ಕಡಲ ಕೊರೆತ 1000 ಕೋಟಿ ರೂ. ಗೆ ಕೇಂದ್ರಕ್ಕೆ ಪ್ರಸ್ತಾವನೆ
ಪ್ರಗತಿವಾಹಿನಿ ಸುದ್ದಿ, ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸಂಭüವಿಸಿರುವ ಸಮುದ್ರ ಕೊರೆತಕ್ಕೆ 1000 ಕೋಟಿ ರೂ. ವಿಶೇಷ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ತೌಖ್ತೆ ಚಂಡಮಾರುತ ಹಾಗೂ ಪ್ರಾಕೃತಿಕ ವಿಕೋಪದಿಂದ 9115 ಮೀ. ಉದ್ದದ ಸಮುದ್ರ ಕೊರೆತ ಸಂಭವಿಸಿ ಅಂದಾಜು 990 ಕೋಟಿ ರೂ. ಗಿಂತ ಹೆಚ್ಚು ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ ಸಮುದ್ರ ಕೊರೆತೆ ತಡೆಯಲು ಶಾಶ್ವತ ಪರಿಹಾರವಾಗಿ 1000 ಕೋಟಿ ರೂ. ಗಳನ್ನು ವಿಶೇಷ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ತಡೆಗೆ ಪೂರ್ಣ ಪ್ರಮಾಣದ ಒಂದು ಎಸ್.ಡಿ.ಆರ್.ಎಫ್ ತಂಡವನ್ನು ಜಿಲ್ಲೆಗೆ ಮಂಜೂರು ಮಾಡಲಾಗುವುದು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಹಾನಿಯಾದವರಿಗೆ ಗರಿಷ್ಠ 2 ದಿನದಲ್ಲಿ ಪರಿಹಾರ ವಿತರಿಸಬೇಕು ಹಾಗೂ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.
ಕೋವಿಡ್ 3 ನೇ ಅಲೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ 2.40 ಲಕ್ಷ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ಕಾರ್ಯಕ್ರಮ ವಾತ್ಸಲ್ಯ ಆಗಸ್ಟ್ 15 ರೊಳಗೆ ಸಂಪೂರ್ಣಗೊಳಿಸಬೇಕು. ಪ್ರತೀ ಗ್ರಾಮದ ಮಕ್ಕಳನ್ನು ಆರೋಗ್ಯ ತಪಾಸಣೆಗೊಳಪಡಿಸಿ, ಅಪೌಷ್ಠಿಕತೆ ಇರುವ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳು, ಉಚಿತ ಔಷಧಿ ವಿತರಿಸಬೇಕು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದಿದ್ದಲ್ಲಿ ಆ ಮಕ್ಕಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ವಾತ್ಸಲ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯವಿದೆ ಎಂದು ಗುರುತಿಸಲ್ಪಡುವ ಎಲ್ಲಾ ಮಕ್ಕಳಿಗೂ ಎಪಿಲ್, ಬಿಪಿಎಲ್ ಭೇಧವಿಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರಕಲು ಅನುಕೂಲವಾಗುವಂತೆ ಆಯುಷ್ಮಾನ್ ಯೋಜನೆಗೆ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಸಚಿವ ಬೊಮ್ಮಾಯಿ ಹೇಳಿದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಶಿಕ್ಷಕರಿಗೂ ಕೋವಿಡ್ ಲಸಿಕೆ ನೀಡುವಂತೆ ಸೂಚನೆ ನೀಡಿದರು.
ಜಿಲ್ಲೆಗೆ ಪ್ರತಿದಿನ 10,000 ಕೋವಿಡ್ ಲಸಿಕೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ ದೊರೆಯುವ ಲಸಿಕೆಯನ್ನು ಅದೇ ದಿನ ಬಳಸಬೇಕು. ಆ ಮೂಲಕ ಜಿಲ್ಲೆಯಲ್ಲಿ ತಿಂಗಳಿಗೆ 2.5 ಲಕ್ಷ ಲಸಿಕೆ ನೀಡಿ, 4 ತಿಂಗಳ ಅವಧಿಯಲ್ಲಿ ಇಡೀ ಜಿಲ್ಲೆಯಲ್ಲಿ ಲಸಿಕೆ ನೀಡುವ ಪ್ರಮಾಣದ ಸಂಪೂರ್ಣ ಗುರಿ ಸಾಧಿಸಬೇಕು. ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಯಾವುದೇ ಗೊಂದಲಗಳಾಗದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಜುಲೈ ಅಂತ್ಯದೊಳಗೆ ಲಸಿಕೆ ನೀಡುವಂತೆ ಸೂಚಿಸಿದರು.
ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ನಡೆಸಲು ಸಾಧ್ಯವಿಲ್ಲವೆಂದು ಖಾಸಗಿಯವರು ಪತ್ರ ಬರೆದಿದ್ದು, ಈ ಆಸ್ಪತ್ರೆಯನ್ನು ಸರ್ಕಾರವೇ ನಡೆಸುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಈಗಾಗಲೇ ಈ ಆಸ್ಪತ್ರೆಯಲ್ಲಿ 70 ಬೆಡ್ ಸಾಮರ್ಥ್ಯಕ್ಕೆ ಅಗತ್ಯವಿರುವ ಸಿಬ್ಬಂದಿ ನೇಮಕವಾಗಿದ್ದು, ಕೋವಿಡ್ 3 ನೇ ಅಲೆ ಎದುರಿಸುವಲ್ಲಿ ಜಿಲ್ಲಾಡಳಿತಕ್ಕೆ ಈ ಆಸ್ಪತ್ರೆ ನೆರವಾಗಲಿದೆ ಎಂದರು.
ಕೋವಿಡ್ 2 ನೇ ಅಲೆ ನಿಯಂತ್ರಣದಲ್ಲಿ ಜಿಲ್ಲೆಯ ಎಲ್ಲಾ ವೈದ್ಯರು, ಆರೋಗ್ಯ ಇಲಾಖೆಯ ಸಹಾಯಕ ಸಿಬ್ಬಂದಿಗಳು ಮತ್ತು ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಖಾಸಗಿಯವರೂ ಸಹ ಉತ್ತಮ ಸಹಕಾರ ನೀಡಿದ್ದು, ಆಕ್ಸಿಜನ್ ನಿರ್ವಹಣೆ, ರೆಮಿಡಿಸಿವರ್ ಬಳಕೆ ಎಲ್ಲದರಲ್ಲೂ ಮಾದರಿಯಾಗಿ ಕಾರ್ಯನಿರ್ವಹಿಸಿದ್ದು, ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಬೊಮ್ಮಾಯಿ ಹೇಳಿದರು.
ಜಿಲ್ಲೆಯಲ್ಲಿ ಕೊವಿಡ್ 3 ನೇ ಅಲೆಯನ್ನು ಸಮರ್ಥವಾಗಿ ತಡೆಯುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 50 ಮಕ್ಕಳ ಐ.ಸಿ.ಯು ಬೆಡ್‌ಗಳನ್ನು ವೆಂಟಿಲೇಟರ್ ಸಹಿತ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಆಕ್ಸಿಜನ್ ಜನರೇಟರ್‌ಗಳ ಅಳವಡಿಕೆ ಕಾರ್ಯವನ್ನು ಸಂಪೂರ್ಣಗೊಳಿಸಿ ಅವುಗಳ ಕಾರ್ಯಾರಂಭ ಮಾಡುವುದರ ಮೂಲಕ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ 2.40 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ
ಉಡುಪಿ ಜಿಲ್ಲೆಯಲ್ಲಿ ಕೋವಿಡ್ 3 ನೇ ಅಲೆಯನ್ನು ಎದುರಿಸಲು ಮುಂಜಾಗ್ರತೆಯಾಗಿ “ವಾತ್ಸಲ್ಯ” ಕರ‍್ಯಕ್ರಮದಡಿಯಲ್ಲಿ ಆಗಸ್ಟ್ 15 ರ ಒಳಗೆ ಜಿಲ್ಲೆಯ 2.40 ಲಕ್ಷ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಕಾರ್ಕಳದಲ್ಲಿ “ವಾತ್ಸಲ್ಯ” ಮಕ್ಕಳ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ 3 ನೇ ಅಲೆಯು ಮಕ್ಕಳಿಗೆ ಹೆಚ್ಚಾಗಿ ಹರಡುವ ಸಾಧ್ಯತೆಗಳಿದ್ದು, ಇದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಶಿಬಿರದಲ್ಲಿ ಅಪೌಷ್ಠಿಕತೆಯಿಂದ ಕೂಡಿದ ಮಕ್ಕಳನ್ನು ಗುರುತಿಸಿ, ಪೌಷ್ಠಿಕ ಆಹಾರ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಔಷಧಿಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯ ಅಲ್ಪಾವಧಿಯಲ್ಲಿ 24,000 ಆಕ್ಸಿಜನ್ ಬೆಡ್, ಸುಮಾರು 5,000 ಕ್ಕಿಂತ ಹೆಚ್ಚು ಐ.ಸಿ.ಯು ಬೆಡ್ ಹಾಗೂ 2,000 ಕ್ಕಿಂತ ಹೆಚ್ಚು ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಧಾನಮಂತ್ರಿಗಳ ಸಂಪೂರ್ಣ ಬೆಂಬಲದಿಂದ ಕೋವಿಡ್ ಲಸಿಕೆಗಳು ಸಕಾಲಕ್ಕೆ ದೊರೆತಿದೆ. ಅದೇ ರೀತಿ ಇಡೀ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯನ್ನು ಮಾಡಲಾಗಿದೆ ಎಂದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ವಾತ್ಯಲ್ಯ ಕಾರ್ಯಕ್ರಮದಲ್ಲಿ ತಾಲೂಕಿನ 40,000 ಮಕ್ಕಳನ್ನು ಆರೋಗ್ಯ ತಪಾಸಣೆಗೊಳಪಡಿಸಲಾಗುವುದು. ತಾಲೂಕಿನ 230 ಅಂಗನವಾಡಿಗಳು, 246 ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ನಕಲ್ಸ್ ನಿಗ್ರಹ ಪಡೆಯ ಎಸ್ಪಿ ನಿಖಿಲ್, ಕುಂದಾಪುರ ಸಹಾಯಕ ಕಮೀಷನರ್ ರಾಜು ಕೆ, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಆದ್ಯತೆ
ಹೊರಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶದಿಂದ ತಾಲೂಕು ಕೇಂದ್ರಗಳಿಗೆ ವಿದ್ಯಾಭ್ಯಾಸಕ್ಕಾಗಿ ವಲಸೆ ಬರುವಂತಹ ಹೆಣ್ಣು ಮಕ್ಕಳಿಗೆ ತಂಗಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೂತನವಾದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದ್ದು, ಈ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಕಾರ್ಕಳದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ಮಿತಿ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ 1.99 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಇದರ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅತ್ಯಂತ ಶಿಸ್ತು, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ವಿದ್ಯಾರ್ಜನೆ ಗೈದು ತಮ್ಮ ಭವಿಷ್ಯವನ್ನು ರೂಪಿಸಿ, ಅದರ ಮುಖೇನ ನಾಡಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಮಾದರಿಯಾಗಬೇಕು. ಸಮಾಜ ನಿರ್ಮಾಣದ ಕೇಂದ್ರ ಬಿಂದುವಾದ ಹೆಣ್ಣು ಮಕ್ಕಳಿಗೆ ಸರ್ಕಾರವು ಆಧುನಿಕ ಶಿಕ್ಷಣವನ್ನು ನೀಡಿದ್ದಲ್ಲಿ ಸುಸಜ್ಜಿತ ಹಾಗೂ ಅಕ್ಷರ ಭರಿತ ಜನಾಂಗ ನಿರ್ಮಾಣ ಮಾಡುವಲ್ಲಿ ಯಶ ಸಾಧಿಸಬಹುದು ಎಂದರು.
ರಾಜ್ಯ ಸರ್ಕಾರದ ಸಚೇತಕ ಸುನೀಲ್ ಕುಮಾರ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣಗೊಂಡ ಈ ವಸತಿ ಶಾಲೆ ಇನ್ನಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸುವಂತಾಗಲಿ. ಇಲ್ಲಿ ಕಲಿಯುವಂತಹ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರುವಂತಹ ಒಳ್ಳೆಯ ವಾತಾವರಣ ನಿರ್ಮಾಣವಾಗಲೀ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾವಾರು ಕೊರೋನಾ ಇಂದಿನ ಸಮಗ್ರ ವರದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ