ಬೇಸತ್ತಿರುವ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಯಿಸುವುದಿದ್ದರೆ ಬದಲಾಯಿಸಿಬಿಡಲಿ ಎನ್ನುವ ಗಟ್ಟಿ ನಿಲುವಿಗೆ ಬಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ನಿರ್ಧಾರದಿಂದ ಬಿಜೆಪಿ ಹೈಕಮಾಂಡ್ ಬಹುತೇಕ ಹಿಂದೆ ಸರಿದಂತಿದೆ. ಇದರಿಂದಾಗಿ ಇಂದು ಸಂಜೆಯ ಹೊತ್ತಿಗೆ ಸಧ್ಯ ಇರುವ ರಾಜಕೀಯ ಅಸ್ಥಿರತೆಗೆ ತೆರೆ ಬೀಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕಳೆದ ಸುಮಾರು 6 ತಿಂಗಳಿನಿಂದಲೂ ನಾಯಕತ್ವ ಬದಲಾವಣೆಯ ಗೊಂದಲ ನಡೆಯುತ್ತಿದೆ. ಪಕ್ಷದ ನಾಯಕರೇ ನಾಯಕತ್ವ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡುತ್ತ ಬಂದಿದ್ದಾರೆ. ಒಂದಿಬ್ಬರು ಶಾಸಕರು ಸೇರಿದಂತೆ ಪಕ್ಷದೊಳಗಿನ ಕೆಲವರು ವಿರೋಧ ಪಕ್ಷದವರಂತೆ ವರ್ತಿಸುತ್ತ ಬಂದಿದ್ದಾರೆ.
ಭಿನ್ನಮತೀಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಪಕ್ಷದ ಹಲವು ನಾಯಕರು ಮುಜುಗುರ ಅನುಭವಿಸುತ್ತ ಬಂದಿದ್ದಾರೆ. ಆದರೆ ಹೈಕಮಾಂಡ್ ಇದಕ್ಕೆಲ್ಲ ಬ್ರೇಕ್ ಹಾಕುವ ಕೆಲಸ ಮಾಡಲೇ ಇಲ್ಲ. ಎಲ್ಲವನ್ನೂ ನೋಡಿಯೂ ಕೈ ಕಟ್ಟಿ ಕುಳಿತಿದೆ. ಯಡಿಯೂರಪ್ಪ ಅವರನ್ನು ನಿಯಂತ್ರಣದಲ್ಲಿಡಲು ಭಿನ್ನಮತೀರು ಇರಬೇಕು ಎನ್ನುವ ನಿಲುವಿಗೆ ಹೈಕಮಾಂಡ್ ಬಂದಿರಬಹುದು ಎನ್ನುವ ಅಭಿಪ್ರಾಯವನ್ನು ಪಕ್ಷದ ಕೆಲವರು ವ್ಯಂಗ್ಯವಾಗಿ ಹೇಳುತ್ತಿದ್ದರು.
ಈ ಎಲ್ಲದರಿಂದ ಬೇಸತ್ತಿರುವ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಯಿಸುವುದಿದ್ದರೆ ಬದಲಾಯಿಸಿಬಿಡಲಿ ಎನ್ನುವ ಗಟ್ಟಿ ನಿಲುವಿಗೆ ಬಂದಿದ್ದಾರೆ. ಹಾಗಾಗಿಯೇ ಈಚೆಗೆ ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕತ್ವ ಬದಲಾವಣೆ ಪ್ರಸ್ತಾಪ ಇಟ್ಟಾಗ ಹಿಂದೆ ಮುಂದೆ ನೋಡದೆ ಯಸ್ ಎಂದು ಬಂದಿದ್ದರು.
ನಾನು ಖುರ್ಚಿ ಬಿಡಲು ಸಿದ್ಧ ಎಂದು ಗಟ್ಟಿಯಾಗಿಯೇ ಹೇಳಿ ಬಂದಿದ್ದರು. ಜುಲೈ 26ರಂದು ನಾನು ಮುಖ್ಯಮಂತ್ರಿಯಾಗಿ 2 ವರ್ಷ ಪೂರೈಸುತ್ತೇನೆ. ಅಂದೇ ನಾನು ಅಧಿಕಾರ ಬಿಡಲು ಸಿದ್ಧನಿದ್ದೇನೆ. ಯಾರಿಗೆ ಅಧಿಕಾರ ಹಸ್ತಾಂತರಿಸಬೇಕು ಎನ್ನುವುದನ್ನು ನನಗೆ ಜುಲೈ 25ರಂದು ತಿಳಿಸಿ ಎಂದು ಸ್ಪಷ್ಟವಾಗಿ ಹೇಳಿ ಬಂದಿದ್ದರು.
ಯಾವಾಗ ಯಡಿಯೂರಪ್ಪ ಅಧಿಕಾರ ಬಿಡಲು ಒಪ್ಪಿಕೊಂಡರೋ ಆಗ ಹೈಕಮಾಂಡ್ ಹೊಸ ನಾಯಕನ ಹುಡುಕಾಟದಲ್ಲಿ ತೊಡಗಿತು. ಇತ್ತ ಹಿರಿಯ ಸಚಿವರು ಸೇರಿದಂತೆ ಬಹುತೇಕ ನಾಯಕರಲ್ಲಿ ಗೊಂದಲ ಶುರುವಾಯಿತು. ಯಡಿಯೂರಪ್ಪನವರನ್ನು ಕೈ ಬಿಟ್ಟರೆ 2023ರ ಚುನಾವಣೆಗೆ ಯಾರ ನಾಯಕತ್ವದಲ್ಲಿ ಹೋಗುವುದು ಎನ್ನುವ ಆತಂಕ ಶುರುವಾಯಿತು. ಬಹುತೇಕ ಹಿರಿಯ ನಾಯಕರು ಹೈಕಮಾಂಡ್ ಮುಂದೆ ಇದೇ ಪ್ರಶ್ನೆ ಇಟ್ಟರು. ಜೊತೆಗೆ ಬದಲಿ ಪ್ರಬಲ ನಾಯಕನೂ ಕಾಣಲಿಲ್ಲ.
ಯಡಿಯೂರಪ್ಪನವರಿಗೆ ಪರ್ಯಾಯ ನಾಯಕನನ್ನು ಹುಡುಕುವುದರಲ್ಲಿ ಸಧ್ಯದ ಮಟ್ಟಿಗೆ ಬಿಜೆಪಿ ಹೈಕಮಾಂಡ್ ವಿಫಲವಾಗಿದ್ದೇ ನಾಯಕತ್ವ ಬದಲಾವಣೆ ನಿರ್ಧಾರದಿಂದ ಹಿಂದೆ ಸರಿಯಲು ಕಾರಣ ಎನ್ನಲಾಗಿದೆ. ಇದರ ಹೊರತಾಗಿ ಬೇರೆ ಯಾವುದೇ ಒತ್ತಡ ಇದಕ್ಕೆ ಕಾರಣವಲ್ಲ ಎನ್ನುವುದು ಸ್ಪಷ್ಟವಾಗಿದೆ.
ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಸ್ಪಷ್ಟ ಸಂದೇಶ ಬಹುತೇಕ ನಿನ್ನೆಯೇ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಂದ ಹೊರಬಿದ್ದಿದೆ. ಯಡಿಯೂರಪ್ಪ ಅವರ ಕಾರ್ಯವೈಖರಿ ಉತ್ತಮವಾಗಿದೆ, ಕರ್ನಾಟಕದಲ್ಲಿ ಯಾವುದೇ ರಾಜಕೀಯ ಗೊಂದಲವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಹಾಗಾಗಿ ಬಹುತೇಕ ಇಂದು ಸಂಜೆಯಹೊತ್ತಿಗೆ ನಾಯಕ್ತವ ಬದಲಾವಣೆ ಕೂಗಿಗೆ ಒಂದು ಅಂತ್ಯ ಕಾಣಬಹುದು. 2023ರ ಚುನಾವಣೆವರೆಗೆ ಮತ್ತೆ ಅಂತಹ ಪ್ರಸ್ತಾಪ ಬರುವ ಸಾಧ್ಯತೆ ತೀರಾ ಕಡಿಮೆ.
ಹೌದು, ಸಂಜೆ ಬೆಳಗಾವಿಗೆ ಬರೋದ್ರೊಳಗೆ ಹೈಕಮಾಂಡ್ ಸಂದೇಶ ಬರುತ್ತೆ, ನಿಮಗೂ ತಿಳಿಯುತ್ತೆ -ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ