ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ -ಮಹಾರಾಷ್ಟ್ರ ರಾಜ್ಯಗಳು ನಾಲ್ಕು ಟಿಎಂಸಿ ಕುಡಿಯುವ ನೀರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾತ್ವಿಕವಾಗಿ ಒಪ್ಪಿಗೆ ನೀಡಿವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಮುಂಗಾರು ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ನೀರಾವರಿ ಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ಮಹಾರಾಷ್ಟ್ರ ರಾಜ್ಯದಿಂದ 4 ಟಿಎಂಸಿ ನೀರನ್ನು ಕೊಯ್ನಾ ಜಲಾಶಯದಿಂದ ಬಿಡುಗಡೆ ಮಾಡಲಾಗುವುದು. ಅದಕ್ಕೆ ಪ್ರತಿಯಾಗಿ ಕರ್ನಾಟದ ಆಲಮಟ್ಟಿ ಹಿನ್ನೀರಿನಿಂದ ಗಡಿಭಾಗದ ಜತ್ತ ತಾಲ್ಲೂಕಿನ ಸುಮಾರು 40 ಹಳ್ಳಿಗಳಿಗೆ 4 ಟಿಎಂಸಿ ನೀರನ್ನು ನೀಡುವ ನಿರ್ಣಯ ಮಾಡಲಾಗಿದೆ.
ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಚಿಕ್ಕೋಡಿಯಲ್ಲಿ ಪ್ರವಾಹ ನಿರ್ವಹಣೆಗೆ ಸಕಲ ವ್ಯವಸ್ಥೆ :
ಚಿಕ್ಕೋಡಿಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಆಗುವ ಹಾನಿ ತಡೆಗಟ್ಟಲು, ಜನ ಹಾಗೂ ಜಾನುವಾರುಗಳಿಗೆ ನೆರವಾಗಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಚಿಕ್ಕೋಡಿಯಲ್ಲಿ 168 ಕಾಳಜಿ ಕೇಂದ್ರಗಳನ್ನು ಅವಶ್ಯಕತೆ ಗೆ ಅನುಗುಣವಾಗಿ ತೆರೆಯಲಾಗುವುದು. ಅದೇ ರೀತಿ, 168 ಜಾನುವಾರುಗಳ ರಕ್ಷಣಾ ಕೇಂದ್ರಗಳನ್ನು ತೆರೆಯಲಾಗುವುದು. ಮೇವು, ಲಸಿಕೆ, ಕುಡಿಯುವ ನೀರು ಇನ್ನಿತರ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಪ್ರವಾಹದ ಸಮಯದಲ್ಲಿ ಜನ ಹಾಗೂ ಜಾನುವಾರುಗಳ ರಕ್ಷಣೆ ಮಾಡಲು 27 ಬೋಟ್ ಗಳ ವ್ಯವಸ್ಥೆ ಮಾಡಲಾಗಿದ್ದು, ಅವುಗಳಲ್ಲಿ 23 ಬೋಟ್ ಗಳನ್ನು ಜಿಲ್ಲಾಡಳಿತದ ವತಿಯಿಂದ ಮತ್ತು 4 ಬೋಟ್ ಗಳನ್ನು ಎನ್.ಡಿ.ಆರ್.ಎಫ್ ತಂಡದಿಂದ ವ್ಯವಸ್ಥೆ ಮಾಡಲಾಗಿದೆ.
ಬೋಟ್ ಗಳ ಆಪರೇಟರ್ ಗಳನ್ನು 3 ರಿಂದ 4 ತಿಂಗಳುಗಳ ಮಟ್ಟಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಪ್ರವಾಹದ ಸಮಯದಲ್ಲಿ ಬೇಕಾಗುವ ಔಷಧಿಗಳ ವ್ಯವಸ್ಥೆ ಮಾಡಲಾಗುವುದು.ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಇನ್ನಿತರ ಅವಶ್ಯಕ ಸಿಬ್ಬಂದಿಯ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಸಂಭವನೀಯ 3ನೇ ಅಲೆಯಲ್ಲಿ ಮಕ್ಕಳ ರಕ್ಷಣೆಗೆ ಎಲ್ಲ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ