ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಕ್ಷ ಯಾವುದೇ ಇರಲಿ, ಸರಕಾರ ಯಾವುದೇ ಬರಲಿ. ಆದರೆ ಗೋಕಾಕದ ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಸಂಪುಟದಲ್ಲಿರಲೇಬೇಕು. ಇದು ಕಳೆದ ಸುಮಾರು 2 ದಶಕದಿಂದಲೂ ನಡೆದು ಬಂದ ಪದ್ಧತಿ.
ಆದರೆ 2004ರಿಂದೀಚೆಗೆ ಇದೇ ಮೊದಲ ಬಾರಿಗೆ ಕುಟುಂಬದ ಮೂವರು ಶಾಸಕರಿದ್ದರೂ, ಬಿಜೆಪಿಯವರೇ ಇಬ್ಬರಿದ್ದರೂ ಯಾರೊಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳದೆ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ಜಾರಕಿಹೊಳಿ ಕುಟುಂಬವನ್ನು ಹೊರಗಿಟ್ಟು ಸರಕಾರ ರಚಿಸುವ ಸಾಹಸಕ್ಕೆ ಬಿಜೆಪಿ ಹೈಕಮಾಂಡ್ ಕೈಹಾಕಿದೆ.
2004ರಿಂದ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರು ಎನ್ನುವಂತೆ ಜಾರಕಿಹೊಳಿ ಕುಟುಂಬದ ಮೂವರು ಸಹೋದರರಲ್ಲಿ ಒಬ್ಬರಾದರೂ ಸಚಿವಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದರು. ಅವರಾಗಿಯೇ ರಾಜಿನಾಮೆ ನೀಡಿ ಹೊರಹೋಗಿದ್ದಿದೆ, ಆದರೆ ಅವರನ್ನು ಹೊರಗಿಟ್ಟು ಸಚಿವಸಂಪುಟ ರಚಿಸಿದ ಉದಾಹರಣೆ ಇರಲಿಲ್ಲ.
2003ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯ ಧರ್ಮಸಿಂಗ್ ಸರಕಾರದಲ್ಲಿ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಆಗ ಸರಿಯಾದ ಖಾತೆ ಸಿಗಲಿಲ್ಲ ಎಂದು ಅಸಮಾಧಾನಗೊಂಡು 2005ರಲ್ಲಿ ರಾಜಿನಾಮೆ ನೀಡಿದ್ದರು.
2006ರಲ್ಲಿ ಜೆಡಿಎಸ್ – ಬಿಜೆಪಿ ಸರಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಮಂತ್ರಿಯಾದರು. 2008ರಲ್ಲಿ ಆಪರೇಶನ್ ಕಮಲದ ಮೂಲಕ ಜೆಡಿಎಸ್ ನಿಂದ ಬಿಜೆಪಿ ಸೇರಿ ಬಾಲಚಂದ್ರ ಜಾರಕಿಹೊಳಿ ಮತ್ತೆ ಮಂತ್ರಿಯಾದರು.
2013ರಲ್ಲಿ ಸಿದ್ದರಾಮಯ್ಯ ಸರಕಾರದ ಮೊದಲರ್ಧದಲ್ಲಿ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಖಾತೆ ಹಂಚಿಕೆಯಲ್ಲಿ ಅಸಮಾಧಾನಗೊಂಡು ಅವರು ರಾಜಿನಾಮೆ ನೀಡಿದರು. ನಂತರ ರಮೇಶ ಜಾರಕಿಹೊಳಿ ಸಂಪುಟ ಸೇರಿದರು.
2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮೊದಲು ರಮೇಶ ಜಾರಕಿಹೊಳಿ, ನಂತರ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಸ್ವಲ್ಪ ದಿನದಲ್ಲೇ ರಮೇಶ್ ಬಂಡಾಯವೆದ್ದು ಸರಕಾರವನ್ನೇ ಕೆಡವಿದರು.
ನಂತರ ಬಂದ ಬಿಜೆಪಿ ಸರಕಾರದಲ್ಲಿ ಕಾನೂನು ತೊಡಕುಗಳನ್ನೆಲ್ಲ ನಿವಾರಿಸಿಕೊಂಡು ರಮೇಶ ಜಾರಕಿಹೊಳಿ ಸಚಿವರಾದರು. ನಂತರದಲ್ಲಿ ಸಿಡಿ ಹಗರಣದಿಂದಾಗಿ ರಮೇಶ ಜಾರಕಿಹೊಳಿ ರಾಜಿನಾಮೆ ನೀಡಬೇಕಾಯಿತು.
ಈ ಬಾರಿ ಸಂಪುಟ ರಚನೆಯ ವೇಳೆ ರಮೇಶ ಜಾರಕಿಹೊಳಿ ಮೇಲಿರುವ ಆರೋಪಗಳು ಖುಲಾಸೆಯಾಗದ ಹಿನ್ನೆಲೆಯಲ್ಲಿ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರನ್ನುಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅವರನ್ನೂ ಸೇರಿಸಿಕೊಳ್ಳಲಿಲ್ಲ. ಯಾವ ಕಾರಣಕ್ಕಾಗಿ ಅವರನ್ನು ಹೊರಗಿಡಲಾಗಿದೆ ಎನ್ನುವುದು ಬಹಿರಂಗವಾಗಿಲ್ಲ.
ಆದರೆ ಇದೇ ಮೊದಲ ಬಾರಿಗೆ ಕುಟುಂಬದ ಯಾರೊಬ್ಬರನ್ನೂ ಸೇರಿಸಿಕೊಳ್ಳದೆ ಸಂಪುಟ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಬೊಮ್ಮಾಯಿ ಸರಕಾರಕ್ಕೆ ಹೊಸ ತಲೆನೋವು ತಂದೊಡ್ಡಲಿದೆಯೇ ಕಾದು ನೋಡಬೇಕಿದೆ.
ಬೊಮ್ಮಾಯಿ ಸಂಪುಟದ ನೂತನ ಸಚಿವರ ಪಟ್ಟಿ: ಕತ್ತಿ, ಜೊಲ್ಲೆಗೂ ಸ್ಥಾನ
ಬಸವರಾಜ ಬೊಮ್ಮಾಯಿಗೆ ಶುಭ ಕೋರಿದ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ