ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಪ್ರವಾಸ ಮುಗಿಸಿ ಬೆಂಗಳೂರಿಗೆ ತಲುಪಿದ್ದಾರೆ.
ಬೆಳಗ್ಗೆ ಬೆಳಗಾವಿಯಿಂದ ಈಗ ಬೆಂಗಳೂರಿನವರೆಗೆ ಹತ್ತಾರು ಬಾರಿ ಮಾಧ್ಯಮದವರ ಪ್ರಶ್ನೆಗೆ ಯಡಿಯೂರಪ್ಪ ಅವರ ಒಂದೇ ಉತ್ತರ – ಇಂದು ಸಂಜೆ ಅಥವಾ ರಾತ್ರಿಯೊಳಗೆ ಹೈಕಮಾಂಡ್ ಸಂದೇಶ ಬರಲಿದೆ. ಅದರಂತೆ ನಡೆದುಕೊಳ್ಳುತ್ತೇನೆ.
ಸಂದೇಶ ಬರುವ ದಿನಾಂಕವನ್ನು ಹೈಕಮಾಂಡ್ ಹೇಳಿದೆಯಾ ಅಥವಾ ನೀವೇ ಹೇಳುತ್ತಿದ್ದೀರಾ ಎನ್ನುವ ಪ್ರಶ್ನೆಗೆ ಅದನ್ನೆಲ್ಲ ಚರ್ಚಿಸಲು ಬಯಸುವುದಿಲ್ಲ ಎಂದರು.
ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಹೇಳಿದ್ದಾರಲ್ಲಾ, ಮತ್ತೇಕೆ ಬದಲಾವಣೆ ಪ್ರಶ್ನೆ ಎಂದು ಕೇಳಿದಾಗ ಅವರ ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದಷ್ಟೆ ಹೇಳಿದರು.
ಸಂದೇಶ ಬರದಿದ್ದರೆ ಮುಂದೇನು ಎನ್ನುವ ಪ್ರಶ್ನೆಗೆ ನಾಳೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಸಂದೇಶದ ದಾರಿ ಕಾಯುತ್ತಲೂ ಇಷ್ಟೊಂದು ಚಟುವಟಿಕೆಯಿಂದಿದ್ದೀರಲ್ಲಾ ಎಂದು ಕೇಳಿದಾಗ, ನಾನು ಕೊನೆಯ ಕ್ಷಣದವರೆಗೂ ಕೆಲಸ ಮಾಡುತ್ತೇನೆ. ರಾಜಿನಾಮೆ ಕೊಡು ಎಂದರೆ ಅವರು ಹೇಳಿದ ದಿನ ಕೊಡುತ್ತೇನೆ. ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ನಾಳೆ ಮೊದಲೇ ನಿಗದಿಯಾದಂತೆ ನಮ್ಮ ಸರಕಾರದ 2 ವರ್ಷದ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಎಷ್ಟೇ ಪ್ರಶ್ನೆ ಕೇಳಿದರೂ ಯಾವುದೇ ಸುಳಿವು ನೀಡದ ಯಡಿಯೂರಪ್ಪ, ಸ್ವಲ್ಪವೂ ವಿಚಲಿತರಾಗದೆ ಉತ್ತರಿಸಿದರು. ಬಿಜೆಪಿ ಹೈಕಮಾಂಡ್ ಅವರನ್ನು ಸಂದೇಶಕ್ಕಾಗಿ ಕಾಯುವಂತೆ ತುದಿಗಾಲಲ್ಲಿ ನಿಲ್ಲಿಸಿದೆಯಾ ಅಥವಾ ಅವರನ್ನೇ ಮುಂದುವರಿಸಲು ನಿರ್ಧರಿಸಿ ಸಂದೇಶ ನೀಡುವ ಸುಳಿವು ಅವರಿಗೆ ಸಿಕ್ಕಿದೆಯೇ ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ.
ನಾಳೆ ಸಿಎಂ ಯಡಿಯೂರಪ್ಪ ಉತ್ತರ ಕನ್ನಡ ಪ್ರವಾಸ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ