Latest

ಕರ್ಮದ ಗುಹ್ಯ ಗತಿ

 ವಿಶ್ವಾಸ ಸೋಹೋನಿ
 ದೈನಂದಿನ ಜೀವನದಲ್ಲಿ ನಾವು ‘ಕರ್ಮ’ವೆಂಬ ಶಬ್ದವನ್ನು ಅತಿ ಹೆಚ್ಚಾಗಿ ಬಳಸುತ್ತೇವೆ. ಚಿಂತಕರು, ಆಧ್ಯಾತ್ಮ ಸಾಧಕರು, ವಿದ್ವಾಂಸರು ಈ ಪದವನ್ನು ಉನ್ನತ ಮಟ್ಟ್ಡದ ಚಿಂತನೆಗಾಗಿ ಬಳಸುತ್ತಾರೆ.
 “ಕರ್ಮಣ್ಯೇ ವಾಧಿಕಾರಸ್ತೇ |
ಮಾ ಫಲೇಷು ಕದಾಚನ ||
ಮಾ ಕರ್ಮಫಲ ಹೇತುರ್ಭೂ |
ಮಾ ತೇ ಸಂಗೋಸ್ಟವ್ ಕರ್ಮಣಿೆ” || (ಅ-2;ಶ್ಲೋ-47)
ನೀನು ನಿನ್ನ ಕರ್ಮವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು. ಫಲದ ಚಿಂತೆ ಮಾಡದೇ ಕರ್ಮ ಮಾಡುವುದರಲ್ಲಿ ಶ್ರದ್ಧೆಯನ್ನು ಇಟ್ಟುಕೊಳ್ಳಬೇಕು. ನಿನ್ನ ಕರ್ಮವನ್ನು ಮಾಡದೇ ಇರುವ ವಿಚಾರ ನಿನಗೆ ಬಾರದೇ ಇರಲಿ ಎಂದು ಗೀತೆಯಲ್ಲಿ ಹೇಳಲಾಗಿದೆ.

ಕರ್ಮ ಎಂದರೆ ಏನು?

ಕರ್ಮ’ ಅಥವಾ ಕ್ರಿಯೆ ಎಂದರೆ ಆತ್ಮವು ದೇಹದ ಮೂಲಕ ಮಾಡುವ ಭೌತಿಕ ಹಾಗೂ ಮಾನಸಿಕ ಪ್ರಕ್ರಿಯೆ. ವಿಚಾರ ಮಾಡುವುದು, ಮಾತನಾಡುವುದು, ಕೇಳುವುದು, ನೋಡುವುದು, ಸ್ಪರ್ಶಿಸುವುದು, ಬೋಧಿಸುವುದು, ಆಹಾರ ಸೇವಿಸುವುದು ಮುಂತಾದವುಗಳೆಲ್ಲ ಕರ್ಮಗಳೇ ಆಗಿವೆ. ಪ್ರತಿಯೊಬ್ಬರೂ ಹಗಲು ರಾತ್ರಿ ಅನೇಕ ಕೆಲಸಗಳನ್ನು ಮಾಡುತ್ತಾರೆ. ಕೆಲವು ಸಹಜ ಕ್ರಿಯೆಗಳು ನಮ್ಮ ದೇಹದಲ್ಲಿ ನಡೆಯುತ್ತವೆ. ಉದಾಹರಣೆಗೆ ಉಸಿರಾಟ, ಜೀರ್ಣಕ್ರಿಯೆ, ರಕ್ತ-ಶುದ್ಧೀಕರಣ ಮುಂತಾದವು. ಇನ್ನೂ ಕೆಲವು ಕರ್ಮಗಳನ್ನು ನಾವು ಮಾಡಬೇಕಾಗುತ್ತದೆ. ಉದಾ: ನಡೆಯುವುದು, ಊಟ ಮಾಡುವುದು, ನಿದ್ದೆ ಮಾಡುವುದು ಹಾಗೂ ಇತರೆ ಅನೇಕ ದೈನಂದಿನ ಚಟುವಟಿಕೆಗಳು ಇದರಲ್ಲಿ ಸೇರಿವೆ.
ಮೂರು ರೀತಿಯ ಕರ್ಮಗಳಿವೆ – 1. ಅಕರ್ಮ 2. ಸುಕರ್ಮ ಮತ್ತು 3. ವಿಕರ್ಮ. ಯಾವುದೇ ಕರ್ಮ ಮಾಡಿದಾಗ ಅದರ ಫಲ ಇಲ್ಲದಿದ್ದರೆ ಅದಕ್ಕೆ ಅಕರ್ಮ ಎಂದು ಕರೆಯುತ್ತಾರೆ. ಒಳ್ಳೆಯ ಫಲ ಕೊಡುವ ಕರ್ಮಕ್ಕೆ ಸುಕರ್ಮವೆಂದು ಮತ್ತು ಪಾಪದ ಖಾತೆಗೆ ಹೋಗುವ ಕರ್ಮಗಳಿಗೆ ವಿಕರ್ಮವೆಂದು ಕರೆಯಲಾಗುತ್ತದೆ.
ಬೀಜದಂತೆ ಫಲ, ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತುಗಳನ್ನು ಕರ್ಮಫಲದ ಬಗ್ಗೆ ಮಾತನಾಡುವಾಗ ಬಳಸುತ್ತಾರೆ. ಒಳ್ಳೆಯ ಕರ್ಮಕ್ಕೆ ಒಳ್ಳೆಯ ಫಲವಿದ್ದರೆ, ಕೆಟ್ಟ ಕರ್ಮಗಳಿಗೆ ಕೆಟ್ಟ ಫಲ ಸಿಗುತ್ತದೆ. ಭೌತಿಕ ವಿಶ್ವದ ಕುರಿತಂತೆ ನ್ಯೂಟನ್‌ನ ಚಲನೆಯ ನಿಯಮವು ‘ಪ್ರತಿಯೊಂದು ಕ್ರಿಯೆಗೆ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳುತ್ತದೆ. ಹಾಗೆಯೇ ಆಧ್ಯಾತ್ಮಿಕ ಜಗತ್ತಿಗೆ ಅನ್ವಯಿಸುವ ಕರ್ಮದ ನಿಯಮವೂ ಸಹ ಪ್ರತಿಯೊಂದು ಕ್ರಿಯೆಗೂ ಒಂದು ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬುದನ್ನು ಸೂಚಿಸುತ್ತದೆ. ಅಂದರೆ ನಾವು ಸುಖವನ್ನು ಕೊಟ್ಟರೆ ಸುಖವನ್ನೇ ಪಡೆಯುತ್ತೇವೆ; ದುಃಖವನ್ನು ಕೊಟ್ಟರೆ ದುಃಖವನ್ನೇ ಮರಳಿ ಪಡೆಯುತ್ತೇವೆ. ಇದನ್ನು ಕಾರಣ ಮತ್ತು ಪರಿಣಾಮಗಳ ನಿಯಮ ಎನ್ನುವರು.
ನಾವು ಕರ್ಮ-ಫಲಗಳ ಬಗ್ಗೆ ಕೆಲವು ಉದಾಹರಣೆಗಳನ್ನು ನೋಡೋಣ – ಸೇವೆ ಸಲ್ಲಿಸಲು ಆಸ್ಪತ್ರೆ ಕಟ್ಟಿಸಿದರೆ ಮುಂದಿನ ಜನ್ಮದಲ್ಲಿ ಆರೋಗ್ಯ ಭಾಗ್ಯ ಸಿಗುತ್ತದೆ; ಧನದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಶ್ರೀಮಂತನಾಗುವನು; ತಂದೆ ತಾಯಿಯ ಸೇವೆ ಮಾಡಿದರೆ ಅವರ ಕೃಪೆಗೆ ಪಾತ್ರನಾಗುವನು; ಕಳ್ಳತನ, ದರೋಡೆ ಮಾಡಿದರೆ ಜೈಲು-ಶಿಕ್ಷೆಗೆ ಗುರಿಯಾಗವನು; ಭಕ್ತಿ ಮಾಡಿದರೆ ಭಗವಂತನ ಕೃಪೆಗೆ ಪಾತ್ರನಾಗುವನು. (ತುಕಾರಾಮ, ಜ್ಞಾನೇಶ್ವರ, ಪ್ರಹ್ಲಾದ, ಬಸವಣ್ಣ, ಭಕ್ತ ಕುಂಬಾರ, ಅಕ್ಕಮಹಾದೇವಿ ಮುಂತಾದವರು).
ನಮಗೆ ಸುಖ, ಶಾಂತಿ ನೆಮ್ಮದಿ, ಪ್ರೀತಿ, ಸ್ನೇಹ ಬೇಕೆಂದರೆ ನಾವು ಅನ್ಯರಿಗೆ ಅದನ್ನು ನೀಡಬೇಕು. ಜೀವನ ಹಾಗೆಯೇ ಸುಂದರವಾಗುವುದಿಲ್ಲ. ಅದನ್ನು ನಾವೇ ನಿರ್ಮಾಣ ಮಾಡಿಕೊಳ್ಳಬೇಕು. ನಮ್ಮಲ್ಲಿ ಚೈತನ್ಯತೆ ಇರಬೇಕೆಂದರೆ ಉತ್ಸಾಹದಿಂದ ಮತ್ತು ಸ್ಫೂರ್ತಿಯಿಂದ ಕೆಲಸ-ಕಾರ್ಯಗಳನ್ನು ಮಾಡಬೇಕು. ಸ್ವ-ಪರಿರ್ವತನೆಯಿಂದ ವಿಶ್ವ-ಪರಿವರ್ತನೆಯಾಗುತ್ತದೆ. ನಾವು ಏನನ್ನು ಮಾಡುತ್ತೇವೆಯೋ ಅದೇ ನಮಗೆ ಮರಳಿ ಬರುತ್ತದೆ. ನಾವು ಸದಾ ಸಕಾರಾತ್ಮಕ ಭಾವನೆ ಇಟ್ಟುಕೊಂಡರೆ, ಪ್ರತಿಯೊಂದು ಕಾರ್ಯದಲ್ಲಿ ಸಫಲತೆ ದೊರೆಯುವುದು. ನಮ್ಮ ದೃಷ್ಟಿ ನಕಾರಾತ್ಮಕವಾಗಿದ್ದರೆ ಇನ್ನೊಬ್ಬರಲ್ಲಿ ನಮಗೆ ತಪ್ಪುಗಳೇ ಕಂಡು ಬರುತ್ತವೆ. ಭೂತ, ವರ್ತಮಾನ ಮತ್ತು ಭವಿಷ್ಯಗಳು ಪರಸ್ಪರ  ಒಂದಕ್ಕೊಂದು  ಸಂಬಂಧಿಸಿವೆ. ಹಾಗಾಗಿ ಕರ್ಮದ ಪ್ರತಿಯೊಂದು ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ಇಡಬೇಕು. ಒಂದೇ ಬಾರಿ ಎರಡು ವಿಚಾರ ಮಾಡಬಾರದು. ಯೋಗಿ ಜೀವನವನ್ನು ನಡೆಸುವುದರಿಂದ ನಾವು ವಿಕಾರಿ ಗುಣಗಳಿಂದ ಮುಕ್ತರಾಗಬಹುದು. ಜೀವನದಲ್ಲಿ ಹಳೆಯ ಘಟನೆಗಳಿಂದ ಪಾಠ ಕಲಿಯಬೇಕು. ಇತಿಹಾಸದ ಪುನರಾವರ್ತನೆ ಆಗುವುದರಿಂದ ಮುಂದೆ ಎಚ್ಚರಿಕೆ ವಹಿಸಬೇಕು. ಒಳ್ಳೆಯ ಫಲ ಪಡೆಯಲು ಪರಿಶ್ರಮ ಅತಿ ಅವಶ್ಯಕವಾಗಿದೆ. ನಿಸ್ವಾರ್ಥ ಸೇವಾ ಭಾವನೆಯನ್ನು ಇಟ್ಟುಕೊಂಡು ಮಾಡುವ ಪ್ರತಿಯೊಂದು ಕರ್ಮ ಅತಿ ಶ್ರೇಷ್ಠವಾದುದು.
 ಮಾನವ ತನ್ನ ಸ್ವಾಭಿಮಾನ ಮತ್ತು ದುರಂಹಕಾರಕ್ಕೆ ವಶನಾಗಿ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾನೆ, ಪ್ರಕೃತಿ ವಿಕೋಪಕ್ಕೆ ಕಾರಣೀಭೂತನಾಗಿದ್ದಾನೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳಾದ ಕರೋನ, ಬಿಳಿ ಫಂಗಸ್ ಮತ್ತು ಕಪ್ಪು ಫಂಗಸ್, ಡೆಲ್ಟಾ ಪ್ಲಸ್ ಇತರೆ ರೋಗಗಳು ಬರುತ್ತಿವೆ. ಇವುಗಳ ವ್ಯಕ್ತಿಯ ಕರ್ಮಫಲಗಳೇ ಆಗಿವೆ. ಆದ್ದರಿಂದ ಭಗವಂತನ ಶ್ರೀಮತದಂತೆ ನಡೆಯಬೇಕು. ಪ್ರತಿಯೊಂದು ಕರ್ಮಗಳನ್ನು ಮಾಡುವ ಮೊದಲು ವಿಚಾರ ಮಾಡಿ, ನಂತರ ಅದನ್ನು ಕಾರ್ಯರೂಪಕ್ಕೆ ತರಬೇಕು. ನಾವು ಪರಮಾತ್ಮನ ಶ್ರೇಷ್ಠ ಸಂತಾನರು, ಮಾಸ್ಟರ್ ಸರ್ವಶಕ್ತಿವಂತರಾಗಿದ್ದೇವೆ ಎಂಬುದನ್ನು ತಿಳಿದು ಕರ್ಮಮಾಡಿದರೆ ಅದು ಸುಕರ್ಮವಾಗುವುದು.
ಸರ್ವೇಜನ:  ಸುಖಿನೋಭವಂತು
(ಲೇಖಕರು -ವಿಶ್ವಾಸ. ಸೋಹೋನಿ.
 ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
7349632530; 9483937106)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button