ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಆಗಮಿಸಿ ಅಸಮಾಧಾನಿತ ಶಾಸಕರ ಅಹವಾಲು ಆಲಿಸುತ್ತಿರುವುದು ಮೊದಲೇ ತೀರ್ಪು ಕೊಟ್ಟು ನಂತರ ವಿಚಾರಣೆ ನಡೆಸಿದಂತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಲವು ಶಾಸಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಅರುಣ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ. ನಿನ್ನೆ ಸಚಿವರ ಸಭೆ ನಡೆಸಿರುವ ಅವರು ಇಂದು ಶಾಸಕರ ಅಭಿಪ್ರಾಯ ಆಲಿಸುತ್ತಿದ್ದಾರೆ.
30ಕ್ಕೂ ಹೆಚ್ಚು ಶಾಸಕರು ವಯಕ್ತಿಕ ಭೇಟಿಯಾಗಿದೆ ಅರುಣ ಸಿಂಗ್ ಬಳಿ ತಮ್ಮ ಅಹವಾಲು ಹೇಳುತ್ತಿದ್ದಾರೆ. ಯಡಿಯೂರಪ್ಪ ಪರ, ಯಡಿಯೂರಪ್ಪ ವಿರೋಧ ಎಂದು ಗುಂಪುಗಳಾಗಿವೆ. ಆದರೆ ಅರುಣ ಸಿಂಗ್ ಈಗಾಗಲೆ ತಮ್ಮ ತೀರ್ಪನ್ನು ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆ ಇಲ್ಲ, ಅವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕಳೆದ ವಾರವೇ ನವದೆಹಲಿಯಲ್ಲಿ ಹೇಳಿಕೆ ನೀಡಿರುವ ಅರುಣ ಸಿಂಗ್ ಈಗ ಬೆಂಗಳೂರಿಗೆ ಬಂದು ಸಚಿವರು, ಶಾಸಕ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಮೊದಲೇ ತೀರ್ಪು ನೀಡಿ ನಂತರ ವಿಚಾರಣೆ ನಡೆಸುವಂತಿದೆ.
ಹಾಗಾಗಿ ಅರುಣ ಸಿಂಗ್ ಬಂದಿರುವುದು ಕೇವಲ ಶಾಸಕರನ್ನು ಸಮಾಧಾನಪಡಿಸಿ ಹೊಗಲಿಕ್ಕೇ ಹೊರತು ಬದಲಾವಣೆ ಮಾಡುವುದಕ್ಕಲ್ಲ ಎನ್ನುವುದು ಸ್ಪಷ್ಟ.
ಇದೇ ವೇಳೆ, ಯಡಿಯೂರಪ್ಪ ವಿರುದ್ಧ ಕೆಲವರು ಬಹಿರಂಗವಾಗಿ ಮಾತನಾಡುತ್ತಿದ್ದರೂ ಸುಮ್ಮನಿರುವ ಹೈಕಮಾಂಡ್ ನೀತಿ, ನೀವು ಅತ್ತ ಹಾಗೆ ಮಾಡಿ ನಾವು ಹೊಡೆದ ಹಾಗೆ ಮಾಡುತ್ತೇವೆ ಎಂದು ಹೇಳಿರುವಂತಿದೆ. ಹೈಕಮಾಂಡ್ ಪರೋಕ್ಷ ಬೆಂಬಲವಿಲ್ಲದಿದ್ದರೆ ಬಸನಗೌಡ ಪಾಟೀಲ ಯತ್ನಾಳ್, ಎಚ್.ವಿಶ್ವನಾಥ, ಸಿ.ಪಿ.ಯೋಗೀಶ್ವರ, ಅರವಿಂದ ಬೆಲ್ಲದ ಮೊದಲಾದವರು ನಿರಂತರವಾಗಿ ಯಡಿಯೂರಪ್ಪ ವಿರುದ್ಧ ಮಾತನಾಡುವ ಧೈರ್ಯ ತೋರಿಸುತ್ತಿರಲಿಲ್ಲ.
ಏನೇ ಆದರೂ ಬಿಜೆಪಿಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರದಿಂದ ಪ್ರತಿನಿಧಿ ಬಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡಿ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಅಹವಾಲು ಆಲಿಸುತ್ತಿರುವ ಘಟನೆ ನಡೆಯುತ್ತಿದೆ.
ಅರುಣ ಸಿಂಗ್ ಭೇಟಿಗೆ ಅವಕಾಶ ಕೇಳಿದ 28ರಲ್ಲಿ ಬೆಳಗಾವಿಯ 6 ಶಾಸಕರು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ