ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಿರುವುದರಿಂದ ಕನಿಷ್ಠ ಇನ್ನೊಂದು ವಾರ ಲಾಕ್ ಡೌನ್ ಮುಂದುವರಿಸಿ ಎಂದು ಉಪಮುಖ್ಯಮಂತ್ರಿಗಳೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೋವಿಂದ್ ಕಾರಜೋಳ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ನಡೆಸುವ ವೇಳೆ ಅವರು ಈ ಮನವಿ ಮಾಡಿದರು. ಬೆಳಗಾವಿ ಜಿಲ್ಲೆಯ 6 ತಾಲೂಕುಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ತುಂಬಾ ಹೆಚ್ಚಿದೆ. ಕೊನೆಯ ಪಕ್ಷ ಈ 6 ತಾಲೂಕುಗಳಲ್ಲಾದರೂ ಲಾಕ್ ಡೌನ್ ಮುಂದುವರಿಸಬೇಕು ಎಂದು ಕೋರಿದರು.
ಬೆಳಗಾವಿ ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಪಾಸಿಟಿವಿಟಿ ದರ ಶೇ.9 ರ ಆಸುಪಾಸಿನಲ್ಲಿ ಇರುವುದರಿಂದ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿಯೊಂದಿಗೆ ಲಾಕಡೌನ್ ಇನ್ನೊಂದು ವಾರ ಕಾಲ ವಿಸ್ತರಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಮನವಿ ಮಾಡಿಕೊಂಡರು.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಬೆಳಗಾವಿಯೂ ಸೇರಿದಂತೆ ಎಂಟು ಜಿಲ್ಲೆಗಳ ಜಿಲ್ಲಾಡಳತಗಳೊಂದಿಗೆ ಗುರುವಾರ (ಜೂ.10) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಆಟೋಮೊಬೈಲ್, ಕಟ್ಟಡ ನಿರ್ಮಾಣದಂತಹ ಪ್ರಮುಖ ಚಟುವಟಿಕೆಗಳಿಗೆ ಅವಕಾಶ ನೀಡುವ ಮೂಲಕ ಇನ್ನೊಂದು ವಾರ ಲಾಕಡೌನ್ ಮುಂದುವರಿಸಬೇಕು.
ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕಿನಿಂದ ನಡೆದಿದೆ. ಜಿಲ್ಲಾ ಮಟ್ಟದಲ್ಲಿ ರೇಷನ್ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಮಕ್ಕಳ ಆಸ್ಪತ್ರೆಯನ್ನು ಕೂಡ ಸಜ್ಜುಗೊಳಿಸಲಾಗುತ್ತಿದೆ ಎಂದು ಸಚಿವ ಕಾರಜೋಳ ವಿವರಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 135 ತಂಡಗಳನ್ನು ರಚಿಸಿಕೊಂಡು ಇದುವರೆಗೆ 1300 ಕ್ಕೂ ಗ್ರಾಮಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ್ಯಾಟ್) ಮಾಡಲಾಗಿದ್ದು, ಇತರೆ ಪರೀಕ್ಷೆ ಸೇರಿದಂತೆ ಒಟ್ಟಾರೆ ಪಾಸಿಟಿವಿಟಿ ದರ ಶೇ. 8.9 ರಷ್ಟಿದೆ.
ಗಡಿ ಭಾಗದ ದೊಡ್ಡ ಜಿಲ್ಲೆಯಾಗಿರುವುದರಿಂದ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಇನ್ನೂ ಒಂದು ವಾರ ಲಾಕಡೌನ್ ಮಾಡಿದರೆ ಮಾತ್ರ ಅನುಕೂಲವಾಗಲಿದೆ. ಆದ್ದರಿಂದ ಲಾಕಡೌನ್ ಮುಂದುವರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆಗೆ ಪ್ರಯತ್ನಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ….
ಜಿಲ್ಲೆಯಲ್ಲಿ ಐದು ತಾಲ್ಲೂಕು 5 ಕ್ಕಿಂತ ಕಡಿಮೆ ಇದೆ.
ಇನ್ನುಳಿದ ತಾಲ್ಲೂಕುಗಳಲ್ಲಿ ಶೇ.10 ಹಾಗೂ ಅದಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ.
ಇನ್ನೊಂದು ವಾರ ಅವಕಾಶ ಸಿಕ್ಕರೆ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಗೊಳಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ರ್ಯಾಟ್ ನಲ್ಲಿ ಪಾಸಿಟಿವಿಟಿ ದರ ಶೇ.4 ಕ್ಕಿಂತ ಕಡಿಮೆಯಿದೆ. ಆದರೆ ಆರ್.ಟಿ.-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿ ಕಂಡುಬಂದಿದೆ.
ಇನ್ನೊಂದು ವಾರ ಕಾಲಾವಕಾಶ ಸಿಕ್ಕರೆ ಪಾಸಿಟಿವಿಟಿ ದರ ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದರು.
ಆದರೆ ಇದಕ್ಕೆ ಒಪ್ಪದ ಸಿಎಂ ಯಡಿಯೂರಪ್ಪ, ಲಾಕ್ ಡೌನ್ ಎಷ್ಟು ದಿನ ಮುಂದುವರಿಸುವುದು. ಹೀಗೆ ಮುಂದುವರಿಸುತ್ತ ಹೋದರೆ ಆರ್ಥಿಕ ಪರಿಸ್ಥಿತಿ, ಜನಸಾಮಾನ್ಯರ ಪರಿಸ್ಥಿತಿ ಏನಾಗಲಿದೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಕೆಲವು ತಾಲೂಕುಗಳಲ್ಲಿ ಲಾಕ್ ಡೌನ್ ಮುಂದುವರಿಸಿ, ಕೆಲವು ತಾಲೂಕುಗಳಲ್ಲಿ ಅನ್ ಲಾಕ್ ಮಾಡಿದರೆ ಎಲ್ಲ ಕಡೆ ಹರಡುವುದಿಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಇಂದು ಸಂಜೆ ಇನ್ನೆರಡು ಮೀಟಿಂಗ್ ನಡೆಸಲಿರುವ ಸಿಎಂ ರಾತ್ರಿಯ ಹೊತ್ತಿಗೆ ನಿರ್ಧಾರ ತೆಗೆದುಕೊಳ್ಳಬಹುದು.