ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬೆಳಗ್ಗೆಯೇ ದೆಹಲಿಗೆ ತೆರಳಲಿದ್ದಾರೆ.
ಬೆಳಗ್ಗೆ 6.30ರ ವಿಮಾನದ ಮೂಲಕ ದೆಹಲಿಗೆ ತೆರಳುವ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ.
ನಂತರ ಕರ್ನಾಟಕದ ಸಂಸದರೊಂದಿಗೂ ಚರ್ಚಿಸಲಿದ್ದಾರೆ. ರಾತ್ರಿ ನವದೆಹಲಿಯಲ್ಲೇ ವಾಸ್ತವ್ಯಹೂಡಿ ಶನಿವಾರ ಬೆಳಗ್ಗೆ ವಾಪಸ್ಸಾಗಲಿದ್ದಾರೆ.
ಬಸವರಾಜ ಬೊಮ್ಮಾಯಿ ದೆಹಲಿಯ ಈ ಭೇಟಿಯಲ್ಲಿ ಸಚಿವಸಂಪುಟ ರಚನೆ ಕುರಿತಂತೆ ಯಾರೊಂದಿಗೂ ಚರ್ಚಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಮತ್ತೆ 2- 3 ದಿನದಲ್ಲಿ ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸಮಯ ಪಡೆದು ದೆಹಲಿಗೆ ಹೋಗುವುದಾಗಿಯೂ ಆಗ ಸಚಿವಸಂಪುಟ ರಚನೆ ಕುರಿತು ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.
ಇದೇ ವೇಳೆ, ಸಚಿವಾಕಾಂಕ್ಷಿಗಳ ಲಾಬಿ ಜೋರಾಗಿದ್ದು, ಕರ್ನಾಟಕದ 15ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು ಈಗಾಗಲೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಕೆಲವರು ಮಾಡಿದರೆ, ಇನ್ನು ಕೆಲವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೂಲಕ ಲಾಬಿ ನಡೆಸುತ್ತಿದ್ದಾರೆ. ಕೆಲವರು ಜಾತಿ ಲಾಬಿ ಮಾಡಿದರೆ, ಕೆಲವರು ತಮ್ಮ ಸೀನಿಯಾರಿಟಿ ಪರಿಗಣಿಸುವಂತೆ ಕೋರುತ್ತಿದ್ದಾರೆ.
ಸಚಿವ ಸಂಪುಟ ರಚನೆ ಕಗ್ಗಂಟನ್ನು ಬೊಮ್ಮಾಯಿ ಹೇಗೆ ಪರಿಹರಿಸಲಿದ್ದಾರೆ ಕಾದು ನೋಡಬೇಕಿದೆ.
ಯಡಿಯೂರಪ್ಪ ನಿವಾಸಕ್ಕೆ ಸಚಿವಾಕಾಂಕ್ಷಿಗಳು ದೌಡು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ