ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ದೆಹಲಿಯಿಂದ ಬಿಜೆಪಿ ವೀಕ್ಷಕರ ತಂಡ ಬೆಂಗಳೂರಿಗೆ ಆಗಮಿಸಿದೆ.
ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ಅರುಣ್ ಸಿಂಗ್ ಜೊತೆಯಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕೂಡ ದೆಹಲಿಯಿಂದ ಆಗಮಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಅರುಣ್ ಸಿಂಗ್, ಬಿ.ಎಸ್.ಯಡಿಯೂರಪ್ಪ 2 ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡಿದ್ದಾರೆ. ಎಲ್ಲಾ ವರ್ಗದವರನ್ನು ಒಗ್ಗಟ್ಟಿನಲ್ಲಿ ಕರೆದೊಯ್ದು ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಪಕ್ಷ ಸಂಘಟನೆ, ಪಕ್ಷದ ಬೆಳವಣಿಗೆಗೆ ಅವರ ಮಾರ್ಗದರ್ಶನ, ಸಹಕಾರ ಪಡೆದುಕೊಳ್ಳುತ್ತೇವೆ ಎಂದರು.
ಇದೇವೇಳೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ನೂತನ ಸಿಎಂ ಆಯ್ಕೆ ಬಗ್ಗೆ ನಿರ್ಧರಿಸಲಾಗುವುದು. ವರಿಷ್ಠರ ಸೂಚನೆಯಂತೆ ಹೊಸ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎಂದು ಹೇಳಿದರು.
ಒಟ್ಟಾರೆ ರಾಜ್ಯ ಬಿಜೆಪಿಯಲ್ಲಿ ಕ್ಷಣ ಕ್ಷಣಕ್ಕೂ ವಿದ್ಯಾಮಾನಗಳು ಗರಿಗೆದರಿದ್ದು, ಇಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಹೆಸರು ಅಂತಿಮಗೊಳಿಸಿ, ನಾಳೆ ಬೆಳಿಗ್ಗೆ ಶಾಸಕಾಂಗ ಪಕ್ಷದ ನೂತನ ನಾಯಕನ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ. ಬಳಿಕ ನಿಯೋಜಿತ ಸಿಎಂ ರಾಜಭವನಕ್ಕೆ ತೆರಳಿ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವಾರದಲ್ಲಿ ಸಂಪುಟ ರಚನೆ ಪ್ರಕ್ರಿಯೆ ಕೂಡ ನಡೆಯಲಿದೆ ಎನ್ನಲಾಗುತ್ತಿದೆ.
ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ