ಪ್ರಗತಿವಾಹಿನಿ ಬೆಳಗಾವಿ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ 10 ಹೊಸ ಬಸ್ ಗಳನ್ನು ಮಂಜೂರು ಮಾಡಲಾಗಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಹಸಿರು ನಿಶಾನೆ ತೋರಿಸಿದರು.
ಸುವರ್ಣ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ನೂತನ ಬಸ್ ಗಳಿಗೆ ಚಾಲನೆ ನೀಡಿದ ಲಕ್ಷ್ಮಿ ಹೆಬ್ಬಾಳಕರ್, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಗರಕ್ಕೆ ಬರಲು ಬಸ್ ಗಳ ಸಮಸ್ಯೆಯಾಗಿತ್ತು. ಇರುವ ಬಸ್ ಗಳೂ ಹಳೆಯದಾಗಿದ್ದು, ಸಮರ್ಪಕ ಸೇವೆ ನೀಡುತ್ತಿರಲಿಲ್ಲ. ಹಾಗಾಗಿ 20 ಹೊಸ ಬಸ್ ನೀಡುವಂತೆ ಸಾರಿಗೆ ಸಚಿವರನ್ನು ವಿನಂತಿಸಲಾಗಿತ್ತು. ಮೊದಲ ಹಂತದಲ್ಲಿ 10 ಬಸ್ ಗಳನ್ನು ಒದಗಿಸಿದ್ದಾರೆ ಎಂದು ತಿಳಿಸಿದರು.
ಇನ್ನೂ 10 ಬಸ್ ಗಳು ಶೀಘ್ರದಲ್ಲೇ ಬರಲಿದ್ದು, ಗ್ರಾಮೀಣ ಜನರು ಇದರ ಪ್ರಯೋಜನ ಪಡೆಯಬೇಕು ಎದು ಅವರು ವಿನಂತಿಸಿದರು.
ಕುಮಾರ ಪರ: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ವಿಷಯದಲ್ಲಿ ಮುಖ್ಯಮಂತ್ರಿಗಳು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಈ ವೇಳೆ ತಿಳಿಸಿದ ಲಕ್ಷ್ಮಿ, ನನ್ನ ಮಾಲಿಕತ್ವದ ಸಕ್ಕರೆ ಕಾರ್ಖಾನೆ ಈ ವರ್ಷ ಆರಂಭವಾಗಿದ್ದು, ಬೆಂಗಳೂರಿನ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ. ನಾನು ಯಾವತ್ತೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವವರಲ್ಲ. ಜೆಡಿಎಸ್ ಚಿಹ್ನೆಯೇ ರೈತ ಮಹಿಳೆಯಾಗಿದ್ದು, ಈಗ ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆಯನ್ನೂ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರ ಗೌಡ ಪಾಟೀಲ, ಯುವರಾಜ ಕದಂ, ಸುರೇಶ ಇಟಗಿ, ಸುರೇಶ ಕಂಬಿ, ಅಡಿವೇಶ ಇಟಗಿ, ಸುರೇಶ ಕಂಬಿ, ಮಾರುತಿ ಸನದಿ, ಸಿ.ಸಿ.ಪಾಟೀಲ ಮೊದಲಾದವರಿದ್ದರು.
_—––+————
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ