ವಿಶ್ವಾಸ ಸೋಹೋನಿ
ಭಾರತ ದೇಶ ಹಬ್ಬ ಹರಿದಿನಗಳ ತವರೂರು. ಶ್ರಾವಣ ಮಾಸವೆಂದರೆ ಧಾರ್ಮಿಕ ಕಾರ್ಯಕ್ರಮಗಳ ಕಲಾಪ. ವಾರದಲ್ಲಿ ಪ್ರತಿದಿನ ಹಬ್ಬ. ಸೋಮವಾರ ಶಿವನ ಪೂಜೆ, ಮಂಗಳವಾರ ಆರೋಗ್ಯಕ್ಕಾಗಿ ಗೌರಿಪೂಜೆ, ಬುಧವಾರ ವಿಠ್ಠಲನ ಪೂಜೆ, ಗುರುವಾರ ಬುದ್ಧ ಹಾಗೂ ಗುರುವಿನ ಪೂಜೆ, ಶುಕ್ರವಾರ ಲಕ್ಷ್ಮಿ ಮತ್ತು ತುಳಸಿ ಪೂಜೆ, ಶನಿವಾರ ಶನಿ ಅಥವಾ ಸಂಪತ್ತಿನ ಪೂಜೆ, ರವಿವಾರ ಸೂರ್ಯನ ಪೂಜೆ ಮಾಡುವ ವಾಡಿಕೆ ಇದೆ. ನಾಗರ ಚೌತಿ ಮತ್ತು ಪಂಚಮಿ, ನೂಲಹುಣ್ಣಿಮೆ, ರಕ್ಷಾಬಂಧನ ಮುಂತಾದ ಸಾಲು ಸಾಲು ಹಬ್ಬಗಳ ಮಾಸವೇ ಶ್ರಾವಣ ಮಾಸ. ಇದು ಚಾರ್ತುಮಾಸದ ಮೊದಲನೆಯ ಮಾಸವೂ ಹೌದು. ಈ ಮಾಸ ಹಿಂದೂಗಳಿಗೆ ಅತಿ ಪವಿತ್ರವಾಗಿರುತ್ತದೆ. ಅನೇಕರು ಈ ತಿಂಗಳಲ್ಲಿ ಉಪವಾಸ, ವ್ರತ-ನೇಮ ಮತ್ತು ನಿಯಮಗಳನ್ನು ಪಾಲಿಸುತ್ತಾರೆ. ಈ ಸಮಯದಲ್ಲಿ ಪಂಚ-ಪೀಠಾಧೀಶರು ಧಾರ್ಮಿಕ ಪ್ರವಾಸ ಕೈಗೊಂಡು ಪ್ರವಚನ ನೀಡುತ್ತಾರೆ. ಅನೇಕರು ಈ ಮಾಸದಂದು ಮಾಂಸಹಾರವನ್ನು ತ್ಯಜಿಸುತ್ತಾರೆ. ಜೈನ ಮುನಿಗಳು ಪ್ರವಚನ ನೀಡುತ್ತಾರೆ. ಪೌರಾಣಿಕವಾಗಿ ಪಾರ್ವತಿಯು ಮಹಾದೇವನಿಗೆ ವರಿಸಲು ಉಪವಾಸ ಮಾಡಿದ ಮಾಸವೇ ಶ್ರಾವಣ.
ಶ್ರವಣಕುಮಾರನು ತನ್ನ ತಂದೆ-ತಾಯಿಯ ಸೇವೆಯನ್ನು ಮಾಡಿದ ಪ್ರತೀಕವೇ ಶ್ರಾವಣ ಮಾಸ. ಶ್ರವಣ ಒಬ್ಬ ಬಡ ಬಾಲಕ. ಅವನು ಕುರುಡರಾಗಿದ್ದ ತನ್ನ ತಂದೆ-ತಾಯಿಯರ ಸೇವೆಯನ್ನು ಬಹಳ ಶ್ರದ್ಧಾ-ಭಕ್ತಿಯಿಂದ ಮಾಡುತ್ತಿದ್ದ. ಕಾಲಕ್ರಮೇಣ ವೃದ್ಧ ದಂಪತಿಗಳಿಗೆ ತೀರ್ಥಯಾತ್ರೆ ಮಾಡಬೇಕೆಂಬ ಆಸೆಯುಂಟಾಯಿತು. ಆದರೆ ಬಡತನದ ಕಾರಣ ಶ್ರವಣಕುಮಾರನಿಗೆ ಚಿಂತೆ ಯುಂಟಾಯಿತು. ಕೊನೆಗೆ ತಾನೇ ತಂದೆ-ತಾಯಿಯರನ್ನು ಹೊತ್ತುಕೊಂಡು ಕಾಲುನಡುಗೆಯಲ್ಲಿ ತೀರ್ಥಯಾತ್ರೆಗೆ ಹೋಗಬೇಕೆಂದು ಆಲೋಚನೆ ಮಾಡುತ್ತಾನೆ. ಎರಡು ಬುಟ್ಟಿಗಳನ್ನು ತೆಗೆದುಕೊಂಡ ಒಂದು ಗಳದ ಎರಡು ತುದಿಯಲ್ಲಿ ಅವುಗಳನ್ನು ಕಟ್ಟಿ, ಅವುಗಳಲ್ಲಿ ತಂದೆ-ತಾಯಿಯರನ್ನು ಕೂರಿಸಿಕೊಂಡು ಅದನ್ನು ಹೆಗಲಿಗೆ ಹಾಕಿಕೊಂಡು ಪ್ರಯಾಣ ಪ್ರಾರಂಭಿಸುತ್ತಾನೆ. ಸ್ವಲ್ಪ ದಿನದ ಯಾತ್ರೆಯ ನಂತರ ಒಂದು ದಿನ ಬಿಸಿಲಿನ ಝಳಕ್ಕೆ ತಂದೆ ತಾಯಿಯವರಿಗೆ ಬಾಯಾರಿಕೆ ಆಗುತ್ತದೆ. ಶ್ರವಣ ಅವರನ್ನು ಒಂದು ವಿಶಾಲವಾದ ಮರದ ಕೆಳಗಡೆ ಕೂರಿಸಿ ನೀರು ತರಲು ಹೋಗುತ್ತಾನೆ. ನದಿಯ ನೀರನ್ನು ತುಂಬುವಾಗ ಗುಳುಗುಳು ಶಬ್ದ ಉಂಟಾಗುತ್ತದೆ. ಅದೇ ಸಮಯದಲ್ಲಿ ಅಯೋಧ್ಯೆಯ ರಾಜ ದಶರಥನು ಬೇಟೆಯಾಡಲು ಬಂದಿರುತ್ತಾನೆ. ಅವನು ನೀರಿನ ಧ್ವನಿ ಕೇಳಿ ಯಾವುದೋ ಪ್ರಾಣಿ ನೀರು ಕುಡಿಯಲು ಬಂದಿರಬಹುದುದೆಂದು ಭಾವಿಸಿ, ಶಬ್ದ ಬಂದಿರುವ ಕಡೆ ಬಾಣವನ್ನು ಹೊಡೆಯುತ್ತಾನೆ. ಆ ಬಾಣ ಶ್ರವಣನಿಗೆ ನಾಟುತ್ತದೆ. ರಾಜ ಅಲ್ಲಿಗೆ ಬಂದು ನೋಡಿದಾಗ ಅತ್ಯಂತ ದು:ಖಿಯಾಗುತ್ತಾನೆ. ಅವನಿಗೆೆ ತಾನು ಮಾಡಿರುವ ತಪ್ಪಿನ ಅರಿವಾಗುತ್ತದೆ. ಶ್ರವಣ ತಾನು ತಂದೆ ತಾಯಿಗೆ ನೀರು ತರಲು ಬಂದಿರುವುದಾಗಿ ತಿಳಿಸುತ್ತಾನೆ. ಅವರಿಗೆ ನೀರು ಕುಡಿಸಲು ಹೇಳಿ ಪ್ರಾಣ ಬಿಡುತ್ತಾನೆ. ದಶರಥ ವೃದ್ಧ ತಂದೆ ತಾಯಿಗೆ ಆಗಿರುವ ಘಟನೆಯನ್ನು ವಿವರಿಸಿ, ನೀರು ಕುಡಿಸಿ, ಕ್ಷಮಾಯಾಚನೆ ಮಾಡುತ್ತಾನೆ. ‘ನಮಗೆ ಶ್ರವಣನೊಬ್ಬನೇ ಆಧಾರವಾಗಿದ್ದು, ಅವನೇ ಹೋದ ನಂತರ ನಮಗೆ ಯಾರು ಇಲ್ಲವೆಂದು ಹೇಳಿ, ‘ನೀನೂ ಸಹ ವೃದ್ಧಾಪ್ಯದಲ್ಲಿ ಪುತ್ರಶೋಕದಿಂದ ಸಾಯಿ’ ಎಂದು ಶಾಪ ನೀಡಿ ಪ್ರಾಣ ಬಿಡುತ್ತಾರೆ. ಈ ಕಥೆಯಿಂದ ನಾವುಗಳು ಕಲಿಯಬೇಕಾಗಿರುವ ವಿಚಾರವೇನೆಂದರೆ ಕೋಪವೆಂಬದು ಶಾಪಕ್ಕೆ ಮೂಲ, ಹಾಗಾಗಿ ಕೋಪ ಮಾಡಬಾರದು. ಒಂದು ಕ್ಷಣದ ದುಡುಕು ದು:ಖಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಿಧಾನವಾಗಿ ಯೋಚಿಸಬೇಕು.
ಬಾಪು ಗಾಂಧೀಜಿಯವರು ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಮಾತನಾಡಬಾರದು ಎಂಬ ಸಂದೇಶವನ್ನು ನೀಡಿದ್ದಾರೆ. ಆದರೆ ವಿಶ್ವದ ಬಾಪೂಜಿಯಾದ ಭಗವಂತನ ಆದೇಶದಂತೆ ಕೆಟ್ಟದನ್ನು ಯೋಚಿಸಬಾರದು. ಸದಾ ಶ್ರೇಷ್ಠ ಚಿಂತನೆಯಿಂದ, ನೋಡುವುದು, ಮಾಡುವುದು ಮತ್ತು ಕೇಳುವುದನ್ನು ಸರಿಪಡಿಸಬಹುದು. ‘ಪರಮಾತ್ಮನ ಅನನ್ಯ ಮಗುವಾದ ನಾನು ಈ ಜಗತ್ತೆಂಬ ನಾಟಕದಲ್ಲಿ ಶ್ರೇಷ್ಠ ಪಾತ್ರಧಾರಿಯಾಗಿದ್ದೇನೆ. ಪರಮಾತ್ಮ ಮತ್ತು ಶ್ರೇಷ್ಠ ಕರ್ಮ ನನ್ನ ಜೊತೆಗಾರ ಆಗಿದ್ದಾರೆ’ ಎಂಬ ಶ್ರೇಷ್ಠ ಚಿಂತನೆ ಸದಾ ಇರಲಿ.
ಅರಳಿದರೆ ಹೂವಿನಂತೆ ಅರಳಬೇಕು, ಬಾಗಿದರೆ ಬಾಳೆಯಂತೆ ಬಾಗಬೇಕು, ಮಾಗಿದರೆ ಹಣ್ಣಿ ನಂತೆ ಮಾಗಬೇಕು, ಹಾಡಿದರೆ ಕೇಳುಗರು ತಲೆದೂಗುವಂತಿರಬೇಕು, ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಆಹುದಹುದೆನ್ನಬೇಕು’ ಎಂದು ಬಸವಣ್ಣನವರು ಹೇಳಿದ್ದಾರೆ, ‘ಮಾತೇ ಮುತ್ತು, ಮಾತೇ ಮೃತ್ಯು’, ‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆಗಳು ಪ್ರಸಿದ್ಧವಾಗಿದೆ.’
ಹಾಗಾದರೆ ಬನ್ನಿ, ಮೇಲೆ ಕಾಣಿಸಿದ ಹಲವು ಸಲಹೆಯೊಂದಿಗೆ, ಶ್ರಾವಣ ಮಾಸ ಶ್ರೇಷ್ಠರಾಗುವ ಉದ್ದೇಶವನ್ನು ಇಟ್ಟುಕೊಂಡು ಪ್ರಾರಂಭಿಸೋಣ. ನಮ್ಮ ಜೀವನದಲ್ಲಿ ಇರುವ ಚಿಂತೆಗಳನ್ನು ಬಿಟ್ಟು, ಭಗವಂತನ ಚಿಂತನೆ ಮಾಡೋಣ.
ಓಂ ಶಾಂತಿ.
(ಲೇಖಕರು-ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್)
ಬೊಮ್ಮಾಯಿ ಆಫರ್ ತಿರಸ್ಕರಿಸಿದ ಯಡಿಯೂರಪ್ಪ; ಸ್ವಾಗತಿಸಿದ ಸಿದ್ದರಾಮಯ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ