Kannada NewsLatest

ಪ್ರವಾಹ ತುರ್ತು ಪರಿಸ್ಥಿತಿ: ಮುನ್ನೆಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜುಲೈ 9 ರಿಂದ ಜುಲೈ 15 ರವರೆಗೆ ಪ್ರಕೃತಿ ವಿಕೋಪದ ಘಟನೆಗಳು ಉಂಟಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆ ಕುರಿತಂತೆ ಜನರಿಗೆ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ತಗ್ಗು ಪ್ರದೇಶ, ನದಿ ತೀರದಲ್ಲಿ ಹಾಗೂ ಕಾಲುವೆಗಳ ಸಮೀಪ ವಾಸಿಸುವ ಹಳ್ಳಿಯ ಜನರಿಗೆ ಪ್ರವಾಹದ ಕುರಿತು ಎಚ್ಚರಿಕೆ ನೀಡಬೇಕು.

ಮುಂಜಾಗ್ರತಾ ಕ್ರಮವಾಗಿ ಇಂತಹ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕು. ಮೀನುಗಾರಿಕೆಗೆ ನದಿಗಳಿಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಿಯಂತ್ರಣ ಕೊಠಡಿಗಳ ಸ್ಥಾಪನೆ:

24/7 ಕಾರ್ಯನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ಸ್ಥಾಪಿಸಬೇಕು.ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ತುರ್ತು ಪರಿಸ್ಥಿತಿ ನಿಯಂತ್ರಣ ಕೊಠಡಿ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಬೇಕು.

ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಈಗಾಗಲೇ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ರಕ್ಷಣಾ ತಂಡಗಳ ನಿಯೋಜನೆ:

ಪ್ರವಾಹದ ಸಮಯದಲ್ಲಿ ಉಂಟಾಗುವ ಜೀವ ಹಾನಿಗಳನ್ನು ತಡೆಯಲು ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ತಂಡಗಳ ನಿಯೋಜನೆ‌ ಮಾಡಲಾಗಿದ್ದು, ಬೋಟ್ ಹಾಗೂ ಲೈಫ್ ಜಾಕೆಟ್ ಸೇರಿದಂತೆ ಇತರ ರಕ್ಷಣಾ ಉಪಕರಣಗಳ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ.

ಪ್ರವಾಹಕ್ಕೆ ತುತ್ತಾಗಿ ನಿರಾಶ್ರಿತರಾದವರಿಗೆ ತಕ್ಷಣವೇ ನೆರವು ನೀಡಲು ತಾತ್ಕಾಲಿಕವಾಗಿ ಗಂಜಿ ಕೇಂದ್ರಗಳನ್ನು ತೆರೆಯಬೇಕು.

ಅಲ್ಲದೇ, ತುರ್ತು ಪರಿಸ್ಥಿತಿಯಲ್ಲಿ ಆಹಾರ ಮತ್ತು ಔಷಧಿಗಳ ಕೊರತೆ ಉಂಟಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕೋವಿಡ್ -19 ಹಾಗೂ ಇತರೆ ಆಸ್ಪತ್ರೆಗಳು ವಿದ್ಯುತ್ ನ ಪರ್ಯಾಯ ಮೂಲದ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಜಿಲ್ಲೆಗೆ ಭಾರಿ ಮಳೆಯ ಮುನ್ಸೂಚನೆ:

ಭಾರತೀಯ ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಜುಲೈ 9 ರಿಂದ ಜುಲೈ 15 ರವರೆಗೆ ಗುಡುಗು ಸಹಿತ ಭಾರಿ ಮಳೆ ಹಾಗೂ ಬಿರುಗಾಳಿಯ ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಪ್ರವಾಹದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button