮಾರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಿಲಾಗಿದೆ ಎಂದು  ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ ಅವರು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳಾದ ಆರ್.ಬಿ.ಪಾಟೀಲ್ ಮತ್ತು  ಸುಪ್ರೀತಾ ಅಂಗಡಿ ಅವರು ದಾಳಿ ನಡೆಸಿದ್ದಾರೆ.

ಈ ವೇಳೆ, ಅಂಗಡಿ ಮಾಲೀಕರಾದ ಚಿದಾನಂದ ಎಸ್. ಕತ್ತಿ ಅವರು ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಕೃಷಿ ಇಲಾಖೆಯಿಂದ ಅಧಿಕೃತ ಮಾರಾಟ ಪರವಾನಿಗೆಯನ್ನು ಪಡೆಯದೆ, ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ.

ಅಲ್ಲದೇ, ದರ ಪಟ್ಟಿ, ದಾಸ್ತಾನು ಹಾಗೂ ಇತರೆ ಯಾವುದೇ ದಾಖಲೆಗಳನ್ನು ನಿರ್ವಹಿಸದೆ ಮಾರಾಟ ಮಾಡುತ್ತಿರುವುದಲ್ಲದೆ ರೈತರಿಗೆ

Home add -Advt

ಖರೀದಿಸಿದ ಯಾವುದೇ ಪರಿಕರಗಳಿಗೆ ಬಿಲ್ಲನ್ನು ಕೂಡ ನೀಡದಿರುವುದು ಕಂಡುಬಂದಿದೆ ಎಂದು ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ ಅವರು ತಿಳಿಸಿದ್ದಾರೆ.

ದಾಳಿ ವೇಳೆ ಕೃಷಿ ಪರಿಕರಗಳ ಜಪ್ತಿ :

ದಾಳಿಯಲ್ಲಿ ರೂ. 1,90,000 ಮೌಲ್ಯದ 30 ವಿವಿಧ ಕೀಟನಾಶಕಗಳು, ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಜಪ್ತಿ ಮಾಡಿಕೊಂಡು ಮಾರಾಟ ಮಳಿಗೆಯನ್ನು ಸೀಜ್ ಮಾಡಿ ಕಾನೂನು ಕ್ರಮ ಜಾರಿಗೊಳಿಸಿದ್ದು ಮೊಕದ್ದಮೆ ಹೂಡುವ ಪ್ರಕ್ರಿಯೆಗೆ ಚಾಲನೆ ನೀಡಿಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಾಳಿ  ಸಂದರ್ಭದಲ್ಲಿ ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರವಿ ವರಗಣ್ಣವರ ಹಾಜರಿದ್ದರು.

ಕೃಷಿ ನಿರ್ದೇಶಕರಿಂದ ರೈತರಿಗೆ ಸಲಹೆ :

ದಾಳಿ ಹಿನ್ನೆಲೆಯಲ್ಲಿ ರೈತರು ಕಡ್ಡಾಯವಾಗಿ ಯಾವುದೇ ಕೃಷಿ ಪರಿಕರಗಳನ್ನು ಕೃಷಿ ಇಲಾಖೆಯಿಂದ ಪರವಾನಿಗೆಯನ್ನು ಪಡೆದ ಅಧಿಕೃತ ಮಾರಾಟಗಾರರಿಂದ ಖರೀದಿಸಬೇಕು ಮತ್ತು ತಪ್ಪದೆ ರಸೀದಿಯನ್ನು ಪಡೆದುಕೊಳ್ಳಬೇಕು ಎಂದು  ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ ಅವರು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.

Related Articles

Back to top button