Kannada NewsKarnataka NewsLatest

150 ಹಳ್ಳಿಗಳ ಸೀಲ್ ಡೌನ್ ಕೊರೋನಾ ನಿಯಂತ್ರಣಕ್ಕೆ ಕಾರಣ: ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಡಿಸಿ ಮಾಹಿತಿ

ಬಳ್ಳಾರಿ ನಾಲಾ; 800 ಕೋಟಿ ವೆಚ್ಚದ ಶಾಶ್ವತ ಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಂಭವನೀಯ ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ವರದಿಗಳಿವೆ. ಆದ್ದರಿಂದ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಮುಂಗಾರು ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ (ಜೂ.22) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ಕಾರ್ಯನಿರ್ವಹಣೆಯ ಕುರಿತು ಮಾಹಿತಿಯನ್ನು ಪಡೆದುಕೊಂಡ ಅವರು, ಮೂರನೇ ಅಲೆ ಮಕ್ಕಳಿಗೆ ಬರುವ ಸಂಭವನೀಯತೆ ಇದೆ ಎಂಬ ಅಭಿಪ್ರಾಯವಿದೆ. ಈ ಬಗ್ಗೆ ಖಚಿತತೆ ಇರುವುದಿಲ್ಲ; ಆದಾಗ್ಯೂ ಮಕ್ಕಳ ಚಿಕಿತ್ಸೆಗೆ ಬೇಕಾಗಿರುವ ಔಷಧಿ, ವೈದ್ಯಕೀಯ ಉಪಕರಣಗಳು ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಮಕ್ಕಳ ವೈದ್ಯರು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಮಕ್ಕಳ ತಜ್ಞರನ್ನು ನೇಮಕಾತಿ ಮಾಡಿಕೊಳ್ಳಬೇಕು.
ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರ ಸೇವೆ ಪಡೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಯಾವುದೇ ಔಷಧಿಗಳ ಕೊರತೆ ಉಂಟಾಗಬಾರದು. ಅಗತ್ಯ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಬೇಕು.
ಔಷಧಿ ಸೇರಿದಂತೆ ಏನೇ ಕೊರತೆ ಇದ್ದರೆ ಮುಂಚಿತವಾಗಿಯೇ ತಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಮರಣ ಪ್ರಮಾಣ ಶೇ.3 ರಷ್ಟಿರುವುದು ಕಳವಳಕಾರಿಯಾಗಿದೆ. ಆದ್ದರಿಂದ ಈ ಪ್ರಮಾಣವನ್ನು ಕಡಿಮೆಗೊಳಿಸಲು ಪ್ರಯತ್ನಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ನಿರ್ವಹಣೆ- ವೈದ್ಯರು, ಅಧಿಕಾರಿಗಳ ಬಗ್ಗೆ ಮೆಚ್ಚುಗೆ:
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉತ್ತಮ ಕೆಲಸ ಮಾಡಿರುವ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ತಂಡದವರಿಗೆ ಸಚಿವ ಗೋವಿಂದ ಕಾರಜೋಳ ಅವರು ಕೃತಜ್ಞತೆಯನ್ನು ತಿಳಿಸಿದರು.
ಬಿಮ್ಸ್ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗೆ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್ ಆಡಳಿತ ಉಸ್ತುವಾರಿಯಾಗಿರುವ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಮ್ಸ್- ಸ್ವಚ್ಛತೆ, ಗುಣಮಟ್ಟದ ಆಹಾರಕ್ಕೆ ಆದ್ಯತೆ:
ಈ ಸಂದರ್ಭದಲ್ಲಿ ‌ಮಾತನಾಡಿದ ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್ ಆಡಳಿತ ಉಸ್ತುವಾರಿಯಾಗಿರುವ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು,  ಸ್ವಚ್ಛತೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳಿದ್ದವು. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ವಿವರಿಸಿದರು.
ಅಗತ್ಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಅದೇ ರೀತಿ ಊಟೋಪಹಾರ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ಮಾಡಬೇಕಿದೆ. ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ.
ಬಿಮ್ಸ್ ಆವರಣದಲ್ಲಿ ಸಿಲಿಂಡರ್ ಗಳಿಗೆ ಆಕ್ಸಿಜನ್ ಮರುಪೂರಣ ಘಟಕ ಸ್ಥಾಪಿಸುವ ಅಗತ್ಯವಿದೆ. ಇದರಿಂದ ತುರ್ತು ಚಿಕಿತ್ಸಾ ಘಟಕದ ಸಾಮಾನ್ಯ ವಾರ್ಡುಗಳಲ್ಲಿ ಇರುವ ರೋಗಿಗಳಿಗೆ ಕೂಡ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಸಬಹುದು ಎಂದು ಬಿಸ್ವಾಸ್ ವಿವರಿಸಿದರು.
ಆಕ್ಸಿಜನ್ ಮರುಪೂರಣ ಘಟಕ ಸ್ಥಾಪನೆಗೆ ಕೂಡಲೇ ಅಗತ್ಯ ಮಂಜೂರಾತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಕಾರಜೋಳ ಅವರು ತಿಳಿಸಿದರು.
ಬಳ್ಳಾರಿ ನಾಲಾ; 800 ಕೋಟಿ ವೆಚ್ಚದ ಶಾಶ್ವತ ಯೋಜನೆ:
ಬಳ್ಳಾರಿ ನಾಲಾ ಸುಧಾರಣೆಗೆ ಸಂಬಂಧಿಸಿದಂತೆ 800 ಕೋಟಿ ರೂಪಾಯಿ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಕಳಿಸಲಾಗಿದೆ.
ಮುಂದಿನ ಬಜೆಟ್ ನಲ್ಲಿ ಇದಕ್ಕೆ ಅನುಮೋದನೆ ಪಡೆದು ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಸಚಿವ ಕಾರಜೋಳ ತಿಳಿಸಿದರು.
ಸಂಸದರಾದ ಮಂಗಲಾ ಸುರೇಶ್ ಅಂಗಡಿ, ಬಳ್ಳಾರಿ ನಾಲಾ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂದು ಹೇಳಿದರು.
800 ಕೋಟಿ ರೂಪಾಯಿ ಡಿಪಿಆರ್ ರೂಪಿಸಿ ಸರಕಾರದ ಅನುಮೋದನೆಗೆ ಕಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಒಂದು ಲಕ್ಷ ಲಸಿಕೆ ದಾಖಲೆ- ಜಿಲ್ಲಾಧಿಕಾರಿ ಹಿರೇಮಠ:
ಸಾಕಷ್ಟು ಪೂರ್ವ ಸಿದ್ಧತೆಯ ಪರಿಣಾಮವಾಗಿ ಒಂದೇ ದಿನ ಒಂದು ಲಕ್ಷಕ್ಕೂ ಅಧಿಕ ಲಸಿಕೆಗಳನ್ನು ನೀಡುವ ಮೂಲಕ ಲಸಿಕಾಕರಣದಲ್ಲಿ ದಾಖಲೆ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಸಿಕೆ ಪೂರೈಕೆಯಾದರೆ ಇದೇ ರೀತಿ ಲಸಿಕೆ ಅಭಿಯಾನ ಮುಂದುವರಿಸಲಾಗುವುದು ಎಂದರು.
ಎರಡನೇ ಅಲೆಯಲ್ಲಿ ಅನೇಕ ಜನರು ತಡವಾಗಿ ಆಸ್ಪತ್ರೆಗೆ ದಾಖಲಾಗಿರುವುದು ಹಾಗೂ ಬ್ಲ್ಯಾಕ್ ಫಂಗಸ್ ನಿಂದಾಗಿ ಮರಣ ಪ್ರಮಾಣ ಸ್ವಲ್ಪಮಟ್ಟಿಗೆ ಜಾಸ್ತಿಯಾಗಲು ಕಾರಣವಾಗಿದೆ ಎಂದು ವಿವರಿಸಿದರು.
ಐದಕ್ಕಿಂತ ಹೆಚ್ಚು ಸೋಂಕುಗಳು ಕಂಡುಬಂದ ಜಿಲ್ಲೆಯ 150 ಹಳ್ಳಿಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ ಪರಿಣಾಮ ಸೋಂಕು ನಿಯಂತ್ರಣ ಸಾಧ್ಯವಾಯಿತು.
ಮುಂಬರುವ ದಿನಗಳಲ್ಲಿ ಕೂಡ ಕೋವಿಡ ಪರೀಕ್ಷೆ  ಹೆಚ್ಚಿಸಲಾಗುವುದು ಎಂದು ಹೇಳಿದರು.
ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ವಿವರಿಸಿದರು.
ಜಿಲ್ಲೆಯಲ್ಲಿ 2658 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ.3.77 ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟಾರೆ 567 ಆಕ್ಸಿಜನ್ ಬೆಡ್ ಗಳಿವೆ. ಲಸಿಕಾಕರಣ ಲಸಿಕೆ ಮೇಳದಲ್ಲಿ ಒಂದೇ ದಿನ ಒಂದು ಲಕ್ಷ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಸಭೆಯಲ್ಲಿ ವಿವರಿಸಿದರು.
ಮೂರನೇ ಅಲೆ ಮಕ್ಕಳಿಗೆ ಬಾಧಿಸುವ ಬಗ್ಗೆ ಖಚಿತ ಕಾರಣಗಳು ಇದುವರೆಗೆ ತಿಳಿದುಬಂದಿಲ್ಲ ಎಂದು ಬಿಮ್ಸ್ ನಿರ್ದೇಶಕ ಡಾ.ಕುಲಕರ್ಣಿ ತಿಳಿಸಿದರು.
ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ 268 ಮಕ್ಕಳ ಚಿಕಿತ್ಸೆಗೆ ಹಾಸಿಗೆಗಳು ಲಭ್ಯವಿವೆ. ಇದಲ್ಲದೇ ಬಿಮ್ಸ್ ನಲ್ಲಿ ಮಕ್ಕಳ ತುರ್ತು ನಿಗಾ ಘಟಕ‌ ಕೂಡ ಆರಂಭಿಸಲಾಗಿದೆ ಎಂದು ಆರ್.ಸಿ.ಎಚ್. ಡಾ.ಐ.ಪಿ.ಗಡಾದ ತಿಳಿಸಿದರು.
ಜಿಲ್ಲೆಯಲ್ಲಿ ಬೀಜ-ಗೊಬ್ಬರ ಕೊರತೆ ಇಲ್ಲ:
42 ಸಾವಿರ ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದೆ. 11 ಸಾವಿರ ಕ್ವಿಂಟಲ್ ದಾಸ್ತಾನು ಇದೆ. ಬಿತ್ತನೆ ಬೀಜ ಹಾಗೂ ಗೊಬ್ಬರ ಕೊರತೆಯಿಲ್ಲ. ಇತ್ತೀಚಿನ ಮಳೆಯಿಂದ ಬಳ್ಳಾರಿ‌ ನಾಲಾದ ಎರಡೂ ಬದಿಯಲ್ಲಿ ಭತ್ತದ ಬೆಳೆ ಸ್ವಲ್ಪಮಟ್ಟಿಗೆ ನಾಶವಾಗಿದೆ. ನೀರು ಕಡಿಮೆಯಾದ ಬಳಿಕ ಜಂಟಿ‌ ಸಮೀಕ್ಷೆ ಮಾಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
ಜೂನ್ ಮಾಹೆಯಲ್ಲಿಯೇ ಆಲಮಟ್ಟಿ ಜಲಾಶಯ ಶೇ.80 ರಷ್ಟು ಭರ್ತಿಯಾಗುವ ಸಾಧ್ಯತೆಗಳಿವೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಸಿ.ಡಿ.ಪಾಟೀಲ ತಿಳಿಸಿದರು.
ಶಾಸಕ ಅನಿಲ್ ಬೆನಕೆ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಮತ್ತಿತರರು ಉಪಸ್ಥಿತರಿದ್ದರು.

  ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹ

 
ಏತ ನೀರಾವರಿ, ವಿದ್ಯುತ್ ಉತ್ಪಾದನೆಗೆ ನೀರು‌ ಬಿಡುಗಡೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆದೇಶ
  ಇತ್ತೀಚೆಗೆ ಸುರಿದ ಮಳೆಯಿಂದ ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳಲ್ಲಿ ಸದ್ಯಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಂಗ್ರಹವಾಗುತ್ತಿರುವುದರಿಂದ ಹೆಚ್ಚುವರಿ ನೀರನ್ನು ಏತ ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಂಗಾರು ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ (ಜೂ.22) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ನೀರನ್ನು ಮುಳವಾಡ, ರಾಂಪೂರ ಮತ್ತಿತರ ಏತ ನೀರಾವರಿ ಯೋಜನೆಗಳಿಗೆ ಬಿಡುಗಡೆಗೊಳಿಸಬೇಕು.
ಅದೇ ರೀತಿ ಕುಡಿಯುವ ನೀರು ಅಗತ್ಯವಿದ್ದರೆ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದರು.
ಮಳೆಗಾಲದ ಆರಂಭದಲ್ಲಿ ಸಂಗ್ರಹವಾಗಿರುವ ನೀರು ಮುಂದಿನ ದಿನಗಳಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿಸುವ ಬದಲು ವಿದ್ಯುತ್ ಉತ್ಪಾದನೆಯನ್ನು ಕೂಡ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿರೀಕ್ಷೆಗಿಂತ ಮುಂಚೆಯೇ ಜಲಾಶಯಗಳಲ್ಲಿ ಹೆಚ್ಚಿನ‌ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಈ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜೂನ್ ಮಾಹೆಯಲ್ಲಿಯೇ ಆಲಮಟ್ಟಿ ಜಲಾಶಯ ಶೇ.80 ರಷ್ಟು ಭರ್ತಿಯಾಗುವ ಸಾಧ್ಯತೆಗಳಿವೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಸಿ.ಡಿ.ಪಾಟೀಲ ತಿಳಿಸಿದರು.
ಸಂಸದರಾದ ಮಂಗಲಾ ಸುರೇಶ್ ಅಂಗಡಿ, ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button