Latest

ವೈರಲ್ ಆಯ್ತು ಕಲಬುರಗಿ ಶಿಕ್ಷಣಾಧಿಕಾರಿ ಪತ್ರ

ನಿರ್ದೇಶಕರ ಕಾರಿಗೆ ಎಮ್ಮೆ ಡಿಕ್ಕಿಯೂ… ತೋಟದ ಮಾಲಿಕನ ಗೃಹಚಾರವೂ …

 ಪ್ರಗತಿವಾಹಿನಿ ಸುದ್ದಿ, ಕಲಬುರಗಿ – ಶಿಕ್ಷಣ ಇಲಾಖೆ ನಿರ್ದೇಶಕರ ಕಾರಿಗೆ ಎಮ್ಮೆ ಡಿಕ್ಕಿ ಹೊಡೆದ ಪ್ರಕರಣವೊಂದು ಭಾರಿ  ಸುದ್ದಿಯಾಗಿದ್ದು, ಈ ಕುರಿತು ಶಿಕ್ಷಣಾಧಿಕಾರಿಗಳು ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೀವರ್ಗಿ ತಾಲೂಕು ಮಂದೇವಾಲದ ಹತ್ತಿರ ಕಲಬುರಗಿ ಅಪರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಇಲಾಖೆ ನಿರ್ದೇಶಕರ ಕಾರು ಎಮ್ಮೆಗೆ ಡಿಕ್ಕಿ ಹೊಡೆದಿದೆ.  ಎಮ್ಮೆಗಳು ರಸ್ತೆಗೆ ನುಗ್ಗಿ ಬಂದಿದ್ದರಿಂದ ಚಾಲಕ ಬ್ರೇಕ್ ಹಾಕಿದರೂ ನಿಯಂತ್ರಣಕ್ಕೆ ಬಾರದೆ ಕಾರಿನ ಬಂಪರ್ ಮತ್ತಿತರ ಭಾಗಗಳು ಜಖಂ ಗೊಂಡಿವೆ ಎನ್ನುವುದು ಸುದ್ದಿ.
 ಆದರೆ ಇದಕ್ಕಿಂತ ಕುತೂಹಲಕರ ಅಂಶ ಇಲ್ಲಿದೆ.
ಕಾರಿಗೆ ಎಮ್ಮೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಎಮ್ಮೆ ಕಾಯುತ್ತಿದ್ದ ಅಪ್ರಾಪ್ತ ಬಾಲಕನನ್ನು ಶಿಕ್ಷಣ ಇಲಾಖೆ ನಿರ್ದೇಶಕರು ಮಾತನಾಡಿಸಿದ್ದಾರೆ. ಆತ ಈ ಹಿಂದೆ ಅಫಜಲಪುರ ತಾಲೂಕಿನ ಚಿನಮಳ್ಳಿ ಶಾಲೆಗೆ ದಾಖಲಾಗಿದ್ದು, ನಂತರ ಶಾಲೆ ಬಿಟ್ಟಿದ್ದಾನೆ. 2 ವರ್ಷದಿಂದ ಮಂದೇವಾಲ ತೋಟದ ಮಾಲಿಕರೋರ್ವರು ಆತನನ್ನು ಜೀತಕ್ಕೆ ಇಟ್ಟುಕೊಂಡಿದ್ದಾಗಿ ತಿಳಿಸಿದ್ದಾನೆ.
ಕೂಡಲೇ ಸ್ಥಳೀಯ ಸಿಆರ್ ಪಿಗೆ ಅಪರ ಶಿಕ್ಷಣ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಈ ರೀತಿ ಜೀತಕ್ಕಿಟ್ಟುಕೊಳ್ಳುವುದು ಆರ್ ಟಿಇ ನಿಯಮಾವಳಿಗೆ ವಿರುದ್ಧವಾದುದು. ಈ ಕುರಿತು ಸೂಕ್ತ ವಿಚಾರಣೆ ನಡೆಸಿ ವರದಿ ಸಲ್ಲಿಸುವುದು, ಜೊತೆಗೆ ಜೀತಕ್ಕೆ ಇಟ್ಟುಕೊಂಡ ತೋಟದ ಮಾಲೀಕನ ಕುರಿತು ಸ್ಥಳೀಯ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಿ ವರದಿ ನೀಡಬೇಕು ಎಂದು ನಿರ್ದೇಶಕರು ಕಲಬುರಗಿ ಡಿಡಿಪಿಐ ಮತ್ತು ಅಫಜಲಪುರ ಹಾಗೂ ಜೀವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕಾರಿಗೆ ಎಮ್ಮೆ ಡಿಕ್ಕಿಯಾಗಿರುವುದೂ…. ಬಾಲಕನ ಜೀತವೂ…. ತೋಟದ ಮಾಲಿಕನ ಗೃಹಚಾರವೂ…  ಎಲ್ಲವೂ ಈಗ ಚರ್ಚೆಯಾಗುತ್ತಿದೆ.
ಜೊತೆಗೆ, ಇಂತಹ ಅದೆಷ್ಟು ಸಾವಿರ ಸಾವಿರ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವುದು ಬೆಳಕಿಗೆ ಬರಬೇಕೆಂದರೆ ಇಂತಹ ಘಟನೆಗಳೇ ನಡೆಯಬೇಕೆ? ಎನ್ನುವ ಪ್ರಶ್ನೆಯೂ ಚರ್ಚೆಯಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button