Kannada NewsLatest

ಮತ್ತೆರಡು ದೇವಸ್ಥಾನಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಿಯ ದರ್ಶನವನ್ನು ಇನ್ನು ತಿಂಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಮತ್ತೆರಡು ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಕೋವಿಡ್ -೧೯ ಡೆಲ್ಟಾ ಪ್ಲಸ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕಾ ದೇವಿ ದೇವಸ್ಥಾನ ಹಾಗೂ ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿ ಗ್ರಾಮದ ಹೊಳೆಮ್ಮ ದೇವಿ ದೇವಸ್ಥಾನದ ಸಾರ್ವಜನಿಕ ದರ್ಶನವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಎಂ. ಜಿ ಹಿರೇಮಠ ಆದೇಶ ಹೊರಡಿಸಿರುತ್ತಾರೆ.

ಕೋವಿಡ್ -೧೯ ಡೆಲ್ಟಾ ಪ್ಲಸ್ ಹರಡುವಿಕೆಯು ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ತೀವ್ರತರವಾಗಿ ಹರಡುತ್ತಿದ್ದು, ಜಿಲ್ಲೆಯ ಹಲವಾರು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮಹಾರಾಷ್ಟ್ರ ರಾಜ್ಯದಿಂದ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಆಗಮಿಸುವ ಸಾಧ್ಯತೆಯಿರುತ್ತದೆ ಆದ್ದರಿಂದ ಸಾರ್ವಜನಿಕರ ಹಾಗೂ ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ.
ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಹಾಗೂ ದಂಡ ಪ್ರಕ್ರಿಯಾ ಸಂಹಿತೆ ೧೯೭೩ ಕಲಂ ೧೪೪ ರಲ್ಲಿ ಚಿಂಚಲಿ ಗ್ರಾಮದ ಶ್ರೀ ಮಾಯಕ್ಕಾ ದೇವಿ ದೇವಸ್ಥಾನ ಹಾಗೂ ಬಡಕುಂದ್ರಿ ಗ್ರಾಮದ ಶ್ರೀ ಹೊಳೆಮ್ಮಾ ದೇವಿ ದೇವಸ್ಥಾನದ ಸಾರ್ವಜನಿಕ ದರ್ಶನವನ್ನು ಹಾಗೂ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಅಂಗಡಿ ಮುಗ್ಗಟ್ಟು ತೆರೆಯುವುದನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ದೇವಸ್ಥಾನಗಳ ಆಡಳಿತ ಮಂಡಳಿಯವರು ದೇವಸ್ಥಾನಗಳಲ್ಲಿ ನಡೆಯುವ ದಿನನಿತ್ಯದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಎಲ್ಲಾ ಮುಂಜಾಗೃತಾ ಕ್ರಮವನ್ನು ವಹಿಸಿ ನಡೆಸಲು ವಿನಾಯಿತಿ ನೀಡಲಾಗಿದೆ.
ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಹಾಗೂ ಭಾರತೀಯ ದಂಡ ಸಂಹಿತೆ ೧೮೮ ರ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಎಂ. ಜಿ. ಹಿರೇಮಠ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸವದತ್ತಿ ಯಲ್ಲಮ್ಮನಿಗಿಲ್ಲ ಅನ್ ಲಾಕ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button