Latest

ಗುಳ್ಳಾಪುರ ಸೇತುವೆ ಕುಸಿತ ತುಂಬಾ ಭಯಾನಕವಾಗಿದೆ – ಬೊಮ್ಮಾಯಿ

ರಸ್ತೆ ಪುನರ್ ನಿರ್ಮಾಣಕ್ಕೆ ನಾಳೆಯೇ 200 ಕೋಟಿ ಬಿಡುಗಡೆ; ಸಿಎಂ ಬೊಮ್ಮಾಯಿ ಭರವಸೆ

 

ಪ್ರಗತಿವಾಹಿನಿ ಸುದ್ದಿ; ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಈ ಕೂಡಲೇ ಪರಿಹಾರ ನೀಡಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ತಾಲೂಕಿನ ವಿವಿಧೆಡೆ ಪ್ರವಾಹ ಪೀಡಿತ ಸ್ಥಳಗಳ ವೀಕ್ಷಣೆಯ ಬಳಿಕ ಮಾತನಾಡಿದ ಅವರು, ” ಯಲ್ಲಾಪುರ , ಅಂಕೋಲಾ, ಕಾರವಾರ, ಶಿರಸಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಬಹಳಷ್ಟು ಹಾನಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದೇನೆ. ಗುಳ್ಳಾಪುರ ಸೇತುವೆ ಕುಸಿತ ತುಂಬಾ ಭಯಾನಕವಾಗಿದೆ. ರಾಜ್ಯ ಮಟ್ಟದಲ್ಲಿ ಸೇತುವೆಯ ಬಗ್ಗೆ ಚರ್ಚಿಸಲಾಗುವುದು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು,” ಎಂದರು‌.

“ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಲವೆಡೆ ಗುಡ್ಡ ಕುಸಿತವಾಗಿ ನದಿ ನೀರು ನುಗ್ಗಿ ಹಾನಿಯಾಗಿದೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಿದ್ದೇನೆ. ಕೇಂದ್ರದಿಂದ ಈಗಾಗಲೇ ಅನುದಾನ ಬಂದಿದೆ‌. ಜಿಲ್ಲಾಧಿಕಾರಿ ನಿಧಿಯಲ್ಲಿ 42 ಕೋಟಿ ಪರಿಹಾರದ ಹಣವಿದ್ದು, ಅದನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳುತ್ತೇವೆ,” ಎಂದರು‌.

ಹಾನಿ ಪರಿಶೀಲನೆ:
ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗುಡ್ಡ ಕುಸಿತದಿಂದ ಹಾನಿಗೊಳಗಾಗಿರುವ ಕಳಚೆ ಗ್ರಾಮ, ಅರಬೈಲು ಘಟ್ಟ ಹಾಗೂ ಗುಳ್ಳಾಪುರ ಸೇತುವೆ ವೀಕ್ಷಣೆ ಮಾಡಿದರು.

ಪ್ರವಾಹ ಮತ್ತು ಮಳೆ ಹಾನಿಯ ಪರಿಹಾರ ಕುರಿತಂತೆ ಅಂಕೋಲಾದ ನಾಡವರ ಸಭಾಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹಾನಿಯ ವಿವರ ನೀಡಿದರು.

ಬಳಿಕ ಮಾತನಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭೂ ಕುಸಿತದಿಂದ ಹಾನಿಗೀಡಾಗಿರುವ ಕಳಚೆ ಸಂಪೂರ್ಣ ಗ್ರಾಮವನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹದಿಂದ ಹಾಳಾಗಿರುವ ಗ್ರಾಮೀಣ ರಸ್ತೆ ಪುನರ್ ನಿರ್ಮಾಣಕ್ಕೆ 100 ಕೋಟಿ, ರಾಜ್ಯ ಹೆದ್ದಾರಿ ದುರಸ್ತಿಗೆ 100 ಕೋಟಿ ಸೇರಿದಂತೆ ಒಟ್ಟು 200 ಕೋಟಿ ರೂ. ನಾಳೆಯೇ ಬಿಡುಗಡೆಗೆ ಆದೇಶ ಮಾಡುವುದಾಗಿ ಭರವಸೆ ನೀಡಿದರು.

ಅರಬೈಲ್ ಘಾಟ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ತಕ್ಷಣ ರಾಜ್ಯ ಸರಕಾರದಿಂದ 10 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದರು. ಅಲ್ಲದೇ 35 ಕೋಟಿ ರೂ. ಕೇಂದ್ರದಿಂದ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.

ಮನೆ ಕಳೆದುಕೊಂಡವರಿಗೆ 2019ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿ ನೀಡಲಾಗುತ್ತಿದ್ದ 10 ಸಾವಿರ ರೂ. ತಕ್ಷಣದ ಪರಿಹಾರವನ್ನು ಈ ಬಾರಿಯೂ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಪ್ರವಾಹ ಸಂತ್ರಸ್ತರಿಗೂ 2019 ರಲ್ಲಿ ನೀಡಿದಂತೆ ಈ ಬಾರಿಯೂ ಪರಿಹಾರ ಒದಗಿಸುವ ಭರವಸೆ ನೀಡಿದರು. ಮಾಜಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ್ ನಾಯ್ಕ, ವಿಪ ಸದಸ್ಯ ಶಾಂತಾರಾಮ ಸಿದ್ದಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ. ಎಸ್. ಪಾಟೀಲ , ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಹೆಸ್ಕಾಂ ಎಂ ಡಿ ಭಾರತಿ ಶೆಟ್ಟಿ, ಬೆಳಗಾವಿ ವಿಭಾಗೀಯ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಸೇರಿದಂತೆ ಇತರರು ಇದ್ದರು.

ವಾರಕ್ಕೊಂದು ಜಿಲ್ಲೆಗೆ ಯಡಿಯೂರಪ್ಪ ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button