ಪ್ರಗತಿವಾಹಿನಿ ಸುದ್ದಿ, ಕಾರವಾರ : ಕಳೆದ ೩-೪ ದಿನಗಳಿಂದ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಎಲ್ಲ ನದಿ, ಫಾಲ್ಸ್ ಹಾಗೂ ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿಷೇಧಿತ ಪ್ರದೇಶದಲ್ಲಿ ಸಂಚರಿಸಬಾರದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಪ್ರಮುಖ ನದಿಗಳಾದ ಅಘನಾಶಿನಿ, ಕಾಳಿ ಹಾಗೂ ಗಂಗಾವಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿರುವ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ. ಅದಲ್ಲದೇ ಅರಣ್ಯ ಪ್ರದೇಶದಲ್ಲಿರುವ ಸಣ್ಣಪುಟ್ಟ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಜಿಲ್ಲೆಯ ಜನರೂ ಸಹ ಸಾಕಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ. ಜಲಾಶಯ ಹಾಗೂ ನದಿ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಸಾರ್ವಜನಿಕರು ತುಂಬಾ ಎಚ್ಚರಿಕೆಯಿಂದ ಸಂಚರಿಸಬೇಕು. ಜೊತೆಗೆ ಮಳೆ ಹಾಗೂ ಪ್ರವಾಹದಿಂದ ತೊಂದರೆಯಾಗುವ ಮುನ್ಸೂಚನೆ ಇರುವಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಪ್ರವಾಹ ಮತ್ತು ಮಳೆಯಿಂದಾಗುವ ತೊಂದರೆಯ ಕುರಿತು ತಕ್ಷಣ ತಹಶೀಲ್ದಾರ್, ಜಿಲ್ಲಾಡಳಿತ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಅಜಾಗರೂಕತೆಯಿಂದ ವರ್ತಿಸದಂತೆ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
ಜಿಲ್ಲೆಯ ಅಂಕೋಲಾ ತಾಲೂಕಿನ ೩೨, ಹಳಿಯಾಳ ೧, ಕಾರವಾರ ೨೭, ಕುಮಟಾ ೯, ಮುಂಡಗೋಡ ೧, ಸಿದ್ದಾಪುರ ೫ ಹಾಗೂ ಶಿರಸಿಯ ೧ ಗ್ರಾಮ ಸೇರಿದಂತೆ ಒಟ್ಟಾರೆ ೭೯ ಗ್ರಾಮಗಳು ನದಿ ಹಾಗೂ ಜಲಾಶಯದಿಂದ ಹೊರ ಬಿಡಲಾದ ನೀರಿನಿಂದ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿವೆ. ಇದರ ಪರಿಣಾಮ ಜಿಲ್ಲೆಯಲ್ಲಿ ಒಟ್ಟು ೧೧೦೮೪ ಜನರು ತೊಂದರೆಗೆ ಒಳಗಾಗಿದ್ದಾರೆ. ಹೊನ್ನಾವರ ತಾಲೂಕಿನಲ್ಲಿ ಮೀನುಗಾರ ಮಹಿಳೆಯೊಬ್ಬರು ಹಾಗೂ ಶಿರಸಿ ತಾಲೂಕಿನಲ್ಲಿ ಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ನದಿಯ ಪ್ರವಾಹ ಸಿಲುಕಿ ಮೃತರಾಗಿದ್ದು, ಅವರ ಮೃತ ದೇಹ ಪತ್ತೆಯಾಗಿವೆ. ಹಾಗೇನೆ ಅಂಕೋಲಾ ತಾಲೂಕಿನಲ್ಲಿ ಇಬ್ಬರು ಕಾಣಿಯಾಗಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಮಳೆ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ೧, ಕಾರವಾರ ೫ ಹಾಗೂ ಯಲ್ಲಾಪುರ ೩ ಸೇರಿದಂತೆ ಒಟ್ಟು ೯ ಮನೆಗಳು ಪೂರ್ಣ ಹಾಗೂ ೫೫ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟಾರೆಯಾಗಿ ಮಳೆ ಹಾಗೂ ಪ್ರವಾಹದಲ್ಲಿ ಸಿಲುಕಿದಂತಹ ಒಟ್ಟು ೩೭೭೬ ಜನರನ್ನು ರಕ್ಷಿಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು.
ಸಂಕಷ್ಟಕ್ಕೆ ಸಿಲುಕಿದ ಜನರ ಆಶ್ರ್ರಯಕ್ಕಾಗಿ ಅಂಕೋಲಾ ತಾಲೂಕಿನಲ್ಲಿ ೧೯, ಹಳಿಯಾಳ ೧, ಕಾರವಾರ ೧೯, ಕುಮಟಾ ೯, ಮುಂಡಗೋಡ ೧, ಸಿದ್ದಾಪುರ ೫, ಶಿರಸಿ ೧ ಹಾಗೂ ಯಲ್ಲಾಪುರ ೩ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೫೮ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಎಲ್ಲ ಕೇಂದ್ರಗಳಲ್ಲಿ ಒಟ್ಟು ೩೪೩೫ ಜನರು ಆಶ್ರಯ ಪಡೆದಿದ್ದಾರೆ. ಅಲ್ಲದೇ ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ೧೪೩ ರಸ್ತೆಗಳು, ೨೨ ಸೇತುವೆಗಳು, ೭ ಶಾಲೆಗಳು, ೧ ಪ್ರಾಥಮಿಕ ಆರೋಗ್ಯ ಕೇಂದ್ರ, ೧೪೫ ವಿದ್ಯುತ್ ಕಂಬಗಳು, ೫ ಟ್ರಾನ್ಸ್‌ಪಾರ್ಮರ್ ಹಾನಿಗೊಳಗಾಗಿವೆ. ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ, ಡಬ್ಗುಳಿ, ಕಳಚೆ, ತಡಕೆಬೈಲ್ ಹಾಗೂ ಸಿದ್ದಾಪುರದಲ್ಲಿ ೮ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕದ್ರಾ ಜಲಾಶಯದ ೧೦ ಗೇಟ್‌ಗಳನ್ನ ತೆರೆಯಲಾಗಿದ್ದು, ೨೧೨೯೪೭ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ. ಅದರಂತೆ ಕೊಡಸಳ್ಳಿ ಜಲಾಶಯದ ೯ ಗೇಟ್‌ಗಳನ್ನ ತೆರೆಯಲಾಗಿದ್ದು, ೧೮೩೫೮೧ ಕ್ಯೂಸೆಕ್ಸ್ ನೀರನ್ನು ಹೊರಬೀಡಲಾಗಿದೆ. ನೆರೆ ಮತ್ತು ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರನ್ನು ರಕ್ಷಿಸಲು ೨೦ ಸದಸ್ಯರು ಹಾಗೂ ಬೋಟ್‌ನ್ನು ಒಳಗೊಂಡ ಎನ್‌ಡಿಆರ್‌ಎಫ್‌ನ ೧ ತಂಡ, ೧೬ ಸದಸ್ಯರು ಹಾಗೂ ಬೋಟ್ ಒಳಗೊಂಡ ಎಸ್‌ಡಿಆರ್‌ಎಫ್‌ನ ೧ ತಂಡ ಹಾಗೂ ೧೭ ಸೈನಿಕರು ಮತ್ತು ೫ ಜೆಮಿನಿ ಬೋಟ್ಸ್ ಒಳಗೊಂಡ ನೌಕಾ ದಳದ ೨ ತಂಡವನ್ನು ಬಳಸಿಕೊಳ್ಳಲಾಗುತ್ತಿದೆ. ಇದಲ್ಲದೇ ಅಂಕೋಲಾ ತಾಲೂಕಿನಲ್ಲಿ ೪೦, ಕಾರವಾರ ೩ ಹಾಗೂ ಜೋಯಿಡಾದಲ್ಲಿ ೧ ಸ್ಥಳೀಯ ಬೋಟ್‌ಗಳನ್ನು ರಕ್ಷಣಾಕಾರ್ಯಕ್ಕೆ ಬಳಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಪ್ರವಾಹ ಹಾಗೂ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನರನ್ನು ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜನರೂ ಉತ್ತಮವಾಗಿ ಸಹಕಾರನೀಡುತ್ತಿದ್ದು, ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಕಳೆದ೨-೩ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ನದಿ, ಫಾಲ್ಸ್‌ಗಳು ಹಾಗೂ ಜಲಾಶಯ ತುಂಬಿ ಹರಿಯುತ್ತಿವೆ. ಆದರೂ ಹುಬ್ಬಳ್ಳಿಯಿಂದ ೬ ಜನ ಯುವಕರು ಯಲ್ಲಾಪುರದ ಶಿರ್ಲೆ ಫಾಲ್ಸ್‌ಗೆ ವೀಕ್ಷಣೆಗಾಗಿ ಬಂದು ಸಂಕಷ್ಟಕ್ಕೆ ಸಿಲುಕಿದ್ದರು. ಅವರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದು, ಸಾರ್ವಜನಿಕರು ಯಾರೂ ಅಪಾಯಕಾರಿ ಪ್ರದೇಶಗಳಲ್ಲಿ ಸಂಚರಿಸಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಅವರು ಉಪಸ್ಥಿತರಿದ್ದರು.
ಉತ್ತರ ಕನ್ನಡ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು; 11 ಜನರ ಏರ್ ಲಿಫ್ಟ್
ಕೃಷ್ಣಾ ನದಿ ಪಾತ್ರದಲ್ಲಿ ತೀವ್ರ ಪ್ರವಾಹ ಎಚ್ಚರಿಕೆ
ಕರಾವಳಿ ಜಿಲ್ಲೆಗಳಲ್ಲಿ ಇನ್ನಷ್ಟು ಮಳೆ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ