ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ಜುಲೈ 1ರಿಂದ ಶಾಲೆಗಳು ಆರಂಭವಾಗಲಿವೆ ಎಂದು ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ, ಶಿಕ್ಷಕರು ಜೂನ್ 15ರಿಂದ ಹಾಜರಾಗಬೇಕೆಂದು ಸೂಚಿಸಿರುವುದು ಶಿಕ್ಷಕರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಆದೇಶ ಪಾಲನೆ ಹಲವು ಕಾರಣಗಳಿಂದ ಸಾಧುವಲ್ಲ, ಸಾಧ್ಯವೂ ಇಲ್ಲ. ಹಾಗಾಗಿ ತಕ್ಷಣ ಆದೇಶ ಹಿಂದಕ್ಕೆ ಪಡೆದು ಶಿಕ್ಷಕರೂ ಶಾಲಾರಂಭದ ವೇಳೆಯಲ್ಲೇ ಶಾಲೆಗೆ ಹಾಜರಾಗುವಂತೆ ಆದೇಶ ಹೊರಡಿಸಬೇಕು ಎಂದು ವಿವಿಧ ಶಿಕ್ಷಕರ ಸಂಘಟನೆಗಳು ಮನವಿ ಸಲ್ಲಿಸಿವೆ.
ರಾಜ್ಯದ 19ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಲಾಕ್ ಡೌನ್ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಅನೇಕ ಕಡೆ ಶಿಕ್ಷಕರು ಇನ್ನೂ ಕೊರೋನಾ ಕರ್ತವ್ಯದಿಂದ ಬಿಡುಗಡೆಗೊಂಡಿಲ್ಲ. ಶಾಲೆಗೆ ತೆರಳಲು ಬಸ್ ವ್ಯವಸ್ಥೆ ಇಲ್ಲ. ಈ ಎಲ್ಲ ಗೊಂದಲ, ಅಡ್ಡಿ, ಆತಂಕಗಳ ಮಧ್ಯೆ ಶಿಕ್ಷಕರನ್ನು ಶಾಲೆಗೆ ಕರೆಸುವ ತಪ್ಪು ನಿರ್ಧಾರವನ್ನು ಶಿಕ್ಷಣ ಇಲಾಖೆ ಮಾಡಬಾರದು ಎಂದು ಮನವಿ ಮಾಡಲಾಗಿದೆ.
ಕಳೆದ ತಿಂಗಳಿನಿಂದಲೂ ಶಿಕ್ಷಕರು ಕೊರೊನಾ ಕಾರ್ಯಕ್ಕೆ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇದೀಗ ಶಾಲಾರಂಭದ ಕಡ್ಡಾಯ ಆದೇಶದಿಂದ ಶಿಕ್ಷಕರು ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ಮಕ್ಕಳು ಶಾಲೆಗೆ ಬಾರದೇ ಇದ್ದರೂ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂಬ ಆದೇಶ ಸರಿಯಲ್ಲ ಎಂದು ಸಂಘಟನೆಗಳು ಹೇಳಿವೆ.
ನೂರಾರು ಶಿಕ್ಷಕರು ಈ ಬಾರಿ ಕೊರೊನಾ ಸೋಂಕಿಗೆ ತುತ್ತಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ಶಿಕ್ಷಕರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಸಿಗೆ ರಜೆಯ ಅವಧಿಯಲ್ಲಿಯೂ ಶಿಕ್ಷಕರನ್ನು ಕೊರೊನಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಕೊರೊನಾ ಸೋಂಕಿತರ ಸಂಪರ್ಕಿತರ ವಿವರ, ಚೆಕ್ ಪೋಸ್ಟ್ ಡ್ಯೂಟಿ, ಡೇಟಾ ಎಂಟ್ರಿ ವರ್ಕ್ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ತಬ್ದವಾಗಿದೆ. ಸಾರಿಗೆ ವ್ಯವಸ್ಥೆಯಿಲ್ಲದೇ ಶಾಲೆಗಳಿಗೆ ತೆರಳುವುದು ಕಷ್ಟ. ಇನ್ನೊಂದೆಡೆ ಅಂತರ್ ಜಿಲ್ಲಾ ನಿರ್ಬಂಧವೂ ತೆರವಾಗಿಲ್ಲ. 50 ವರ್ಷ ಮೀರಿದವರು, ಮಹಿಳೆಯರು, ಗರ್ಭಿಣಿ ಸ್ತ್ರೀಯರು ಸಾರಿಗೆ ಸೌಲಭ್ಯಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಕೊರೊನಾ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರಿಗೆ ಮಾತ್ರವೇ ಕೊರೊನಾ ಲಸಿಕೆ ನೀಡಲಾಗಿದೆ. 18ರಿಂದ 45ರ ವಯೋಮಾನದ ಇತರ ಶಿಕ್ಷಕರಿಗೆ ಲಸಿಕೆಯನ್ನು ನೀಡಿಲ್ಲ. ಅಷ್ಟೆ ಅಲ್ಲಾ ಲಕ್ಷಾಂತರ ಸಂಖ್ಯೆಯಲ್ಲಿರುವ ಶಿಕ್ಷಕರು ಶಾಲೆಗಳಿಗೆ ಹಾಜರಾದ್ರೆ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿವೆ.
ರಾಜ್ಯದಲ್ಲಿ ಲಾಕ್ ಡೌನ್ ಆದೇಶವನ್ನು ಸಂಪೂರ್ಣವಾಗಿ ತೆರವು ಮಾಡಿ, ಸಾರ್ವಜನಿಕವಾಗಿ ಬಸ್ ಸಂಚಾರ ಆರಂಭವಾಗುವವರೆಗೆ ಶಿಕ್ಷಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಮಕ್ಕಳು ಶಾಲೆಗೆ ಬರುತ್ತಿಲ್ಲ, ಕೇವಲ ಶಾಲೆಗೆ ಹೋಗಿ ಕುಳಿತು ಬರುವ ಕಾರ್ಯವನ್ನು ಶಿಕ್ಷಕರಿಂದ ಮಾಡಿಸುವ ಬದಲು ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಅಗತ್ಯ ; ಉಸ್ತುವಾರಿ ಸಚಿವರ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ